ಕನ್ನಡ ರ‍್ಯಾಪರ್ ಆಗಿ ಬಳಿಕ ಸಂಗೀತ ನಿರ್ದೇಶಕನಾಗಿ ಸಕ್ಸಸ್ ಕಂಡವರಲ್ಲಿ ಚಂದನ್ ಶೆಟ್ಟಿ ಕೂಡ ಒಬ್ಬರು. ಸಂಗೀತ ನಿರ್ದೇಶನದ ಜೊತೆಗೆ ನಟನೆಗೂ ಕಾಲಿಟ್ಟಿರುವ ಚಂದನ್ ಎರಡ್ಮೂರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಹೊಸ ವರ್ಷಕ್ಕೆ ಸ್ಪೆಷಲ್ ಹಾಡನ್ನು ಕೂಡ ರಿಲೀಸ್ ಮಾಡುವ ತಯಾರಿಯಲ್ಲಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗುವ ಚಂದನ್ ಶೆಟ್ಟಿ ಅವರ ಹಾಡಿಗಾಗಿ ಕಾಯುವ ಅಭಿಮಾನಿಗಳ ದೊಡ್ಡ ದಂಡೇ ಇದೆ.
![Chandan Shetty new rap song for new year](https://etvbharatimages.akamaized.net/etvbharat/prod-images/23-12-2023/kn-bng-04-hosavarushakke-whattodomama-anthidhare-chandhan-shetty-7204735_23122023171529_2312f_1703331929_914.jpeg)
ಇದೀಗ ಈ ಬಾರಿಯೂ ಕೂಡ ಚಂದನ್ ಶೆಟ್ಟಿ, 'WHAT TO DO MAMA?' ಎಂಬ ಅಪ್ಪಟ್ಟ ದೇಸಿ ಶೈಲಿಯ ಟಪಂಗುಚಿ ಹಾಡನ್ನು ಈ ವರ್ಷದ ಕೊನೆಗೆ ಬಿಡುಗಡೆ ಮಾಡಲಿದ್ದಾರೆ. ತಮ್ಮದೇ ಆದ ಯೂಟ್ಯೂಬ್ ಚಾನೆಲ್ನಲ್ಲಿ ಈ ಹಾಡು ರಿಲೀಸ್ ಆಗಲಿದೆ. ಈ ಅದ್ದೂರಿ ಟಪಂಗುಚಿ ಹಾಡಿನಲ್ಲಿ ಚಂದನ್ ಶೆಟ್ಟಿ ಹಾಗು ಹಿರಿಯ ನಟ ರಂಗಾಯಣ ರಘು ಮತ್ತು ಗಿಚ್ಚಿ ಗಿಲಿಗಲಿಯ ಕಲಾವಿದರು ಸಖತ್ ಸ್ಟೆಪ್ ಹಾಕಿದ್ದಾರೆ.
'ವಾಟ್ ಟು ಡು ಮಾಮ' ಹದಿಹರೆಯದ ಹುಡುಗರಿಗೆ ಹೇಳಿ ಮಾಡಿಸಿದ ಹಾಡು. ಹುಡುಗರ 'ಪ್ರಾಬ್ಲಮ್'ಗಳನ್ನು ಬಿಂಬಿಸುವ ಹಾಡು. 'ಪ್ರಾಬ್ಲಮ್ ಪ್ರಾಬ್ಲಮ್ ಪ್ರಾಬ್ಲಮ್ ವಾಟ್ ಟು ಡು ಮಾಮ?' ಎಂದೇ ಹಾಡು ಆರಂಭವಾಗುತ್ತದೆ. ಇಷ್ಟು ದಿನ ಬಿಡುಗಡೆಯಾಗಿರುವ ಚಂದನ್ ಶೆಟ್ಟಿ ಅವರ ರ‍್ಯಾಪ್ ಸಾಂಗ್ಸ್ ಹೆಚ್ಚಾಗಿ ಪಬ್ಗಳ ಮೇಲೆ ಕೇಂದ್ರಿಕೃತವಾಗಿರುತ್ತಿತ್ತು. ಆದರೆ, ಈ ಹಾಡು ಪಕ್ಕಾ ಲೋಕಲ್ ಸ್ಟೈಲ್ನಲ್ಲಿ ಮೂಡಿಬಂದಿದೆ.
ಕಂಠೀರವ ಸ್ಟುಡಿಯೋದಲ್ಲಿ ಬಾರ್ ಸೆಟ್ ಹಾಕಿ ಈ ಹಾಡನ್ನು ಚಿತ್ರೀಕರಣ ಮಾಡಲಾಗಿದೆ. ಚಂದನ್ ಶೆಟ್ಟಿ ಈ ಹಾಡಿನಲ್ಲಿ ಪಕ್ಕಾ ಲೋಕಲ್ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಖ್ಯಾತ ನಟ ರಂಗಾಯಣ ರಘು ಅವರು ಚಂದನ್ ಶೆಟ್ಟಿ ಅವರ ಸೋದರಮಾವನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜನಪ್ರಿಯ ರಿಯಾಲಿಟಿ ಶೋ 'ಗಿಚ್ಚಿ ಗಿಲಿಗಿಲಿ'ಯ ಕಲಾವಿದರಾದ ರಾಘವೇಂದ್ರ, ಆರ್ಜೆ ವಿಕ್ಕಿ, ಹುಲಿ ಕಾರ್ತಿಕ್, ನಿತಿನ್ ಅಮಿನ್, ಶಿಡ್ ಶ್ಯಾಡೋ ಶಿವ, ಎನ್.ಸಿ ಅಯ್ಯಪ್ಪ ಮುಂತಾದವರು ಈ ಅದ್ದೂರಿ ರ‍್ಯಾಪ್ ಸಾಂಗ್ನಲ್ಲಿದ್ದಾರೆ.
![Chandan Shetty new rap song for new year](https://etvbharatimages.akamaized.net/etvbharat/prod-images/23-12-2023/kn-bng-04-hosavarushakke-whattodomama-anthidhare-chandhan-shetty-7204735_23122023171529_2312f_1703331929_538.jpeg)
ಇಷ್ಟು ದಿನ ಚಂದನ್ ಶೆಟ್ಟಿ ಅವರ ಸುಪ್ರಸಿದ್ದ ರ‍್ಯಾಪ್ ಸಾಂಗ್ಸ್ಗಳನ್ನು ಬೇರೆಬೇರೆ ನಿರ್ಮಾಪಕರು ನಿರ್ಮಾಣ ಮಾಡುತ್ತಿದ್ದರು. ಇದೇ ಮೊದಲ ಬಾರಿಗೆ ಚಂದನ್ ಶೆಟ್ಟಿ ಅವರೇ ಈ ಹಾಡನ್ನು ನಿರ್ಮಾಣ ಮಾಡಿದ್ದಾರೆ. ವಿಜಯ್ ಈಶ್ವರ್ ಜೊತೆಗೂಡಿ ಹಾಡನ್ನು ಬರೆದಿದ್ದಾರೆ. ರಿಯಾಲಿಟಿ ಶೋನಲ್ಲಿ ಜನಪ್ರಿಯರಾಗಿರುವ ಮುರುಗ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಉದಯಲೀಲ ಛಾಯಾಗ್ರಹಣ, ಸತೀಶ್ ಚಂದ್ರ ಸಂಕಲನ ಹಾಗೂ ದಿವಾಕರ್ ಅವರ ಕಲಾ ನಿರ್ದೇಶನ ಈ ಹಾಡಿಗಿದೆ.
ಚಂದನ್ ಶೆಟ್ಟಿ ಅವರೇ ಸಂಗೀತ ಸಂಯೋಜಿಸಿ, ಹಾಡಿ ಹಾಗೂ ನಿರ್ದೇಶನವನ್ನೂ ಮಾಡಿರುವ ಈ ಹಾಡು ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಮತ್ತು ಹೊಸವರ್ಷದ ಆಗಮನದ ಸಮಯದಲ್ಲಿ ಬಿಡುಗಡೆಯಾಗುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗುವುದಂತೂ ಖಂಡಿತ.
ಇದನ್ನೂ ಓದಿ: ಹೆಸರಿಡದ ಚಿತ್ರಕ್ಕೆ ಜೋಡಿಯಾದ ಚಂದನವನದ ಬ್ಯೂಟಿಫುಲ್ ಕಪಲ್ ಚಂದನ್ ಶೆಟ್ಟಿ-ನಿವೇದಿತಾ ಗೌಡ