ಬೆಂಗಳೂರು: ಕನ್ನಡ ಚಿತ್ರರಂಗದ ನಗು ಮುಖದ ರಾಜಕುಮಾರ ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಕನಸಿನ ಚಿತ್ರ ಗಂಧದ ಗುಡಿ ಪ್ರೀ ರಿಲೀಸ್ ಇವೆಂಟ್ ಶುಕ್ರವಾರ ಸಂಜೆ ಬೆಂಗಳೂರಿನ ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ದಕ್ಷಿಣ ಭಾರತದ ಸಿನಿಮಾ ತಾರೆಗಳು ಸಾಕ್ಷಿಯಾದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡಾ. ರಾಜ್‍ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ಬಗ್ಗೆ ಗುಣಗಾನ ಮಾಡಿದರು. ಅಪ್ಪು ಅವರಂತೆ ಈ ಸಿನಿಮಾ ಮುಂದಿನ ಪೀಳಿಗೆಗೆ ಒಂದು ದಂತಕಥೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಡಿಸಿದರು.
ಕನ್ನಡ ನಾಡು ಮತ್ತು ಗಂಧದ ಗುಡಿಯನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಅಂತಹ ವಿಚಾರದೊಂದಿಗೆ, ಕಾಡು, ನಿಸರ್ಗ, ಪ್ರಾಣಿಗಳನ್ನು ಇಟ್ಟುಕೊಂಡು ಅಪ್ಪು ಮಾಡಿದ ಈ ಸಿನಿಮಾ ಅತ್ಯಂತ ಪ್ರಸ್ತುತವಾಗಿದೆ. ನಿಸರ್ಗವನ್ನು ಮುಂದಿನ ಜನಾಂಗಕ್ಕೆ ಬಿಟ್ಟು ಹೋಗುವ ಅವಶ್ಯಕತೆ ಇದೆ. ಇಲ್ಲವಾದರೆ ಮುಂದಿನ ಜನಾಂಗದ ಭವಿಷ್ಯದಲ್ಲಿ ಕಳ್ಳತನ ಮಾಡಿದಂತೆ ಎಂದು ಅಭಿಪ್ರಾಯಪಟ್ಟರು.
ಅಪ್ಪು ನಮ್ಮ ಜೊತೆಗೆ ಇದ್ದಾರೆ. ಪ್ರತಿ ಕ್ಷಣ ನಮ್ಮನ್ನು ನೋಡುತ್ತಿರುತ್ತಾರೆ. ಇರುವಾಗ ಹೊಗಳುವುದು ಸಹಜ. ಇಲ್ಲದೇ ಇರುವಾಗ ನೆನಪು ಮಾಡಿಕೊಳ್ಳುವುದು ದೈವದ ಆಶೀರ್ವಾದ ಇದ್ದರೆ ಮಾತ್ರ ಸಾಧ್ಯ. ಅಂತಹ ಆಶೀರ್ವಾದ ಅಪ್ಪು ಮೇಲಿತ್ತು ಎಂದು ಮುಖ್ಯಮಂತ್ರಿ ಬೊಮ್ಮಾಯಿ ನುಡಿದರು.
ರಾಜ್ ಕುಮಾರ್ ಅವರ ಎಲ್ಲ ಗುಣಧರ್ಮಗಳನ್ನು ನೂರಕ್ಕೆ ನೂರರಷ್ಟು ಹೊಂದಿದವರು ಪುನೀತ್ ರಾಜ್‍ಕುಮಾರ್. ಎಷ್ಟೇ ದೊಡ್ಡ ಸ್ಟಾರ್ ಆದರೂ ನಯ, ವಿನಯವನ್ನು ಒಂದು ಕ್ಷಣವೂ ಮರೆತಿರಲಿಲ್ಲ. ಅಪ್ಪು ಅತ್ಯಂತ ಸಣ್ಣ ವಯಸ್ಸಿನಲ್ಲೇ ಬಾಲನಟನಾಗಿ ದೊಡ್ಡ ಹೆಸರು ಮಾಡಿದಾಗ ಸಂತೋಷವಾಗಿತ್ತು.
ಆದರೆ ಸಣ್ಣ ವಯಸ್ಸಿನಲ್ಲೇ ನಮ್ಮನ್ನು ಬಿಟ್ಟು ಹೋದಾಗ ದುಃಖ ತಡೆಯಲು ಆಗಲಿಲ್ಲ. ಶ್ರೇಷ್ಠ ವ್ಯಕ್ತಿಗಳು ಅಲ್ಪಾಯುಗಳು. ಅಮೂಲ್ಯವಾದುದು ಸ್ವಲ್ಪವೇ ಇರುತ್ತದೆ (Anything precious is very little) ಎಂದರು. ಇನ್ನು ಅಪ್ಪು ನೆನಪನ್ನು ಇಷ್ಟು ವಿಜೃಂಭಣೆಯಿಂದ ಆಯೋಜಿಸಿರುವ ಡಾ. ರಾಜ್ ಕುಮಾರ್ ಕುಟುಂಬದ ಶ್ರೀಮಂತಿಕೆಯನ್ನು ಕೊಂಡಾಡಿದ ಮುಖ್ಯಮಂತ್ರಿಗಳು ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರನ್ನು ಅಭಿನಂದಿಸಿದರು.
ಇದನ್ನೂ ಓದಿ: ಅಪ್ಪು ಅವರದ್ದು ನಗುವಿನ ಮುಖ.. ಪುನೀತ್ ಇಲ್ಲ ಅನ್ನೋದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ: ಬಾಲಿವುಡ್ ನಟ ಅಮಿತಾಬ್ ಬಚ್ಚನ್
ಇದೇ ನವೆಂಬರ್ 1 ರಂದು ಪುನೀತ್ ರಾಜ್‍ಕುಮಾರ್ ಅವರಿಗೆ ಕರ್ನಾಟಕದ ಅತ್ಯುನ್ನತ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ಪ್ರದಾನ ಮಾಡಲಾಗುವುದು. ಅಭಿಮಾನಿಗಳು, ನಾಡಿನ ಜನತೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದರು. ಅಪ್ಪು ಮೇಲಿನ ಅಭಿಮಾನದ ಕುರಿತು ತಮ್ಮ ಅನುಭವ ಹಂಚಿಕೊಂಡ ಮುಖ್ಯಮಂತ್ರಿಗಳು ತಮ್ಮ ಔರಾದ್ ಪ್ರವಾಸ ಸಂದರ್ಭದಲ್ಲಿ ಯುವಕರು ಅಪ್ಪು ಭಾವಚಿತ್ರದೊಂದಿಗೆ ಬಂದು ತಮ್ಮೊಡನೆ ಚಿತ್ರ ತೆಗೆಸಿಕೊಳ್ಳಲು ಮುಂದಾಗಿದ್ದನ್ನು ಸ್ಮರಿಸಿದರು.