ಹೈದರಾಬಾದ್: ಮತ್ತೊಂದು ಸೆಲೆಬ್ರಿಟಿ ಮದುವೆಗೆ ಬಾಲಿವುಡ್ ಸಾಕ್ಷಿಯಾಗಲಿದೆ. ಬಹುದಿನಗಳಿಂದ ಡೇಟಿಂಗ್ನಲ್ಲಿದ್ದ ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ಕಡೆಗೂ ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ. ಸುನೀಲ್ ಶೆಟ್ಟಿ ಮುದ್ದಿನ ಮಗಳ ಮದುವೆ ಅವರ ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಖಂಡಾಲದಲ್ಲಿರುವ ಬಂಗಲೆಯಲ್ಲಿ ಅದ್ದೂರಿಯಾಗಿ ನಡೆಯಲಿದೆ. ಈಗಾಗಲೇ ಅಥಿಯಾ ಶೆಟ್ಟಿಯನ್ನು ವರಿಸಲು ಕೆಎಲ್ ರಾಹುಲ್ ಮೆನಯಲ್ಲಿ ಎಲ್ಲ ಸಿದ್ದತೆ ನಡೆಸಲಾಗಿದ್ದು, ಮುಂಬೈನ ಬಾಂದ್ರಾದಲ್ಲಿರುವ ಕೆಎಲ್ ರಾಹುಲ್ ಮನೆ ಕೂಡ ಮದುವೆ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಮನೆ ಮುಂದೆ ಝಗಮಗಿಸುವ ದೀಪಗಳು ಕಂಡು ಬಂದಿದೆ.
ಖಂಡಾಲ ನಿವಾಸದಲ್ಲಿ ಮದುವೆ: ಜನವರಿ 23 ರಂದು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಈ ಜೋಡಿಗಳು ವಿವಾಹ ಬಂಧನಕ್ಕೆ ಒಳಗಾಗಲಿದ್ದು, ಈಗಾಗಲೇ ಮದುವೆ ಪೂರ್ವದ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ಆದರೆ, ಈ ಬಗ್ಗೆ ಕುಟುಂಬಸ್ಥರು ಈ ಮದುವೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಖಂಡಾಲದ ನಿವಾಸದಲ್ಲಿ ಮೂರು ದಿನಗಳ ಕಾಲ ಈ ವಿವಾಹ ಸಮಾರಂಭ ನಡೆಯಲಿದ್ದು, ಇದೇ ಹಿನ್ನೆಲೆ ರಾಹುಲ್ ನ್ಯೂಜಿಲ್ಯಾಂಡ್ನಲ್ಲಿ ನಡೆಯಲಿರುವ ಪಂದ್ಯದಿಂದ ಹೊರಗೆ ಉಳಿದಿದ್ದಾರೆ.
ಸಂಬಂಧಿಕರು- ಆಪ್ತರ ಸಮ್ಮುಖದಲ್ಲಿ ಮದುವೆ: ಇನ್ನು ಈ ಮದುವೆಗೆ ಗಣ್ಯರು ಮತ್ತು ಆಪ್ತರಿಗೆ ಮಾತ್ರ ಆಮಂತ್ರಣ ನೀಡಲಾಗಿದೆ ಎನ್ನಲಾಗಿದೆ. ಕ್ರಿಕೆಟಿಗರು ಮತ್ತು ಬಾಲಿವುಡ್ ಮಂದಿ ಇವರ ವಿವಾಹ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಮದುವೆಗೆ ಆಗಮಿಸುತ್ತಿರುವವರ ಈ ಪಟ್ಟಿಯಲ್ಲಿ ಕ್ರಿಕೆಟಿಗ ಎಂಎಸ್ ಧೋನಿ, ವಿರಾಟ್ ಕೊಹ್ಲಿ, ಬಾಲಿವುಡ್ ಸೂಪರ್ ಸ್ಟಾರ್ಗಳಾದ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಜಾಕಿ ಶ್ರಾಫ್ ಸೇರಿದಂತೆ ಮುಂತಾದ ಹೆಸರಿದೆ.
ಗುಟ್ಟು ಬಿಟ್ಟು ಕೊಡದ ಜೋಡಿ ಬಹು ವರ್ಷಗಳಿಂದ ಈ ಜೋಡಿ ಡೇಟಿಂಗ್ ನಡೆಸುತ್ತಿದ್ದರು. ತಮ್ಮ ಪ್ರೀತಿಯಾಗಲಿ ಅಥವಾ ಮದುವೆ ಬಗ್ಗೆ ಆಗಲಿ ಇದುವರೆಗೂ ಈ ಜೋಡಿ ಯಾವುದೇ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ. ಈ ಜೋಡಿಗಳು ಹೊಸ ವರ್ಷದ ಆಚರಣೆಯನ್ನು ಒಟ್ಟಾಗಿ ದುಬೈನಲ್ಲಿ ಆಚರಿಸಿದ್ದರು. ಈ ಸಂಬಂಧ ಅನೇಕ ಫೋಟೋಗಳನ್ನು ಕೂಡ ಕ್ರಿಕೆಟಿಗ ಕೆಎಲ್ ರಾಹುಲ್ ಹಂಚಿಕೊಂಡಿದ್ದರು.
ಅಲ್ಲದೇ, ಕಳೆದ ನವೆಂಬರ್ನಲ್ಲಿ ಅಥಿಯಾ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಸಾಮಾಜಿಕ ಜಾಲತಾಣದಲ್ಲಿ ಕೆಎಲ್ ರಾಹುಲ್ ಶುಭ ಕೋರಿದ್ದರು. ಮುದ್ದಾದ ಫೋಟೋ ಹಂಚಿಕೊಂಡಿದ್ದ ರಾಹುಲ್ ನನ್ನ ಜೀವನವನ್ನು ಉತ್ತಮವಾಗಿಸಿದ ಹಾಗೂ ಹುಟ್ಟು ಹಬ್ಬದ ಶುಭಾಶಯ ಎಂದು ಹಾರ್ಟ್ ಎಮೋಜಿ ಹಾಕಿದ್ದರು. 2021ರಲ್ಲಿ ತಮ್ಮ ಡೇಟಿಂಗ್ ವಿಷಯವನ್ನು ಅಧಿಕೃತ ಪಡಿಸಿದ ರಾಹುಲ್, ಕಳೆದ ನಾಲ್ಕು ವರ್ಷದಿಂದ ಇಬ್ಬರು ಸಂಬಂಧದಲ್ಲಿ ಇರುವುದಾಗಿ ತಿಳಿಸಿದ್ದರು.
ಬಾಲಿವುಡ್ ಸೂಪರ್ ಸ್ಟಾರ್ ಸುನೀಲ್ ಶೆಟ್ಟಿ ಮಗಳಾಗಿರುವ ಅಥಿಯಾ 2015ರಲ್ಲಿ ಸೂರಜ್ ಪಂಚೋಲಿ ಜೊತೆ ನಟಿಸುವ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು, ಅಲ್ಲದೇ ಮುಬರಕನ್ ಮತ್ತು ಮೋತಿಚೂರ್ ಚಂಕ್ನಚೂರ್ ಸಿನಿಮಾಗಳಲ್ಲಿ ಕೂಡ ನಟಿಸಿದ್ದರು. ಬಾಲಿವುಡ್ನಲ್ಲಿ ಹೇಳಿಕೊಳ್ಳುವಂತ ಹಿಟ್ ಸಿಗದ ನಟಿ, ಕೆಎಲ್ ರಾಹುಲ್ ಜೊತೆ ಕಾಣಿಸಿಕೊಳ್ಳುವ ಮೂಲಕವೇ ಹೆಚ್ಚು ಸದ್ದು ಮಾಡಿದ್ದರು.