ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿನ್ನೆ ರಾತ್ರಿ ಒರಾಯನ್ ಮಾಲ್ನ ಪಿವಿಆರ್ ಥಿಯೇಟರ್ನಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಡೊಳ್ಳು ಸಿನಿಮಾ ವೀಕ್ಷಿಸಿದರು. ಡೊಳ್ಳು ಬಾರಿಸುವ ಕಲೆಯನ್ನು ಪ್ರಧಾನವಾಗಿರಿಸಿಕೊಂಡು ನಿರ್ಮಿಸಿದ ಈ ಸಿನಿಮಾ ಬಗ್ಗೆ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ನಿರ್ದೇಶಕ ಸಾಗರ್ ಪುರಾಣಿಕ್ ಹಾಗೂ ನಿರ್ಮಾಪಕರಾದ ಪವನ್ ಒಡೆಯರ್, ಅಪೇಕ್ಷಾ ಒಡೆಯರ್ ಅವರನ್ನು ಅಭಿನಂದಿಸಿದರು. ಈ ವೇಳೆ, ನಾಯಕ ನಟ ಕಾರ್ತಿಕ್ ಮಹೇಶ್, ನಾಯಕಿ ನಿಧಿ ಹೆಗಡೆ ಹಾಗೂ ಮಾಜಿ ಸಚಿವ ಜಮೀರ್ ಅಹಮದ್ ಹಾಜರಿದ್ದರು.
ಆಗಾಗ ತಾವು ಭಾಗವಹಿಸುವ ಸಮಾರಂಭದಲ್ಲಿ ಡೊಳ್ಳು ಬಾರಿಸುವ ಮೂಲಕ ಗಮನ ಸೆಳೆಯುವ ಸಿದ್ದರಾಮಯ್ಯ ಜಾನಪದ ಕಲೆಗೆ ಸದಾ ಒತ್ತು ಕೊಡುತ್ತಾ ಬಂದಿದ್ದಾರೆ. ಇತ್ತೀಚೆಗೆ ಯಾವುದೇ ಚಿತ್ರ ವೀಕ್ಷಣೆಗೆ ತೆರಳದ ಸಿದ್ದರಾಮಯ್ಯ ವಿಶೇಷ ಕಾಳಜಿ ವಹಿಸಿ ಡೊಳ್ಳು ಸಿನಿಮಾ ವೀಕ್ಷಣೆಗೆ ತೆರಳಿದ್ದು ಗಮನ ಸೆಳೆದಿದೆ. ಚಿತ್ರದ ಬಗೆಗೂ ಅವರು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ತೆರೆಕಂಡ ಗಾಳಿಪಟ 2 ಚಿತ್ರವನ್ನ ವೀಕ್ಷಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕರು ಸಚಿವ ಬಿಸಿ ಪಾಟೀಲ್ರನ್ನು ತೀವ್ರ ಟೀಕೆಗೆ ಒಳಪಡಿಸಿದ್ದರು. ರಾಜ್ಯದ ನೆರೆ ಹಾಗೂ ಇತರ ಸಂಕಷ್ಟದ ಪರಿಸ್ಥಿತಿಯನ್ನು ಕಡೆಗಣಿಸಿ ಸಿನಿಮಾ ವೀಕ್ಷಣೆಗೆ ತೆರಳಿದ್ದಾರೆ ಎಂಬ ಆರೋಪ ಕಾಂಗ್ರೆಸ್ ಮಾಡಿತ್ತು. ಇದೀಗ ಕಲಾತ್ಮಕ ಚಿತ್ರವೊಂದನ್ನ ವೀಕ್ಷಿಸಲು ಸಿದ್ಧರಾಮಯ್ಯ ತೆರಳಿದ್ದು, ಇದಕ್ಕೆ ಯಾವ ರೀತಿಯ ಪ್ರತಿಕ್ರಿಯೆಗಳು ಬಿಜೆಪಿ ಪಾಳಯದಿಂದ ವ್ಯಕ್ತವಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಓದಿ: ನಾನು ಮಾಂಸ ತಿನ್ನುತ್ತೇನೆ, ಅದು ನನ್ನ ಹ್ಯಾಬಿಟ್, ನೀವು ತಿನ್ನಲ್ವೇನಪ್ಪ... : ಸಿದ್ದರಾಮಯ್ಯ ಪ್ರಶ್ನೆ