ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರು ಇಂದು ಮುಂಜಾನೆ ಇಹಲೋಕ ತ್ಯಜಿಸಿದ್ದು, ಅಂತ್ಯಸಂಸ್ಕಾರ ಗುಜರಾತ್‌ನ ಅಹಮದಾಬಾದ್ನಲ್ಲಿ ನೆರವೇರಿದೆ. ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಕಂಗನಾ, ಅಜಯ್ ದೇವಗನ್ ಸೇರಿದಂತೆ ಅನೇಕ ಬಾಲಿವುಡ್ ತಾರೆಯರು ಸೋಶಿಯಲ್ ಮೀಡಿಯಾ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.
ದೇವರು ದುಃಖ ಭರಿಸುವ ಶಕ್ತಿ ನೀಡಲಿ- ಅಕ್ಷಯ್ ಕುಮಾರ್: 'ತಾಯಿಯನ್ನು ಕಳೆದುಕೊಳ್ಳುವುದಕ್ಕಿಂತ ದೊಡ್ಡ ದುಃಖ ಮತ್ತೊಂದಿಲ್ಲ. ಪ್ರಧಾನಿಯವರೇ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನಿಮಗೆ ನೀಡಲಿ' ಎಂದು ನಟ ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಕಂಗನಾ ಸಂತಾಪ: ನಟಿ ಕಂಗನಾ ರಣಾವತ್ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹೀರಾಬೆನ್ ಅವರು ಮೋದಿ ಅವರಿಗೆ ತಮ್ಮ ಕೈಯಿಂದ ಊಟ ಮಾಡಿಸುತ್ತಿರುವ ಚಿತ್ರ ಹಂಚಿಕೊಂಡಿದ್ದಾರೆ. 'ದೇವರು ನರೇಂದ್ರ ಮೋದಿಯವರಿಗೆ ಈ ಕಠಿಣ ಸಮಯದಲ್ಲಿ ತಾಳ್ಮೆ ಮತ್ತು ಶಾಂತಿಯನ್ನು ನೀಡಲಿ' ಎಂದು ಹಿಂದಿಯಲ್ಲಿ ಬರೆದಿದ್ದಾರೆ.
ಸರಳ, ತತ್ವ ಸಿದ್ಧಾಂತವುಳ್ಳ ಮಹಿಳೆ- ಅಜಯ್ ದೇವಗನ್: ಸರಳ, ತತ್ವ ಸಿದ್ಧಾಂತವುಳ್ಳ ಮಹಿಳೆ ನರೇಂದ್ರ ಮೋದಿ ಎಂಬ ಉತ್ತಮ ಮಗನನ್ನು ಬೆಳೆಸಿದ್ದಾರೆ. ನಮ್ಮ ಪ್ರಧಾನಿ ಮತ್ತು ಅವರ ಕುಟುಂಬಕ್ಕೆ ನನ್ನ ವೈಯಕ್ತಿಕ ಸಂತಾಪಗಳು ಎಂದು ನಟ ಅಜಯ್ ದೇವಗನ್ ಟ್ವೀಟ್ ಮಾಡಿದ್ದಾರೆ.
ದೇಶದ ಪ್ರತೀ ತಾಯಿಯ ಆಶೀರ್ವಾದ ನಿಮ್ಮೊಂದಿಗಿದೆ- ಅನುಪಮ್ ಖೇರ್: 'ನಿಮ್ಮ ಮಾತಾಶ್ರೀ ಹೀರಾಬೆನ್ ಮೋದಿ ಅವರ ನಿಧನದ ಸುದ್ದಿ ಕೇಳಿ ದುಃಖಿತನಾಗಿದ್ದೇನೆ ಮತ್ತು ಭಾವುಕನಾಗಿದ್ದೇನೆ. ಅವರ ಮೇಲಿನ ನಿಮ್ಮ ಪ್ರೀತಿ ಮತ್ತು ಗೌರವವು ಪ್ರಪಂಚದಲ್ಲಿ ಎದ್ದು ಕಾಣುತ್ತದೆ. ನಿಮ್ಮ ಜೀವನದಲ್ಲಿ ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ನೀವು ಭಾರತಮಾತೆಯ ಮಗ. ದೇಶದ ಪ್ರತೀ ತಾಯಿಯ ಆಶೀರ್ವಾದ ನಿಮ್ಮೊಂದಿಗಿದೆ. ನನ್ನ ತಾಯಿಯದ್ದೂ ಸಹ' ಎಂದು ನಟ ಅನುಪಮ್ ಖೇರ್ ತಿಳಿಸಿದ್ದಾರೆ.
ತಾಯಿ ಎಲ್ಲಿಯೂ ಹೋಗುವುದಿಲ್ಲ- ಸೋನು ಸೂದ್: ಸೋನು ಸೂದ್ ಹಿಂದಿಯಲ್ಲಿ ಹೀಗೆ ಬರೆದಿದ್ದಾರೆ - 'ತಾಯಿ ಎಲ್ಲಿಯೂ ಹೋಗುವುದಿಲ್ಲ, ತನ್ನ ಮಗ ಇತರರಿಗೆ ಒಳ್ಳೆಯದನ್ನು ಮಾಡಬೇಕೆಂದು ಅನೇಕ ಬಾರಿ ದೇವರ ಪಾದದ ಬಳಿ ಕುಳಿತುಕೊಳ್ಳುತ್ತಾರೆ. ನಿಮ್ಮ ತಾಯಿ ಯಾವಾಗಲೂ ನಿಮ್ಮೊಂದಿಗಿರುತ್ತಾರೆ'.
ಕಪಿಲ್ ಶರ್ಮಾ ಸಂತಾಪ: ಕಪಿಲ್ ಶರ್ಮಾ ಸಂತಾಪ ಸೂಚಿಸಿ, 'ನಿಮ್ಮ ತಾಯಿಯ ಆಶೀರ್ವಾದ ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ. ಅವರಿಗೆ ಸರ್ವಶಕ್ತನ ಪಾದಗಳಲ್ಲಿ ಸ್ಥಾನ ಸಿಗಲಿ' ಎಂದು ನಾವು ಪ್ರಾರ್ಥಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.
ಚಿತ್ರರಂಗದ ಅನೇಕರು ಸೇರಿದಂತೆ, ರಾಜಕಾರಣಿಗಳು, ಗಣ್ಯರು, ಸಾಮಾನ್ಯ ಜನರು ಸಂತಾಪ ಸೂಚಿಸುತ್ತಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ತಾಯಿ ಅಗಲಿಕೆಗೆ ರಾಜ್ಯ ನಾಯಕರ ಕಂಬನಿ
ಹೀರಾಬೆನ್ ಮೋದಿ ನಿಧನ: ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಹೀರಾಬೆನ್ ಮೋದಿ ಅವರಿಂದು ಬೆಳಗಿನ ಜಾವ 3.30ಕ್ಕೆ ಅಹಮದಾಬಾದ್‌ನ ಎನ್.ಮೆಹ್ತಾ ಆಸ್ಪತ್ರೆಯಲ್ಲಿ ನಿಧನರಾದರು. ಪುತ್ರ, ಪ್ರಧಾನಿ ನರೇಂದ್ರ ಮೋದಿ ತಾಯಿಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಅಹಮದಾಬಾದ್‌ನ ಶವಾಗಾರದಲ್ಲಿ ಅಂತ್ಯಸಂಸ್ಕಾರ ನಡೆಯಿತು.
ಇದನ್ನೂ ಓದಿ: ತಾಯಿಯ ಅಂತಿಮ ದರ್ಶನ ಪಡೆದ ಪ್ರಧಾನಿ.. ಅಮ್ಮನ ಪಾರ್ಥಿವ ಶರೀರಕ್ಕೆ ಹೆಗಲುಕೊಟ್ಟ ಮೋದಿ!