ದೇಶವು 75ನೇ ವರ್ಷದ ಭಾರತೀಯ ಸೇನಾ ದಿನವನ್ನು ಜನವರಿ 15 ರಂದು ಆಚರಿಸಿದೆ. ನಿಸ್ವಾರ್ಥ ಸೇವೆ ಭ್ರಾತೃತ್ವ ಎಲ್ಲಕ್ಕಿಂತ ಹೆಚ್ಚಾಗಿ ದೇಶ ಪ್ರೇಮಕ್ಕೆ ಶ್ರೇಷ್ಠ ಉದಾಹರಣೆ ನೀಡಿದ ದೇಶದ ಸೈನಿಕರನ್ನು ಗೌರವಿಸಲು ಪ್ರತಿ ವರ್ಷ ಸೇನಾ ದಿನಾಚರಿಸಲಾಗುತ್ತದೆ. ಸ್ವತಂತ್ರ ಭಾರತದ ಮೊದಲ ಸೇನಾ ಮುಖ್ಯಸ್ಥ, ಕರ್ನಾಟಕದವರೇ ಆದ ಮೇಜರ್ ಜನರಲ್, ಲೆಫ್ಟಿನೆಂಟ್ ಜನರಲ್ ಕೋದಂಡೇರ ಎಂ.ಕಾರಿಯಪ್ಪ ಅವರು 1949 ರಲ್ಲಿ ಕೊನೆಯ ಬ್ರಿಟಿಷ್ ಕಮಾಂಡರ್ ಇನ್ ಚೀಫ್ ಜನರಲ್ ಸರ್ ಫ್ರಾನ್ಸಿಸ್ ರಾಯ್ ಬೌಚರ್ ಅವರಿಂದ ಭಾರತೀಯ ಸೇನೆಯ ಅಧಿಕಾರ ಪಡೆದ ವಿಶೇಷ ದಿನ ಇದಾಗಿದೆ.
ಭಾರತೀಯ ಸೈನಿಕರ ಮಹಾನ್ ದೇಶಭಕ್ತಿಯ ಕಥೆಯನ್ನು ನಾವು ಈ ಸಮಯದಲ್ಲಿ ನೆನಪಿಸಿಕೊಳ್ಳುತ್ತೇವೆ. ವಿಶೇಷವಾಗಿ ಚಿತ್ರರಂಗವು ಸೈನಿಕರ ಜೀವನಾಧಾರಿತ ಹಲವಾರು ಸಿನಿಮಾಗಳನ್ನು ವಿವಿಧ ಭಾಷೆಗಳಲ್ಲಿ ಬಿಡುಗಡೆ ಮಾಡಿದೆ. ಅವರ ತ್ಯಾಗ, ಬಲಿದಾನ, ಹೋರಾಟಗಳನ್ನು ನೈಜ ರೀತಿಯಲ್ಲಿ ಜನರಿಗೆ ತೋರಿಸಿಕೊಟ್ಟಿದೆ. ಇಂತಹವುಗಳಲ್ಲಿ ಭಾರತೀಯ ಸೈನಿಕರ ಕಥಾಧಾರಿತ ಕೆಲವು ಬಾಲಿವುಡ್ ಚಲನಚಿತ್ರಗಳ ವಿವರ ಇಂತಿದೆ.
ವಿಕ್ರಮ್ ಬಾತ್ರಾ ಜೀವನಕಥೆ 'ಶೇರ್ಷಾ': ಬಾಲಿವುಡ್ ನಟ ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅಭಿನಯದ 'ಶೇರ್ಷಾ' ಸಿನಿಮಾ ಅತ್ಯಂತ ಜನಪ್ರಿಯ ಚಲನಚಿತ್ರಗಳಲ್ಲಿ ಒಂದಾಗಿದೆ. ಕಾರ್ಗಿಲ್ ಯುದ್ಧದ ವೀರ ಕ್ಯಾಪ್ಟನ್, ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ವಿಕ್ರಂ ಬಾತ್ರಾ ಅವರ ಜೀವನವನ್ನಾಧಾರಿಸಿದ ಕಥೆ ಇದು. 'ಶೇರ್ಷಾ' ಸಿನಿಮಾದಲ್ಲಿ ವಿಕ್ರಂ ಪಾತ್ರಕ್ಕೆ ಸಿದ್ದಾರ್ಥ್ ಜೀವ ತುಂಬಿದ್ದಾರೆ. ವಿಕ್ರಂ ಅವರ ಗೆಳತಿ ಡಿಂಪಲ್ ಚಿಮಾ ಪಾತ್ರದಲ್ಲಿ ನಟಿ ಕಿಯಾರಾ ಅಡ್ವಾಣಿ ಅಭಿನಯಿಸಿದ್ದಾರೆ. 2021 ರ ಆಗಸ್ಟ್ 12 ರಂದು ಈ ಸಿನಿಮಾ ಬಿಡುಗಡೆಯಾಗಿದೆ.
ಭಾರತದ ಹೆಮ್ಮೆ 'ಭುಜ್': ಅಭಿಷೇಕ್ ದುದೈಯಾ ನಿರ್ದೇಶಿಸಿರುವ ಹಿಂದಿ ಸಿನಿಮಾ 'ಭುಜ್' ಆಗಿದೆ. ಬಾಲಿವುಡ್ ನಟ ಅಜಯ್ ದೇವಗನ್ ಅಭಿನಯಿಸಿರುವ ಸೂಪರ್ ಹಿಟ್ ಸಿನಿಮಾ ಇದಾಗಿದೆ. ಚಿತ್ರದ ಇಡೀ ಕಥೆಯು, ಭುಜ್ ವಾಯು ನೆಲೆಯನ್ನು ಮರುಸ್ಥಾಪಿಸುವ ಕುರಿತಾಗಿದೆ. ಐಎಎಫ್ ಸ್ಕ್ವಾಡ್ರನ್ ಲೀಡರ್ ವಿಜಯ್ ಕಾರ್ಣಿಕ್ ಅವರು ಸ್ಥಳೀಯ 300 ಮಹಿಳೆಯರ ಸಹಾಯದಿಂದ ಭುಜ್ ವಾಯು ನೆಲೆಯನ್ನು ಹೇಗೆ ಮರುಸ್ಥಾಪಿಸುತ್ತಾರೆ ಎಂಬುದರ ಬಗ್ಗೆ ಈ ಚಿತ್ರ ಮಾತಾಡುತ್ತದೆ. ಸಿನಿಮಾದಲ್ಲಿ ಅಜಯ್ ದೇವಗನ್ ನಟನಾಗಿ ಅಭಿನಯಿಸಿದ್ದು, ಸಂಜಯ್ ದತ್, ಸೋನಾಕ್ಷಿ ಸಿನ್ಹಾ ಮತ್ತು ನೋರಾ ಫತೇಹಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದು 2021 ರ ಆಗಸ್ಟ್ 13 ರಂದು ತೆರೆ ಕಂಡಿದೆ.
'ದಿ ಗಾಝಿ ಅಟ್ಯಾಕ್': ಸಂಕಲ್ಪ್ ರೆಡ್ಡಿ ನಿರ್ದೇಶನದ 'ದಿ ಗಾಝಿ ಅಟ್ಯಾಕ್' ಸಿನಿಮಾ ಹಿಂದಿ ಮತ್ತು ತೆಲುಗು ಭಾಷೆಯಲ್ಲಿ 2017 ರ ಫೆಬ್ರವರಿ 17 ರಂದು ಬಿಡುಗಡೆಯಾಯಿತು. ಚಿತ್ರದಲ್ಲಿ ರಾಣಾ ದಗ್ಗುಬಾಟಿ ನಾಯಕನಾಗಿ ನಟಿಸಿದ್ದು ತಾಪ್ಸೀ ಪನ್ನು, ಕೇ ಕೇ ಮೆನನ್, ಅತುಲ್ ಕುಲಕರ್ಣಿ ಮತ್ತು ಸತ್ಯದೇವ್ ಅಭಿನಯಿಸಿದ್ದಾರೆ. 1971ರಲ್ಲಿ ಪಾಕಿಸ್ತಾನ ಮತ್ತು ಭಾರತದ ನಡುವಿನ ಯುದ್ಧದ ವೇಳೆ ಪಿಎನ್ಎಸ್ ಘಾಜಿ ಮುಳುಗಡೆಯಾದ ಕುರಿತಾಗಿ ಕಥೆಯನ್ನು ಹೆಣೆಯಲಾಗಿದೆ. ಇದು ನೈಜ ಘಟನಾಧಾರಿತ ಸಿನಿಮಾವಾಗಿದೆ. ತೆಲುಗಿನ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು 2018 ರಲ್ಲಿ 'ದಿ ಗಾಝಿ ಅಟ್ಯಾಕ್' ಪೆಡೆದುಕೊಂಡಿದೆ.
'ಬಾರ್ಡರ್': ಜೆ.ಪಿ.ದತ್ತಾ ಬರೆದು ನಿರ್ದೇಶಿಸಿದ ಚಿತ್ರ 'ಬಾರ್ಡರ್' ಆಗಿದೆ. ಈ ಕಥೆಯು 1971 ರಲ್ಲಿ ಲಾಂಗೆವಾಲಾ ಕದನದಲ್ಲಿ ಸಂಭವಿಸಿದ ನೈಜ ಘಟನೆಗಳಿಂದ ಪ್ರೇರಿತವಾಗಿದೆ. ಸನ್ನಿ ಡಿಯೋಲ್, ಜಾಕಿ ಶ್ರಾಫ್, ಸುನೀಲ್ ಶೆಟ್ಟಿ, ಅಕ್ಷಯ್ ಖುನ್ನಾ, ಪುನೀತ್ ಇಸ್ಸಾರ್ ಮತ್ತು ಕುಲಭೂಷಣ್ ಖರ್ಬಂದ ಚಿತ್ರದ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. 1998 ರಲ್ಲಿ ಈ ಚಿತ್ರದ ನಿರ್ದೇಶನಕ್ಕಾಗಿ ಜೆ.ಪಿ ದತ್ತಾ ಅವರು ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ.
'ಎಲ್.ಒ.ಸಿ ಕಾರ್ಗಿಲ್': 1999 ರ ಭಾರತ ಮತ್ತು ಪಾಕಿಸ್ತಾನದ ಕಾರ್ಗಿಲ್ ಯುದ್ಧದಿಂದ 'ಎಲ್.ಒ.ಸಿ ಕಾರ್ಗಿಲ್' ಚಿತ್ರವು ಸ್ಪೂರ್ತಿ ಪಡೆಯಿತು. ಈ ಚಿತ್ರವು 2003 ರಲ್ಲಿ ಬಿಡುಗಡೆಯಾಗಿದ್ದು, ಸಂಜಯ್ ದತ್, ಅಭಿಷೇಕ್ ಬಚ್ಚನ್, ಅಜಯ್ ದೇವಗನ್, ಸೈಫ್ ಅಲಿ ಖಾನ್ ಮತ್ತು ಅಕ್ಷಯ್ ಖನ್ನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 225 ನಿಮಿಷವನ್ನು ಒಳಗೊಂಡ ಈ ಸಿನಿಮಾವು ಇದುವರೆಗೆ ರಚಿಸಲಾದ ಅತಿ ಉದ್ದದ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿದೆ.
'ಮೇಜರ್': ಶಶಿ ಕಿರಣ್ ಟಿಕ್ಕಾ ನಿರ್ದೇಶನದಲ್ಲಿ ಮೂಡಿ ಬಂದ ಪ್ಯಾನ್ ಇಂಡಿಯಾ ಚಲನಚಿತ್ರ 'ಮೇಜರ್' ಆಗಿದೆ. ಅಡವಿಶೇಷ್ ಅಭಿನಯಿಸಿರುವ ಈ ಚಿತ್ರ 2022 ರ ಜೂನ್ 3 ರಂದು ವಿಶ್ವದಾದ್ಯಂತ ಬಿಡುಗಡೆಗೊಂಡು ಯಶಸ್ವಿಯಾಗಿತ್ತು. 26/11 ಮುಂಬೈನ ತಾಜ್ ಹೋಟೆಲ್ ಮೇಲಿನ ಭಯೋತ್ಪಾದಕ ದಾಳಿಯಲ್ಲಿ ವೀರ ಮರಣ ಹೊಂದಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಕುರಿತಾದ ಸಿನೆಮಾ ಇದಾಗಿದೆ. ಈ ಚಿತ್ರದಲ್ಲಿ ಸಾಯಿ ಮಂಜ್ರೇಕರ್, ಸೋಭಿತಾ ಧೂಳಿಪಳ್ಳ, ರೇವತಿ, ಪ್ರಕಾಶ್ರಾಜ್ ಮತ್ತು ಮುರಳಿ ಶರ್ಮಾ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇನ್ನೊಂದು ವಿಶೇಷವೆಂದರೆ ಸೂಪರ್ ಸ್ಟಾರ್ ಮಹೇಶ್ ಬಾಬು ನಿರ್ಮಾಣದ ಪಾಲುದಾರರಾಗಿದ್ದಾರೆ.
ಸರ್ಜಿಕಲ್ ಸ್ಟ್ರೈಕ್ 'ಉರಿ': ಆದಿತ್ಯ ಧಾರ್ ನಿರ್ದೇಶನದ 'ಉರಿ' ಸಿನಿಮಾ 2019 ರ ಜನವರಿ 11 ರಂದು ಬಿಡುಗಡೆಯಾಯಿತು. ಇದು 2016 ರ ಭಾರತೀಯ ಸೇನೆಯ ಸರ್ಜಿಕಲ್ ಸ್ಟ್ರೈಕ್ ಅನ್ನು ಆಧರಿಸಿದೆ. ಈ ಚಿತ್ರದಲ್ಲಿ ವಿಕ್ಕಿ ಕೌಶಲ್, ಯಾಮಿ ಗೌತಮ್ ಮತ್ತು ಪರೇಶ್ ರಾವಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಆರ್ಆರ್ಆರ್ ಹೊಗಳಿದ ಅವತಾರ್ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್: ಪ್ರಪಂಚದ ಉತ್ತುಂಗದಲ್ಲಿದ್ದೇನೆ ಎಂದ ನಿರ್ದೇಶಕ ರಾಜಮೌಳಿ