ಮುಂಬೈ(ಮಹಾರಾಷ್ಟ್ರ): ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನಾಧಾರಿತ ಚಿತ್ರವೊಂದು ನಿರ್ಮಾಣ ಹಂತದಲ್ಲಿದ್ದು, ಅಟಲ್ಜೀ ಪಾತ್ರ ನಿರ್ವಹಿಸಲು ಸೂಕ್ತ ನಟನ ಹುಡುಕಾಟ ನಡೆಯುತ್ತಿದೆ. ಚಿತ್ರ ತಯಾರಕರು ಶೀಘ್ರದಲ್ಲೇ ನಾಯಕ ನಟ ಹಾಗೂ ನಿರ್ದೇಶಕರನ್ನು ಘೋಷಣೆ ಮಾಡಲಿದ್ದಾರೆ.
ವಾಜಪೇಯಿ ಜೀವನವನ್ನು ತೆರೆ ಮೇಲೆ ತರಲು ನಿರ್ಮಾಪಕರಾದ ವಿನೋದ್ ಭಾನುಶಾಲಿ ಮತ್ತು ಸಂದೀಪ್ ಸಿಂಗ್ ಒಟ್ಟಾಗಿ ಕೆಲಸ ಮಾಡ್ತಿದ್ದಾರೆ. ಬಯೋಪಿಕ್‌ಗೆ Main Rahoon Ya Na Rahoon, Yeh Desh Rehna Chahiye: ATAL(ಮೈನ್ ರಹೂನ್ ಯಾ ನಾ ರಹೂನ್, ಯೇ ದೇಶ್ ರೆಹನಾ ಚಾಹಿಯೇ - ATAL) ಎಂದು ಶೀರ್ಷಿಕೆ ನೀಡಲಾಗಿದೆ. ಈ ಚಿತ್ರ ಹೆಸರಾಂತ ಲೇಖಕ ಉಲ್ಲೇಖ್ ಎನ್ಪಿಯವರ The Untold Vajpayee: Politician and Paradox ಪುಸ್ತಕದ ರೂಪಾಂತರವಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ನಿರ್ಮಾಪಕರಾದ ವಿನೋದ್, "ನನ್ನ ಜೀವನದುದ್ದಕ್ಕೂ ಅಟಲ್ಜೀ ಅವರ ದೊಡ್ಡ ಅಭಿಮಾನಿ. ಹುಟ್ಟು ನಾಯಕ, ರಾಜನೀತಿ ತಜ್ಞ, ದೂರದೃಷ್ಟಿ ಹೊಂದಿದ್ದ ಅಟಲ್ ಬಿಹಾರಿ ವಾಜಪೇಯಿ ರಾಷ್ಟ್ರ ನಿರ್ಮಾಣದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಹೀಗಾಗಿ ಅವರ ಜೀವನವನ್ನು ಬೆಳ್ಳಿ ತೆರೆಗೆ ತರಲು ಮುಂದಾಗಿದ್ದೇವೆ" ಎಂದಿದ್ದಾರೆ.
ಇದನ್ನೂ ಓದಿ: ಕಿಚ್ಚನನ್ನು ನೋಡಬೇಕಂತೆ ಆ್ಯಸಿಡ್ ದಾಳಿ ಸಂತ್ರಸ್ತೆ.. ಸ್ಪಂದಿಸುತ್ತಾರಾ ಸುದೀಪ್?
ಮತ್ತೋರ್ವ ನಿರ್ಮಾಪಕ ಸಂದೀಪ್ ಸಿಂಗ್ ಮಾತನಾಡಿ, "ದಿಗ್ಗಜರ ಬಗ್ಗೆ ಜನರಿಗೆ ತಿಳಿಸಲು ಸಿನಿಮಾ ಅತ್ಯುತ್ತಮ ಮಾಧ್ಯಮ ಎಂದು ನಾನು ಭಾವಿಸುತ್ತೇನೆ. ರಾಜಕೀಯ ಸಿದ್ಧಾಂತ ಮಾತ್ರವಲ್ಲದೇ ಮಾನವೀಯ ಮತ್ತು ಕಾವ್ಯಾತ್ಮಕ ಅಂಶ ಅನಾವರಣಗೊಳಿಸುವ ಉದ್ದೇಶವಿದೆ" ಎಂದರು.
ಅಟಲ್ಜೀ ಪಾತ್ರ ನಿರ್ವಹಿಸಲು ನಾಯಕ ನಟನ ಹುಡುಕಾಟ ನಡೆಸಲಾಗುತ್ತಿದೆ. ಶೀಘ್ರದಲ್ಲೇ ನಟ ಹಾಗೂ ನಿರ್ದೇಶಕರನ್ನು ಘೋಷಣೆ ಮಾಡಲಿದ್ದೇವೆ. 2023ರ ಆರಂಭದಲ್ಲಿ ಚಿತ್ರದ ಶೂಟಿಂಗ್ ಆರಂಭಗೊಳ್ಳಲಿದ್ದು, ಅವರ 99ನೇ ಜನ್ಮ ವಾರ್ಷಿಕೋತ್ಸವದಂದು ಸಿನಿಮಾ ಬಿಡುಗಡೆ ಮಾಡುವ ಯೋಜನೆ ಇದೆ ಎಂದು ತಿಳಿಸಿದರು.