ರೀಲ್ನಲ್ಲಿ ಧೂಮಪಾನ ಮಾಡುವ ಅದೆಷ್ಟೋ ಸೆಲೆಬ್ರಿಟಿಗಳು ರಿಯಲ್ ಲೈಫ್ನಲ್ಲಿ ಅದರಿಂದ ದೂರವಿದ್ದಾರೆ ಅನ್ನೋದು ನಿಮಗೆ ಗೊತ್ತಾ? ಸಿಗರೇಟು ಸೇದದೇ ಇರುವುದು ಅಷ್ಟೇ ಅಲ್ಲದೇ ಧೂಮಪಾನ ಮಾಡದಂತೆ ಈ ಬಗ್ಗೆ ಸಾಕಷ್ಟು ಜಾಗೃತಿ ಕೂಡ ಮೂಡಿಸುತ್ತಿದ್ದಾರೆ. ಈ ಮೂಲಕ ಯುವ ಸಮುದಾಯಕ್ಕೆ ಮಾದರಿ ಕೂಡ ಆಗಿದ್ದಾರೆ. ಮೊದ ಮೊದಲು ಇವರೆಲ್ಲ ಧೂಮಪಾನಕ್ಕೆ ದಾಸರಾದವರೇ!
ಆದರೆ, ಫಿಟ್‌ನೆಸ್ ಮತ್ತು ಆರೋಗ್ಯ ದೃಷ್ಟಿಯಿಂದ ಧೂಮಪಾನ ಮಾಡದಿರಲು ನಿರ್ಧರಿಸಿದ್ದಾರೆ ಅನ್ನೋದು ನಿಜವಾದರೂ ಅದರ ಹಿಂದಿನ ಕಥೆ ಮಾತ್ರ ಬಲು ರೋಚಕ. ಯಾರೇ ಆಗಲಿ, ಗಟ್ಟಿ ಮನಸ್ಸು ಮಾಡಿದರೆ ಅದೆಲ್ಲವೂ ಸಾಧ್ಯ ಅನ್ನೋದಕ್ಕೆ ಈ ನಟರೇ ಸಾಕ್ಷಿ. ಸದ್ಯ ಧೂಮಪಾನ ತ್ಯಜಿಸುವ ಮೂಲಕ, ಇವರು ತಮ್ಮ ಅಭಿಮಾನಿಗಳಿಗೆ ಉತ್ತಮ ಉದಾಹರಣೆಯಾಗಿದ್ದಾರೆ. ವಿಶ್ವ ತಂಬಾಕು ರಹಿತ ದಿನದಂದು (ಮೇ 31, 2023) ಅವರನ್ನು ನನೆಪು ಮಾಡಿಕೊಳ್ಳದಿದ್ದರೆ ಹೇಗೆ? ಯಾರೆಲ್ಲ ಮೊದ ಮೊದಲು ಧೂಮಪಾನಕ್ಕೆ ದಾಸರಾಗಿದ್ದರು, ಅದನ್ನು ಯಾವ ಕಾರಣಕ್ಕೆ ಬಿಟ್ಟರು ಅನ್ನೋ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಅರ್ಜುನ್ ರಾಂಪಾಲ್: ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಕೂಡ ಮೊದಲು ಧೂಮಪಾನಕ್ಕೆ ದಾಸರಾಗಿದ್ದವರು. ತಮ್ಮ ಮಕ್ಕಳಿಗಾಗಿ ಈ ಧೂಮಪಾನವನ್ನು ತ್ಯಜಿಸುವ ನಿರ್ಧಾರ ಮಾಡಿದರು ಅನ್ನೋದು ಹಳೆಯ ಮಾತು. ಈ ಬಗ್ಗೆ ಅವರು ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದುಂಟು. ಭವಿಷದ್ಯದ ಉತ್ತಮ ಜೀವನಕ್ಕಾಗಿ ಈ ನಿರ್ಧಾರ ಮಾಡಿರುವೆ ಎಂದು ಹೇಳಿದ್ದ ಅವರು, ಮಕ್ಕಳ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರದೇ ಇರದು. ಹಾಗಾಗಿ ಈ ಕಾರಣದಿಂದ ಧೂಮಪಾನದಿಂದ ಮುಕ್ತನಾಗುತ್ತಿದ್ದೇನೆ ಎಂದು ಅವರು ಹೇಳಿದ್ದರು. ಅದರಂತೆ ಇದೀಗ ಅರ್ಜುನ್ ರಾಂಪಾಲ್ ಧೂಮಪಾನದಿಂದ ದೂರವಿದ್ದಾರೆ.
ಹೃತಿಕ್ ರೋಷನ್: ಫಿಟ್‌ನೆಸ್ ವಿಚಾರದಲ್ಲಿ ಹೆಸರುವಾಸಿಯಾಗಿರುವ ಮತ್ತೊಬ್ಬ ಬಾಲಿವುಡ್ ನಟ ಹೃತಿಕ್ ರೋಷನ್, ಈ ಹಿಂದೆ ಧೂಮಪಾನದ ದಾಸರಾಗಿದ್ದರು ಅನ್ನೋದು ಹಲವರಿಗೆ ಗೊತ್ತಿಲ್ಲ. ಆದರೆ, ಅಲೆನ್ ಕಾರ್ ಅವರು ಬರೆದಿರುವ 'ಈಸಿ ವೇ ಟು ಸ್ಟಾಪ್ ಸ್ಮೋಕಿಂಗ್' ಎಂಬ ಪುಸ್ತಕದಿಂದ ಪ್ರೇರೇಪಿತರಾದ ಹೃತಿಕ್, ಧೂಮಪಾನ ತ್ಯಜಿಸಿದರು. ಅದಕ್ಕೂ ಮುನ್ನ ಈ ಧೂಮಪಾನದಿಂದ ಹೊರಬರಲು ಹಲವು ಸಲ ಪ್ರಯತ್ನ ಕೂಡ ಮಾಡಿದ್ದರಂತೆ. ಆದರೆ, ಕಟು ನಿರ್ಧಾರ ಮಾಡದ್ದರಿಂದ ಅದು ವಿಫಲಗೊಂಡಿತ್ತು. ಆದರೆ, ಈ ಪುಸ್ತಕ ಓದಿದ ಬಳಿಕ ಧೂಮಪಾನ ತ್ಯಜಿಸಲು ಸರಳವಾಯಿತು ಎಂದು ಟ್ವಿಟರ್‌ನಲ್ಲಿ ಅವರೇ ಹೇಳಿಕೊಂಡಿದ್ದುಂಟು.
ಅಕ್ಷಯ್ ಕುಮಾರ್: ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡ ಈ ಪಟ್ಟಿಯಿಂದ ಹೊರತಾಗಿಲ್ಲ. ತಮ್ಮ ಕಟ್ಟುನಿಟ್ಟಾದ ಫಿಟ್‌ನೆಸ್, ಕಟ್ಟುಪಾಡು ಮತ್ತು ಆರೋಗ್ಯಕರ ಜೀವನಶೈಲಿಗೆ ಅಕ್ಷಯ್ ಕುಮಾರ್ ಹೆಸರುವಾಸಿಯಾದವರು. ಅದೆಷ್ಟೋ ಜಾಹೀರಾತುಗಳ ಮೂಲಕ ಧೂಮಪಾನ ಮಾಡದಂತೆ ಜನರಿಗೆ ತಿಳಿ ಹೇಳಿದ್ದುಂಟು. ಧೂಮಪಾನ ಅಥವಾ ಮದ್ಯಪಾನದಲ್ಲಿ ತೊಡಗಿಸಿಕೊಳ್ಳದಂತೆ ಸಾಕಷ್ಟು ಜಾಗೃತಿ ಕೂಡ ಮೂಡಿಸುತ್ತಿದ್ದಾರೆ. ಈವರೆಗೂ ಶಿಸ್ತುಬದ್ಧ ಜೀವನ ನಡೆಸುತ್ತಿರುವ ಅಕ್ಷಯ್ ಕುಮಾರ್ ಅವರು ಎಲ್ಲರಿಗೂ ಮಾದರಿಯಾಗುತ್ತಾರೆ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ ಅನ್ನೋದು ಅವರ ಮಾತು.
ಜಾನ್ ಅಬ್ರಹಾಂ: ಫಿಟ್‌ನೆಸ್ ವಿಚಾರದಲ್ಲಿ ಜಾನ್ ಅಬ್ರಹಾಂ ಕೂಡ ಹಿಂದೆ ಬಿದ್ದವರಲ್ಲ. ಅದರಂತೆ ಧೂಮಪಾನ ಕೂಡ. ಧೂಮಪಾನದಿಂದ ದೂರವಿರುವ ಜಾನ್ ಅಬ್ರಹಾಂ ಅವರ ಜೀವನಶೈಲಿಯೇ ವಿಭಿನ್ನ ಅನ್ನೋದು ಹಲವರಿಗೆ ಗೊತ್ತಿಲ್ಲ. ಪಾರ್ಟಿಗಳಂತಹ ಮೋಜು-ಮಸ್ತಿಗಳಿಂದ ದೂರುವಿರುವ ಇವರು, ಶಿಸ್ತು ಅನ್ನು ರೂಢಿಸಿಕೊಂಡವರು. ಮದ್ಯಪಾನ, ಧೂಮಪಾನ ಸೇರಿದಂತೆ ಅಮಲು ಪದಾರ್ಥಗಳನ್ನು ಸೇವಿಸದಿರುವ ಬಗ್ಗೆ ಮತ್ತು ಅಂತವುಗಳಿಂದ ಶಾಶ್ವತ ದೂರ ಇರುವಂತೆ ಯುವ ಸಮುದಾಯಕ್ಕೆ ಆಗಾಗ್ಗೆ ನೀತಿ ಪಾಠ ಮಾಡುತ್ತಲೇ ಇರುತ್ತಾರೆ. ಜಿಮ್ನಲ್ಲಿ ವರ್ಕೌಟ್ ಮಾಡುವುವುದು ಅವರ ದಿನದ ಅಭ್ಯಾಸ.
ವಿವೇಕ್ ಒಬೆರಾಯ್: ಬಾಲಿವುಡ್ನ ಮತ್ತೊಬ್ಬ ನಟ ವಿವೇಕ್ ಒಬೆರಾಯ್ ಕೂಡ ಒಂದು ಕಾಲದಲ್ಲಿ ಧೂಮಪಾನ ದಾಸರಾಗಿದ್ದರು ಅನ್ನೋದು ಕೂಡ ಬಹಳ ಜನಕ್ಕೆ ಗೊತ್ತಿಲ್ಲ. ಒಂದೇ ಒಂದು ಭೇಟಿ ಅವರನ್ನು ಇದರಿಂದ ಮುಕ್ತ ಮಾಡಿತಂತೆ. ಈ ಮಾತನ್ನು ಸ್ವತಃ ಅವರೇ ಎಷ್ಟೋ ಸಲ ಹೇಳಿದ್ದುಂಟು. ಮುಂಬೈನ ಕ್ಯಾನ್ಸರ್ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ನಾನು ನನ್ನ ಜೀವನಶೈಲಿಯನ್ನೇ ಬದಲು ಮಾಡಿಕೊಂಡೆ ಎಂದು ಅವರು ಆಗಾಗ ನೆನಪು ಮಾಡಿಕೊಳ್ಳುತ್ತಿರುತ್ತಾರೆ. ಅಷ್ಟಕ್ಕೆ ಸುಮ್ಮನಾಗದ ವಿವೇಕ್ ಒಬೆರಾಯ್, ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಜಾಹೀರಾತುಗಳ ಮೂಲಕ ಜಾಗೃತಿ ಮೂಡಿಸುವಲ್ಲಿಯೂ ಕೈ ಜೋಡಿಸಿದರು.
ಇವರಷ್ಟೇ ಅಲ್ಲದೇ ಅದೆಷ್ಟೋ ಸೆಲೆಬ್ರಿಟಿಗಳು ಧೂಮಪಾನದಿಂದ ದೂರವಿದ್ದಾರೆ. ಇತರರಿಗೂ ಮಾದರಿಯಾಗಿದ್ದಾರೆ. ಅಲ್ಲದೇ ಧೂಮಪಾನ ದಾಸರಾಗದಂತೆ ಬಗೆ ಬಗೆಯ ಜಾಹೀರಾತುಗಳ ಮೂಲಕ ಜಾಗೃತಿ ಮೂಡಿಸುವಲ್ಲಿಯೂ ಕೈ ಜೋಡಿಸುತ್ತಿದ್ದಾರೆ.
ಇದನ್ನೂ ಓದಿ: ಆಲಿಯಾ ಭಟ್ ಅಜ್ಜ ನರೇಂದ್ರನಾಥ್ ರಜ್ದಾನ್ ನಿಧನ: ಮೊಮ್ಮಗಳಿಂದ ಭಾವನಾತ್ಮಕ ಪೋಸ್ಟ್