ಅಮೆಜಾನ್ ಪ್ರೈಮ್, ನೆಟ್ಫ್ಲಿಕ್ಸ್ನಂತೆ ಕಾರ್ಯ ನಿರ್ವಹಿಸುವ ಓಟಿಟಿ ಪ್ಲಾಟ್ ಫಾರ್ಮ್ಗಳು ಸಾಕಷ್ಟು ಇವೆ. ಇದೀಗ ಕನ್ನಡ ಚಿತ್ರರಂಗದಲ್ಲಿ ಮನರಂಜನೆ ನೀಡುವ ಹಲವು ಓಟಿಟಿ ಹಾಗೂ ಆ್ಯಪ್ಗಳು ಸಿನಿಮಾ ಪ್ರೇಕ್ಷಕರನ್ನ ರಂಜಿಸುತ್ತಿವೆ. ಈ ಸಾಲಿಗೆ ಮತ್ತೊಂದು ಎಂಟರ್ಟೈನ್ಮೆಂಟ್ ಆ್ಯಪ್ ಸೇರ್ಪಡೆ ಆಗುತ್ತಿದೆ. ಅದುವೇ 'ಸಿನಿಬಜಾರ್'. ಈ ಆ್ಯಪ್ ಅನ್ನು ಶ್ರೀನಗರ ಕಿಟ್ಟಿ ಲಾಂಚ್ ಮಾಡುವ ಮೂಲಕ ಗುಡ್ಲಕ್ ಹೇಳಿದ್ದಾರೆ.
ಶ್ರೀನಗರ ಕಿಟ್ಟಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜೈರಾಜ್, ಉಪಾಧ್ಯಕ್ಷ ನಾಗಣ್ಣ, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ನಿರ್ದೇಶಕರಾದ ರವಿಶ್ರೀವತ್ಸ, ಗಿರಿರಾಜ್ ಹಾಗೂ ನಿರ್ಮಾಪಕ ಉಮೇಶ್ ಬಣಕಾರ್ ಸಾಥ್ ನೀಡಿದ್ದಾರೆ.
ಇನ್ನು ಸಿನಿ ಬಜಾರ್ ಆ್ಯಪ್ ಹೊರ ತಂದಿರುವ ನಿರ್ಮಾಪಕ ಭಾಸ್ಕರ್ ವೆಂಕಟೇಶ್, ಹಲವು ವರ್ಷಗಳಿಂದ ಆನ್ಲೈನ್ನಲ್ಲಿ ಪರಿಣಿತಿ ಪಡೆದಿದ್ದು,
ಆನ್ಲೈನ್ ಭಾಸ್ಕರ್ ಎಂದೇ ಖ್ಯಾತರಾಗಿದ್ದಾರೆ. ಭಾಸ್ಕರ್ ವೆಂಕಟೇಶ್ ಹಾಗೂ ನಿರ್ಮಾಪಕ, ಕರ್ನಾಟಕ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಅವರ ಸಾರಥ್ಯದಲ್ಲಿ ಈ ಆ್ಯಪ್ ಹೊರ ಬಂದಿದೆ.
ಈ ಆ್ಯಪ್ನಲ್ಲಿ ಸಿನಿಮಾ ವೀಕ್ಷಣೆಗೆ ತಗಲುವ ವೆಚ್ಚ ಕೇವಲ ಇಪ್ಪತ್ತೈದರಿಂದ ಮೂವತ್ತು ರೂಪಾಯಿ. 24 ಗಂಟೆಗಳ ಅವಧಿಯಿರುತ್ತದೆ. ಅಷ್ಟರೊಳಗೆ ಎಷ್ಟು ಸಿನಿಮಾ ಬೇಕಾದರೂ ನೋಡಬಹುದು. ಈ ಸಿನಿಮಾವನ್ನು ಎಷ್ಟು ಜನ ವೀಕ್ಷಿಸಿದ್ದಾರೆ ಎಂಬ ಮಾಹಿತಿ ಕೂಡ ನಿರ್ಮಾಪಕರಿಗೆ ತಿಳಿಯಲಿದೆ. ಪೈರಸಿ ತಡೆಗಟ್ಟುವ ಕಡೆಗೂ ಗಮನ ಹರಿಸಲಾಗಿದೆ.
ಧ್ವನಿಯಿಂದ ಹಿಡಿದು, ಸ್ಕ್ರೀನಿಂಗ್ ತನಕ ಎಲ್ಲಾ ಉತ್ತಮ ಗುಣಮಟ್ಟದಾಗಿರುತ್ತದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರಗಳು ಈಗಾಗಲೇ ಈ ಆ್ಯಪ್‌ನಲ್ಲಿವೆ. ಈ ಆ್ಯಪ್ ಮೂಲಕವೇ ಚಿತ್ರವನ್ನು ಬಿಡುಗಡೆ ಮಾಡಲು ಇಚ್ಛಿಸುವವರು ನಮ್ಮ ತಂಡವನ್ನು ಸಂಪರ್ಕಿಸಬಹುದು. ಒಟ್ಟಿನಲ್ಲಿ ಕನ್ನಡ ನಿರ್ಮಾಪಕರಿಗೆ ಒಳಿತಾಗಲಿ ಎಂಬುದೇ ನಮ್ಮ ಆಶಯ ಎಂದು ಭಾಸ್ಕರ್ ವೆಂಕಟೇಶ್ ಅವರು ತಿಳಿಸಿದ್ದಾರೆ.
ಭಾಸ್ಕರ್ ನನ್ನನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ನೀಡಿದಾಗ ಇದರಿಂದ ನಿರ್ಮಾಪಕರಿಗೆ ಹಾಗೂ ನೋಡುಗರಿಗೆ ಅನುಕೂಲವಿದೆ ಎಂದು ತಿಳಿಯಿತು. ನಾನು ಭಾಸ್ಕರ್ ಅವರ ಜೊತೆ ಈ ಪ್ರಯತ್ನಕ್ಕೆ ಕೈ ಜೋಡಿಸಿದ್ದೇನೆ ಎಂದರು ಉಮೇಶ್ ಬಣಕಾರ್. ಆ್ಯಪ್ ಹೇಗೆ ಬಳಸಿಕೊಳ್ಳುವುದು? ಎಂಬುದರ ಮಾಹಿತಿಯನ್ನು ಆ್ಯಪ್ ಡೆವಲಪರ್ ಸುಧಾಕರ್ ನೀಡಿದರು. ಇದು ಆಧುನಿಕ ಯುಗ. ಹೊಸ ತಂತ್ರಜ್ಞಾನ ದಿನದಿನಕ್ಕೂ ಅಭಿವೃದ್ಧಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಿನಿ ಬಜಾರ್‌ನಿಂದ ಸಿನಿಮಾ ನಿರ್ಮಾಪಕರಿಗೆ ತುಂಬಾ ಸಹಾಯ ಆಗಲಿದೆ ಎಂದರು.