ಶಾಸಕ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ಮತ್ತು ಸೋನಲ್ ಮೊಂಥೆರೋ ಅಭಿನಯದ ಬನಾರಸ್ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಚಿತ್ರದ ಪ್ರಚಾರ ಕಾರ್ಯ ಜೋರಾಗಿಯೇ ನಡೆಯುತ್ತಿದೆ. ಕರ್ನಾಟಕದಲ್ಲಿ ಈ ಸಿನಿಮಾ ವಿತರಣಾ ಹಕ್ಕನ್ನು ಖ್ಯಾತ ವಿತರಣಾ ಸಂಸ್ಥೆ ಡಿ ಬೀಟ್ಸ್ ಪಡೆದುಕೊಂಡಿದೆ.
ಹೌದು, ಝೈದ್ ಖಾನ್ ಮೊದಲ ಸಿನಿಮಾ ದೊಡ್ಡ ಮೊತ್ತಕ್ಕೆ ಸೇಲ್ ಆಗಿರೋದು ಬನಾರಸ್ ಚಿತ್ರ ತಂಡದ ಆತ್ಮ ವಿಶ್ವಾಸ ಹೆಚ್ಚಿಸಿದೆ. ಬಿ ಸುರೇಶ್ ಸಾರಥ್ಯದ ಡಿ ಬೀಟ್ಸ್ ಗುಣಮಟ್ಟ ಕಾಯ್ದುಕೊಂಡಿರುವ ವಿತರಣಾ ಸಂಸ್ಥೆ. ಈ ಸಂಸ್ಥೆಯಿಂದ ಸಿನಿಮಾ ಬಿಡುಗಡೆಗೊಳ್ಳುವುದು ಪ್ರತಿಷ್ಠೆಯ ಸಂಗತಿ. ಮೂಲಗಳ ಪ್ರಕಾರ ಕರ್ನಾಟಕದಲ್ಲಿ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲೆಯಾಳಂ ಸೇರಿ ಬರೋಬ್ಬರಿ 10 ಕೋಟಿ ರೂಪಾಯಿಗೆ ಬನಾರಸ್ ಸಿನಿಮಾದ ವಿತರಣೆ ಹಕ್ಕು ಮಾರಾಟ ಆಗಿದೆ ಎನ್ನಲಾಗಿದೆ.
ಮತ್ತೊಂದೆಡೆ ಟಿವಿ ಹಾಗೂ ಡಿಜಿಟಲ್ ರೈಟ್ಸ್ ಕೂಡ 15 ಕೋಟಿ ರೂಪಾಯಿಗೆ ಮಾತುಕತೆ ನಡೆಯುತ್ತಿದೆ ಅಂತೆ. ಈ ಮೂಲಕ ಯುವ ನಟ ಝೈದ್ ಖಾನ್ ಚೊಚ್ಚಲ ಸಿನಿಮಾ ಭರ್ಜರಿ ಯಶಸ್ಸು ಕಾಣೋ ಸೂಚನೆ ಕೊಟ್ಟಿದೆ. ಈ ವಿದ್ಯಮಾನದಿಂದಾಗಿ ನಿರ್ಮಾಪಕ ತಿಲಕ್ ರಾಜ್ ಬಲ್ಲಾಳ್ಗೂ ವಿಶ್ವಾಸ ಹೆಚ್ಚಿದೆ.
ಇದನ್ನೂ ಓದಿ: ಬನಾರಸ್ ಸಿನಿಮಾ ವಿತರಣಾ ಹಕ್ಕು ಪಡೆದ ಕೇರಳದ ಮಲಕುಪ್ಪಡಮ್ ಫಿಲಂಸ್
ಬನಾರಸ್ ಬಿಡುಗಡೆಗೆ ಇನ್ನು ಬಾಕಿ ಉಳಿದಿರೋದು ಕೆಲವೇ ದಿನಗಳು ಮಾತ್ರ. ಈ ಸಂಬಂಧವಾಗಿ ಝೈದ್ ಖಾನ್ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದಾರೆ. ನಾಯಕಿ ಸೋನಲ್ ಮೊಂಥೆರೋ ಕೂಡಾ ಅದಕ್ಕೆ ಸಾಥ್ ಕೊಟ್ಟಿದ್ದಾರೆ. ಇಡೀ ಚಿತ್ರ ತಂಡ ನಾನಾ ಜವಾಬ್ದಾರಿ ಹೊತ್ತು ಪ್ರಚಾರ ಕಾರ್ಯ ಮಾಡುತ್ತಿದೆ.