ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಮಿಂಚಿದವರು ಸಿನಿಮಾಗೆ ಬರೋದು ಹೊಸತೇನಲ್ಲ. ಅದರಲ್ಲಿ ಕೆಲವರು ಬಿಗ್ ಸ್ಕ್ರೀನ್ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡರೆ, ಮತ್ತೆ ಕೆಲವರು ಸೈಲೆಂಟ್ ಆಗಿ ತೆರೆಮರೆಗೆ ಸರಿದುಬಿಡುತ್ತಾರೆ. ಇದೀಗ ಬಿಗ್ ಬಾಸ್ ಖ್ಯಾತಿಯ ಶೃತಿ ಪ್ರಕಾಶ್ ಅವರ ಸಿನಿಮಾವೊಂದು ಸೆಟ್ಟೇರಿದೆ. ಕನ್ನಡ, ತಮಿಳು ಹಾಗೂ ಹಿಂದಿ ಚಿತ್ರಗಳಲ್ಲಿ ತಮ್ಮದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿರುವ ಶೃತಿ ಪ್ರಕಾಶ್ ಅವರೀಗ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದೊಂದಿಗೆ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ.
ಈ ಚಿತ್ರಕ್ಕೆ 'ಫ್ರೈಡೇ' ಅಂತಾ ಟೈಟಲ್ ಇಡಲಾಗಿದೆ. ಮೇಡ್ ಇನ್ ಬೆಂಗಳೂರು ಚಿತ್ರದ ನಾಯಕ ಮಧುಸೂದನ್ ಗೋವಿಂದ್ ಅವರು ಶೃತಿ ಪ್ರಕಾಶ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ. ಇತ್ತೀಚೆಗೆ "ಫ್ರೈಡೇ" ಚಿತ್ರದ ಮುಹೂರ್ತ ಸಮಾರಂಭ ಧರ್ಮಗಿರಿ ಶ್ರೀಮಂಜುನಾಥ ದೇವಸ್ಥಾನದಲ್ಲಿ ನೆರವೇರಿತು. ಈ ಹಿಂದೆ ಹೊಸ ದಿನಚರಿ ಚಿತ್ರವನ್ನು ನಿರ್ದೇಶಿಸಿದ್ದ ಕೀರ್ತಿ ಶೇಖರ್ ಹಾಗೂ ವೈಶಾಖ್ ಪುಷ್ಪಲತ ಜಂಟಿಯಾಗಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಫ್ರೈಡೇ ಚಿತ್ರದ ಇಬ್ಬರು ನಿರ್ದೇಶಕರಲ್ಲಿ ಒಬ್ಬರಾದ ವೈಶಾಖ್ ಪುಷ್ಪಲತ ಮಾತನಾಡಿ, ಸಿನಿಮಾದವರಿಗೆ ಫ್ರೈಡೇ ಎಂದರೆ ವಿಶೇಷ. ನಮಗೂ ಹಾಗೆ. ಏಕೆಂದರೆ ನಮ್ಮ ಚಿತ್ರದ ಹೆಸರು ಫ್ರೈಡೇ. ಸಿನಿಮಾ ಬಿಡುಗಡೆಯಾಗುವುದು " ಫ್ರೈಡೇ ". ಆ "ಫ್ರೈಡೇ"ಗೂ ನಮ್ಮ ಚಿತ್ರಕ್ಕೂ ನಂಟಿದೆ. ಬಿಡುಗಡೆಯಾದ ಹೊಸ ಚಿತ್ರವನ್ನು ನೋಡಲು ಹೋಗಿದ್ದ ದಂಪತಿ ಜೀವನದಲ್ಲಿ ನಡೆಯಬಾರದ ಒಂದು ಘಟನೆ ನಡೆದೇ ಹೋಗುತ್ತದೆ. ಅದೇ ಈ ಚಿತ್ರದ ಕಥಾಹಂದರ. ಮಧುಸೂದನ್ ಗೋವಿಂದ್, ಶೃತಿ ಪ್ರಕಾಶ್ ಹಾಗೂ ಗೋಪಾಲಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಾನು ಕಥೆ, ಚಿತ್ರಕಥೆಯನ್ನು ಬರೆದಿದ್ದೇನೆಂದು ಮಾಹಿತಿ ಹಂಚಿಕೊಂಡರು.
ಇನ್ನೂ ಫ್ರೈಡೇ ಚಿತ್ರದ ಮತ್ತೊಬ್ಬ ನಿರ್ದೇಶಕರಾದ ಕೀರ್ತಿ ಶೇಖರ್ ಮಾತನಾಡಿ, "ಫ್ರೈಡೇ" ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಮೂರು ಹಾಡುಗಳಿವೆ. ಅಶ್ವಿನ್ ಹೇಮಂತ್ ಸಂಗೀತ ನಿರ್ದೇಶನ ಹಾಗೂ ಸಂದೀಪ್ ವಲ್ಲೂರಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರ ನಿರ್ಮಾಣವಾಗಲಿದೆ. ಈ ಚಿತ್ರದಲ್ಲಿ ಶೃತಿ ಪ್ರಕಾಶ್, ಮಧುಸೂದನ್ ಗೋವಿಂದ್ ಅಲ್ಲದೇ ಸಾಕಷ್ಟು ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ವಿಜಯಕಾಂತ್ ಸಿನಿಪಯಣ: 150 ಸಿನಿಮಾ, ಒಂದೇ ವರ್ಷ 18 ಚಿತ್ರ ತೆರೆಗೆ
'Dees films'ನ ನಾಲ್ಕನೇ ಚಿತ್ರವಿದು. Dees films ಮತ್ತು shoolin media ಸಹಯೋಗದೊಂದಿಗೆ ನಿರ್ಮಾಪಕ ಮೃತ್ಯುಂಜಯ ಶುಕ್ಲ ಹಾಗೂ ಅಲೋಕ್ ಚೌರಾಸಿಯಾ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಜೊತೆಗೆ ಕ್ರಿಯೇಟಿವ್ ನಿರ್ಮಾಪಕರಾಗಿ ಗಂಗಾಧರ್ ಸಾಲಿಮಠ ಕೆಲಸ ಮಾಡಲಿದ್ದಾರೆ. ಇವರು ಈ ಹಿಂದೆ ಆಯನ, ಹೊಸ ದಿನಚರಿ ಹಾಗೂ ಗ್ರೇ ಗೇಮ್ಸ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಸದ್ಯ ಟೈಟಲ್ನಿಂದಲೇ ಗಮನ ಸೆಳೆಯುತ್ತಿರೋ ಫ್ರೈಡೇ ತಂಡ ಜನವರಿಯಿಂದ ಚಿತ್ರೀಕರಣ ಶುರು ಮಾಡಲು ಸಿದ್ಧತೆ ಮಾಡಿಕೊಂಡಿದೆ.
ಇದನ್ನೂ ಓದಿ: ಧಾರ್ಮಿಕ ನಂಬಿಕೆಗೆ ಧಕ್ಕೆ ತಂದ ಆರೋಪ: ರಣ್ಬೀರ್ ವಿರುದ್ಧ ದೂರು