ಮುಂಬೈ: ಸೆಲೆಬ್ರಿಟಿಗಳನ್ನು ಬಿಟ್ಟು ಬಿಡದಂತೆ ಕಾಡುವ ಪ್ಯಾಪಾರಾಜಿಗಳ ಬಗ್ಗೆ ಬಾಲಿವುಡ್ ಮಂದಿ ಅನೇಕ ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತೀರ ವೈಯಕ್ತಿಕ ಜಾಗವನ್ನು ಅವರು ಆಕ್ರಮಿಸುತ್ತಾರೆ ಎಂಬ ಆಪಾದನೆಯನ್ನು ಮಾಡುತ್ತಾರೆ. ಅದರಂತೆ ಒಂದು ಹೆಜ್ಜೆ ಮುಂದೆ ಹೋಗಿರುವ ಪ್ಯಾಪಾರಾಜಿಗಳು ನಟಿ ಆಲಿಯಾ ಭಟ್ ಖಾಸಗಿ ಕ್ಷಣಗಳನ್ನು ಬಹಿರಂಗಪಡಿಸಿದ್ದು, ಇದೀಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಈ ಸಂಬಂಧ ಬಾಲಿವುಡ್ ಮಂದಿ ಕೂಡ ಆಕ್ರೋಶ ಹೊರ ಹಾಕಿದ್ದಾರೆ.
ಏನಿದು ಘಟನೆ: ರಾಹಾಳ ತಾಯಿಯಾಗಿರುವ ನಟಿ ಆಲಿಯಾ ತಮ್ಮ ಮನೆಯಲ್ಲಿ ಆರಾಮವಾಗಿರುವ ಸಮಯದಲ್ಲಿ ಆಕೆಯ ಮೇಲೆ ಪ್ಯಾಪಾರಾಜಿ ಕಣ್ಣುಗಳು ಹಿಂಬಾಲಿಸಿದೆ. ಮನೆಯಲ್ಲಿ ವಿಶ್ರಮಿಸುತ್ತಿದ್ದ ತನ್ನನ್ನು ಯಾರೋ ಹಿಂಬಾಲಿಸುತ್ತಿರುವಂತೆ ಕಾಣುತ್ತಿತ್ತು. ನೋಡಿದರೆ, ನಮ್ಮ ಪಕ್ಕದ ಮನೆಯ ತಾರಸಿ ಮೇಲಿಂದ ಎರಡು ಪ್ಯಾಪಾರಾಜಿ ಕಣ್ಣುಗಳು ನನ್ನ ಖಾಸಗಿತನವನ್ನು ಉಲ್ಲಂಘಿಸಿ, ಫೋಟೋಗಳನ್ನು ಪಡೆಯುತ್ತಿದ್ದವು ಎಂದು ಆಕ್ರೋಶಿಸಿ, ಈ ಸಂಬಂದ ಮುಂಬೈ ಪೊಲೀಸರಿಗೆ ಟ್ವೀಟ್ ಮಾಡಿದ್ದಾರೆ ರಾಜಿ ಚಿತ್ರದ ನಟಿ.
ಇನ್ನು ನಟಿ ಆಲಿಯಾ ಈ ಪೋಸ್ಟ್ ಮಾಡುತ್ತಿದ್ದಂತೆ ಬಾಲಿವುಡ್ ಕೂಡ ಅವರ ಬೆನ್ನ ಹಿಂದೆ ನಿಂತಿದೆ. ಪ್ಯಾಪಾರಾಜಿಗಳ ಅತಿರೇಕದ ವರ್ತನೆ ಬಗ್ಗೆ ತಿಳಿಸಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಆಲಿಯಾ ಆಪ್ತ ಸ್ನೇಹಿತ, ನಿರ್ದೆಶಕ ಕರಣ್ ಜೋಹರ್, ಖಾಸಗಿತನದ ಸಂಪೂರ್ಣ ಉಲ್ಲಂಘನೆ ಯಾಗಿದೆ. ಯಾವುದಕ್ಕೆ ಆಗಲಿ ಒಂದು ಮಿತಿ ಇರುತ್ತದೆ ಎಂದಿದ್ದಾರೆ.
ಇನ್ನು ಅನುಷ್ಕಾ ಶರ್ಮ ಕೂಡ ಇನ್ಸ್ಟಾಗ್ರಾಂನಲ್ಲಿ, ಆ ಪಬ್ಲಿಕೇಷನ್ ಹೌಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಇದೊಂದೇ ಮಾಧ್ಯಮ ನನ್ನ ಮಗಳ ಚಿತ್ರವನ್ನು ಪದೇ ಪದೇ ಪ್ರಕಟಿಸುತ್ತಿದೆ. ಈ ಸಂಬಂಧ ಅವರಿಗೆ ಮನವಿ ಮಾಡಿದರೂ ಅವರು ಈ ರೀತಿ ಪುನರಾವರ್ತಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಇನ್ನು ಜಾಹ್ನವಿ ಕಪೂರ್ ಕೂಡ ಈ ಸಂಬಂಧ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ದೀರ್ಘ ಬರಹ ಬರೆದಿದ್ದಾರೆ, ಪ್ಯಾಪಾರಾಜಿಗಳ ಕೆಲಸ ಏನು ಎಂಬುದು ನಮಗೂ ಅರ್ಥವಾಗುತ್ತದೆ. ಸೆಲೆಬ್ರಿಟಿಯ ಜೀವನ ಹೇಗಿರುತ್ತದೆ ಎಂಬುದನ್ನು ತೋರಿಸುವುದು ಅವರ ಉದ್ದೇಶವಾದರೂ, ನಮಗೆ ಒಂದು ಖಾಸಗಿ ಜಾಗ ಇರುತ್ತದೆ ಎಂಬುದನ್ನು ಮರೆಯ ಬಾರದು. ಸೆಲೆಬ್ರಿಟಿಗಳ ಸಂಪರ್ಕಿಸದೇ ಈ ರೀತಿಯ ವರ್ತನೆ ನಡೆಸುವುದು ಸರಿಯಲ್ಲ ಎಂದು ಆಕೆ ಕೂಡ ಮುಂಬೈ ಪೊಲೀಸರಿಗೆ ಟಾಕ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಆಲಿಯಾ ಜೊತೆ 2 ಸ್ಟೇಟ್ನಲ್ಲಿ ನಟಿಸಿದ್ದ ಅರ್ಜುನ್ ಕಪೂರ್ ಕೂಡ, ಆ ಪಬ್ಲಿಕೇಷನ್ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಇದು ನಾಚಿಕೆಗೇಡಿನ ಕೆಲಸ. ಈ ಮೂಲಕ ಮನೆಯಲ್ಲಿಯೇ ಮಹಿಳೆಯೊಬ್ಬಳು ಅಸುರಕ್ಷಿತಳು ಎಂಬ ಭಾವನೆ ಮೂಡಿಸಿದ್ದಾರೆ ಎಂದು ಕಿಡಿಕಾರಿದ್ದಾರೆ. ಘಟನೆ ಸಂಬಂಧ ಆಲಿಯಾ ತಾಯಿಯಾಗಿರುವ ಹಿರಿಯ ನಟಿ ಸೋನಿ ರಾಜ್ದಾನ್, ಇದೊಂದು ಆಘಾತಕಾರಿ ಘಟನೆ, ವೈಯಕ್ತಿಕ ಜೀವನದೊಳಗೆ ಈ ರೀತಿ ಆಕ್ರಮಣ ಸಲ್ಲದು ಎಂದಿದ್ದಾರೆ. ಇನ್ನು ಆಲಿಯಾ ಸಹೋದರಿ ಶಹೀನ್ ಭಟ್, ಇದೊಂದು ಕಿರುಕುಳ ಎಂದಿದ್ದಾರೆ.
ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಆಗಿರುವ ಹಾಡಿಗೆ ಗಾಯಕಿಗೆ ನೋಟಿಸ್: ಸ್ಪಷ್ಟನೆ ನೀಡುವಂತೆ ಎಚ್ಚರಿಕೆ ಪತ್ರ