ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳ ಆಗಮನವಾಗುತ್ತಲೇ ಇದೆ. ಹೊಸತನದ ಸಿನಿಮಾಗಳಿಗೆ ಪ್ರೇಕ್ಷಕರು ಸ್ಪಂದಿಸುತ್ತಿದ್ದಾರೆ. ಅಂಥ ಸಿನಿಮಾಗಳ ಸಾಲಿಗೆ ಸೇರಲು ಸಜ್ಜಾಗಿರುವ ಹೊಸ ಸಿನಿಮಾವೇ 'ಬ್ರಹ್ಮರಾಕ್ಷಸ'. ಓರ್ವ ಲೈಟ್‌ಮ್ಯಾನ್ ಆಗಿ ಫಿಲ್ಮ್ ಇಂಡಸ್ಟ್ರಿಗೆ ಬಂದು ಹಲವು ನಿರ್ದೇಶಕರ ಬಳಿ ಕೆಲಸ ಕಲಿತ ಶಂಕರ್ ವಿ ಅವರು ಇದೇ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿರುವ ಚಿತ್ರವಿದು.
- " class="align-text-top noRightClick twitterSection" data="">
'ಬ್ರಹ್ಮರಾಕ್ಷಸ' ಟೀಸರ್: 'ಕಲಿವೀರ' ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಏಕಲವ್ಯ ಅವರೀಗ ಹೆಸರು ಬದಲಾಯಿಸಿಕೊಂಡಿದ್ದಾರೆ. ಅಂಕುಶ್ ಏಕಲವ್ಯ 'ಬ್ರಹ್ಮರಾಕ್ಷಸ'ನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈಗಾಗಲೇ ಬಹುತೇಕ ಕೆಲಸಗಳನ್ನು ಮುಗಿಸಿಕೊಂಡು ಸೆನ್ಸಾರ್ ಹಂತದಲ್ಲಿರುವ ಈ ಚಿತ್ರದ ಟೀಸರ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು.
ಅಂಕುಶ್ ಏಕಲವ್ಯ ಮಾತನಾಡಿ, ಇದು 70 ಹಾಗು 80ರ ದಶಕದಲ್ಲಿ ನಡೆಯುವ ಕಥೆ. ಕಲಿವೀರ ಸಿನಿಮಾ ಮಾಡುವಾಗಲೇ ಶಂಕರ್ ಪರಿಚಯವಾದರು. ಬಳಿಕ ಅವರನ್ನು ನಾನೇ ನಿರ್ಮಾಪಕರಿಗೆ ಪರಿಚಯಿಸಿದೆ. ಸಿನಿಮಾಗಾಗಿ ನಾವೆಷ್ಟೇ ಕಷ್ಟ ಪಟ್ಟಿದ್ದರೂ ತೆರೆಮೇಲೆ ನೋಡಿದಾಗ ಅದೆಲ್ಲ ಮರೆತುಹೋಗುತ್ತದೆ ಎಂದು ತಿಳಿಸಿ ಭಾವುಕರಾದರು. ನಾಯಕಿ ಪಲ್ಲವಿಗೌಡ ಮಾತನಾಡಿ, ಇಡೀ ಸಿನಿಮಾ ರಾತ್ರಿ ವೇಳೆಯಲ್ಲೇ ನಡೆಯುತ್ತದೆ. ಅಂಕುಶ್ ಗರ್ಲ್ ಫ್ರೆಂಡ್, ಬಳಿಕ ಹೆಂಡತಿಯಾಗಿ ಕಾಣಿಸಿಕೊಂಡಿದ್ದೇನೆ ಎಂದು ತಿಳಿಸಿದರು.
ನಿರ್ದೇಶಕ ಶಂಕರ್ ಮಾತನಾಡುತ್ತಾ, ನಾನು ಸಿನಿಮಾಗೆ ಬರುತ್ತೇನೆಂದು ಅಂದುಕೊಂಡೇ ಇರಲಿಲ್ಲ. ಬಡತನದಲ್ಲೇ ಬೆಳೆದವನು. 3 ಕಿರುಚಿತ್ರಗಳನ್ನು ಮಾಡಲು ನನ್ನ ತಾಯಿಯ ಒಡವೆಗಳನ್ನೆಲ್ಲ ಅಡವಿಟ್ಟಿದ್ದೆ ಎಂದು ಹಿಂದಿನ ದಿನಗಳನ್ನು ನೆನಪಿಸಿಕೊಂಡರು. ಬಳಿಕ ತಮ್ಮ ಈ ಸಿನಿಮಾ ಕುರಿತು ಮಾತನಾಡಿ, ಬ್ರಹ್ಮರಾಕ್ಷಸ 1980ರ ಸಮಯದಲ್ಲಿ ನಡೆಯುವ ಒಂದು ರಿವೆಂಜ್ ಸ್ಟೋರಿಯಾಗಿದ್ದು, ಜೊತೆಗೊಂದು ಮೆಸೇಜ್ ಕೂಡ ಇದೆ. ಮೂವರು ಸಮಾಜಕ್ಕೆ ಒಳ್ಳೆಯದು ಮಾಡಲೆಂದು ಹೊರಟಾಗ ಯಾವುದೋ ಒಂದು ಘಟನೆ ನಡೆಯುತ್ತದೆ. ಇಲ್ಲಿ ನಾಯಕ ಹಾಗೂ ಬಿರಾದಾರ್ ಮಾವ-ಅಳಿಯನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ 90ರಷ್ಟು ಭಾಗವನ್ನು ರಾತ್ರಿ ವೇಳೆಯಲ್ಲೇ ಚಿತ್ರೀಕರಿಸಲಾಗಿದ್ದು, ಬಹುತೇಕ ಕಥೆ ಮಳೆಯಲ್ಲೇ ನಡೆಯುತ್ತದೆ ಎಂದರು.
ನಂತರ ವೈಜನಾಥ್ ಬಿರಾದಾರ್ ಮಾತನಾಡಿ, ನನ್ನದು ಡಿಫರೆಂಟ್ ಕ್ಯಾರೆಕ್ಟರ್ ಎಂದು ತಿಳಿಸಿದರು. ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಮಾತನಾಡಿ, ಸಿನಿಮಾ ಇಷ್ಟು ಚೆನ್ನಾಗಿ ಬರಲು ನಿರ್ಮಾಪಕರೇ ಕಾರಣ. ಈ ಸಿನಿಮಾ ಯಾವುದೇ ಹಾಲಿವುಡ್ ಚಿತ್ರಕ್ಕೂ ಕಮ್ಮಿಯಿಲ್ಲ. ಏಕಲವ್ಯ ಅವರ ನಟನೆ ನೋಡಿ ಜಾಕಿಚಾನ್ ನೆನಪಾದರು ಎಂದು ಹೇಳಿದರು.
ಇದನ್ನೂ ಓದಿ: ಬಿಗ್ ಬಾಸ್: ಡ್ರೋಣ್ ಪ್ರತಾಪ್‌ಗೆ ಕಳಪೆ ಪಟ್ಟ, ಸಿಕ್ತು ಜೈಲು ಶಿಕ್ಷೆ
ನಿರ್ಮಾಪಕ ಶ್ರೀನಿವಾಸ ಮಾತನಾಡಿ, ನನ್ನ ಮೊದಲ ಚಿತ್ರ ಕಲಿವೀರ. ಮೀಡಿಯಾದವರ ಮಾತು ಮೀರಿ ಅದನ್ನು ರಾಂಗ್ ಟೈಂನಲ್ಲಿ ರಿಲೀಸ್ ಮಾಡಿದ್ದೆ. ಇದು ಹಾಗಾಗಲ್ಲ. ಈ ಚಿತ್ರದಲ್ಲಿ ನೂರು ಪಟ್ಟು ಹೆಚ್ಚು ಸಸ್ಪೆನ್ಸ್, ಆ್ಯಕ್ಷನ್, ಥ್ರಿಲ್ಲರ್ ಇದೆ. ಇದರಲ್ಲಿ 5 ಸುಂದರ ಹಾಡುಗಳಿವೆ. ಕನ್ನಡ ಜನತೆ ಚಿತ್ರವನ್ನು ಕೈ ಹಿಡಿಯುವರೆಂಬ ನಂಬಿಕೆಯಿದೆ. ಹೊಸಬರು ಗೆದ್ದರೆ ಇನ್ನೊಂದಷ್ಟು ಸಿನಿಮಾಗಳು ಮೂಡಿ ಬರುತ್ತವೆ ಎಂದು ತಿಳಿಸಿದರು.
ಇದನ್ನೂ ಓದಿ: 'ಸ್ಯಾಮ್ ಬಹದ್ದೂರ್': ಪ್ರೇಕ್ಷಕರಿಗೆ ರೋಮಾಂಚಕ ಅನುಭವ ನೀಡಿದ ದೇಶದ ಮೊದಲ ಫೀಲ್ಡ್ ಮಾರ್ಷಲ್ ಕಹಾನಿ
ಭವ್ಯ, ಅರವಿಂದ್ ರಾವ್, ಸ್ವಪ್ನ, ಪುರುಷೋತ್ತಮ್, ಬಲ ರಾಜವಾಡಿ, ರಥಾವರ ದೇವು, ಭುವನ್‌ಗೌಡ, ಚಿಕ್ಕಹೆಜ್ಜಾಜಿ ಮಜದೇವ್, ಶಿವಾನಂದಪ್ಪ ಹಾವನೂರು ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಅನಿರುದ್ಧ ಅವರ ಕ್ಯಾಮರಾವರ್ಕ್, ಎಂ.ಎಸ್ ತ್ಯಾಗರಾಜ್ ಸಂಗೀತ ಸಂಯೋಜನೆ ಇದೆ. 'ಬ್ರಹ್ಮರಾಕ್ಷಸ' ಸಿನಿಮಾವನ್ನು ಜ್ಯೋತಿ ಆರ್ಟ್ಸ್ ಮೂಲಕ ಕೆಎಂಪಿ ಶ್ರೀನಿವಾಸ್ ನಿರ್ಮಾಣ ಮಾಡಿದ್ದು, ಈ ವರ್ಷದೊಳಗೆ ಬಿಡುಗಡೆಗೊಳಿಸಲು ಸಿದ್ಧತೆಗಳು ನಡೆಯುತ್ತಿವೆ.