ಬೆಂಗಳೂರು: ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ನಂಬಿಸಿ 75 ಲಕ್ಷ ರೂಪಾಯಿ ಸಾಲ ಪಡೆದು ವಂಚನೆ ಮಾಡಿದ್ದಲ್ಲದೆ, ಮದುವೆಯಾಗುವುದಾಗಿ ಪುಸಲಾಯಿಸಿ ತಮ್ಮ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿ ನಿರ್ಮಾಪಕರ ವಿರುದ್ಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆ ನೀಡಿದ ದೂರಿನ ಅನ್ವಯ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ದಿ ಕಲರ್ ಆಫ್ ಟೊಮೆಟೊ ಹಾಗೂ 5ಡಿ ಚಿತ್ರದ ನಿರ್ಮಾಪಕ ಕುಮಾರ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. 35 ವರ್ಷದ ಮಹಿಳೆಯು ದೂರು ನೀಡಿದ್ದು, ಕೆಲ ವರ್ಷಗಳ ಹಿಂದೆ ಮಹಿಳೆಯ ಪತಿ ನಿಧನವಾಗಿದ್ದಾರೆ. ಈಕೆಗೆ ಓರ್ವ ಮಗಳಿದ್ದಾಳೆ. 2020ರಲ್ಲಿ ನಿರ್ದೇಶಕ ಕುಮಾರ್ ಮಹಿಳೆಗೆ ಪರಿಚಿತಗೊಂಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ವಿವರ: ''ಮದುವೆಯಾಗುವುದಾಗಿ ತನ್ನನ್ನು ನಂಬಿಸಿದ್ದ ಕುಮಾರ್, ಆ ನಂತರ ಚಿತ್ರಗಳಲ್ಲಿ ನಟಿಸಲು ಅವಕಾಶ ಕೊಡುವುದಾಗಿ ಭರವಸೆ ನೀಡಿದ್ದ. ಇದೇ ವೇಳೆ ದಿ ಕಲರ್ ಆಫ್ ಟೊಮೆಟೊ ಹಾಗೂ 5ಡಿ ಚಿತ್ರಗಳ ನಿರ್ಮಾಣ ಮಾಡುತ್ತಿದ್ದೇನೆ. ಹಣ ನೀಡಿದರೆ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡುವುದಾಗಿ ಹೇಳಿ ಹಂತ-ಹಂತವಾಗಿ 75 ಲಕ್ಷ ಪಡೆದಿದ್ದಾರೆ. ಬಿಡುಗಡೆ ಬಳಿಕ ಚಿತ್ರಗಳು ಸೂಪರ್ ಹಿಟ್ ಆಗಲಿದ್ದು, ನೀಡಿದ ಸಾಲಕ್ಕೆ ದುಪ್ಪಟ್ಟು (1.5 ಕೋಟಿ ರೂಪಾಯಿ) ಹಣ ನೀಡುವುದಾಗಿ ಭರವಸೆ ನೀಡಿದ್ದರು. ಹಲವು ತಿಂಗಳಾದರೂ ಹಣ ವಾಪಸ್ ನೀಡಿರಲಿಲ್ಲ. ದುಡ್ಡು ಕೇಳಲು ಹೋದರೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಾರೆ'' ಎಂದು ನೊಂದ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮದುವೆಯಾಗುವುದಾಗಿ ನಂಬಿಸಿ ಬಾಲಕಿ ಮೇಲೆ ಅತ್ಯಾಚಾರ; ಗರ್ಭಿಣಿಯೆಂದು ತಿಳಿದು ಆರೋಪಿ ಎಸ್ಕೇಪ್
''ಬೆದರಿಕೆ ಹಿನ್ನೆಲೆಯಲ್ಲಿ ಯಾರಿಗೂ ಈ ಬಗ್ಗೆ ತಿಳಿಸಿರಲಿಲ್ಲ. ಆದರೆ ಈ ಮನೋಬಲವನ್ನೇ ದುರುಪಯೋಗ ಮಾಡಿಕೊಂಡು ಹಲವು ಸಲ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಜೊತೆಗೆ, ಕಳೆದ ತಿಂಗಳು ಹಣದ ಬದಲಾಗಿ ಚೆಕ್ ನೀಡುವುದಾಗಿ ನಂಬಿಸಿ ತನ್ನ ಕಚೇರಿಗೆ ಕರೆಯಿಸಿಕೊಂಡಿದ್ದ ಕುಮಾರ್, ಅವಾಚ್ಯವಾಗಿ ನಿಂದಿಸಿದ್ದಾರೆ. ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಹಲ್ಲೆ ಕೂಡಾ ನಡೆಸಿದ್ದಾರೆ'' ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ. ಮಹಿಳೆಯ ದೂರಿನಂತೆ ನಿರ್ಮಾಪಕ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮಾದಕ ದ್ರವ್ಯ ಮಾರಾಟ ಯತ್ನ; ಹೈದರಾಬಾದ್‌ನಲ್ಲಿ ತೆಲುಗು ಚಿತ್ರ ನಿರ್ಮಾಪಕ ಅರೆಸ್ಟ್