ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ನಟಿ ಆಲಿಯಾ ಭಟ್ ಅವರ ಸೀಮಂತ ಶಾಸ್ತ್ರ ಮುಂಬೈನಲ್ಲಿರುವ ಅವರ ನಿವಾಸದಲ್ಲಿಂದು ಅದ್ಧೂರಿಯಾಗಿ ನಡೆದಿದೆ.
ನಟಿ ಅನುಷ್ಕಾ ರಂಜನ್ ಇಂದು ಇನ್ಸ್ಟಾಗ್ರಾಮ್ನಲ್ಲಿ ಆಲಿಯಾ ಭಟ್ ಅವರ ಸೀಮಂತ ಶಾಸ್ತ್ರದ ಫೋಟೋ ಹಂಚಿಕೊಂಡಿದ್ದಾರೆ. ಆಲಿಯಾ ಹಳದಿ ಬಣ್ಣದ ಉಡುಪು ಧರಿಸಿರುವುದನ್ನು ಈ ಫೋಟೋದಲ್ಲಿ ಕಾಣಬಹುದು. ಆಲಿಯಾರೊಂದಿಗೆ ಸ್ನೇಹಿತೆಯರಾದ ಅನುಷ್ಕಾ, ರಿಷಿಕಾ ಮೋಘೆ ಮತ್ತು ಅವರ ಸಹೋದರಿ ಶಾಹೀನ್ ಭಟ್ ನಿಂತಿದ್ದಾರೆ.

ಚಿತ್ರ ಹೊರಬಿದ್ದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೀಮಂತ ಶಾಸ್ತ್ರದಲ್ಲಿ ಅತ್ತೆ ನೀತು ಕಪೂರ್, ಪತಿ ರಣ್ಬೀರ್ ಕಪೂರ್, ರಿದ್ಧಿಮಾ ಕಪೂರ್, ಆಲಿಯಾ ತಂದೆ ಮಹೇಶ್ ಭಟ್, ನಿರ್ದೇಶಕ ಅಯಾನ್ ಮುಖರ್ಜಿ, ಪೂಜಾ ಭಟ್, ಕರಿಷ್ಮಾ ಕಪೂರ್ ಸೇರಿದಂತೆ ಅನೇಕ ದೊಡ್ಡ ಬಿ-ಟೌನ್ ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ.
ಇದನ್ನೂ ಓದಿ: ರಿಚಾ - ಅಲಿ ವಿವಾಹ ಆರತಕ್ಷತೆ ಸಮಾರಂಭಕ್ಕೆ ಗೆಳತಿಯೊಂದಿಗೆ ಆಗಮಿಸಿದ ನಟ ಹೃತಿಕ್ ರೋಷನ್
ಬಹು ದಿನಗಳಿಂದ ಡೇಟಿಂಗ್ನಲ್ಲಿದ್ದ ರಾಲಿಯಾ ಜೋಡಿ ತಮ್ಮ ನಿವಾಸದಲ್ಲೇ ಈ ವರ್ಷ ಏಪ್ರಿಲ್ 14ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿ ಅಭಿಮಾನಿಗಳ ಸಂತಸಕ್ಕೆ ಕಾರಣರಾಗಿದ್ದರು. ಮದುವೆಯಾಗಿ ಸರಿ ಸುಮಾರು 57ನೇ ದಿನಕ್ಕೆ ತಾವು ತಾಯಿ ಆಗುತ್ತಿರುವುದಾಗಿ ಆಲಿಯಾ ಭಟ್ ತಿಳಿಸುವ ಮೂಲಕ ಅಭಿಮಾನಿಗಳ ಸಂತಸವನ್ನು ಇಮ್ಮಡಿಗೊಳಿಸಿದ್ದರು. ಶೀಘ್ರದಲ್ಲೇ ಚೋಟಾ ಆಲಿಯಾ ಅಥವಾ ಚೋಟಾ ರಣ್ಬೀರ್ ಆಗಮನವಾಗಲಿದ್ದು ಇಂದು ತಮ್ಮ ಕುಟುಂಬಸ್ಥರು, ಆತ್ಮೀಯರೊಂದಿಗೆ ಆಲಿಯಾ ಸೀಮಂತ ಶಾಸ್ತ್ರ ಮಾಡಿಕೊಂಡಿದ್ದಾರೆ.