ಬಾಲಿವುಡ್ ಸೂಪರ್ಸ್ಟಾರ್ಗಳಾದ ರಾಜ್‌ಕುಮಾರ್ ರಾವ್ ಮತ್ತು ಭೂಮಿ ಪೆಡ್ನೇಕರ್ ಅಭಿನಯದ ಭೀಡ್ (Bheed) ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರತಂಡ ಶುಕ್ರವಾರ ಬೆಳಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಟ್ರೇಲರ್ ಅನ್ನು ಅನಾವರಣಗೊಳಿಸಿದ್ದಾರೆ. ಎರಡು ನಿಮಿಷ, 39 ಸೆಕೆಂಡುಗಳ ಟ್ರೇಲರ್ ಇದಾಗಿದೆ. ಅನುಭವ್ ಸಿನ್ಹಾ ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದ್ದು, ಕೋವಿಡ್ ಸಮಯದಲ್ಲಿನ ಲಾಕ್ಡೌನ್ ಕಥೆಯನ್ನು ಹೇಳುತ್ತದೆ.
- " class="align-text-top noRightClick twitterSection" data="">
ಚಿತ್ರಕಥೆ ಹೀಗಿದೆ.. 2020 ರಲ್ಲಿ ದೇಶವನ್ನಷ್ಟೇ ಅಲ್ಲ, ಇಡೀ ವಿಶ್ವವನ್ನೇ ಕೋವಿಡ್ ಎಂಬ ಸಾಂಕ್ರಾಮಿಕ ರೋಗ ಅಲ್ಲೋಲ ಕಲ್ಲೋಲ ಮಾಡಿತ್ತು. ಚೀನಾದಿಂದ ಬಂದ ಕೊರೊನಾ ಪ್ರಪಂಚದಾದ್ಯಂತ ಹಬ್ಬಿತ್ತು. ಈ ಒಂದು ವೈರಸ್ ಅದೆಷ್ಟೋ ಮಂದಿಗೆ ಬಾಧಿಸಿದ್ದು ಮಾತ್ರವಲ್ಲದೇ, ಅನೇಕರನ್ನು ಬೀದಿಗೆ ತಳ್ಳಿತ್ತು. ತಮ್ಮ ಪ್ರಾಣವನ್ನು ಅಂಗೈಯಲ್ಲಿ ಇಟ್ಟುಕೊಂಡು ಒಂದು ಹೊತ್ತು ತಿನ್ನಲು ಪರದಾಡುವ ಸ್ಥಿತಿ ಜನರಲ್ಲಿ ನಿರ್ಮಾಣವಾಗಿತ್ತು. ಕೋವಿಡ್ ಹರಡುವಿಕೆಯನ್ನು ತಡೆಯಲು ಸರ್ಕಾರ ಲಾಕ್ಡೌನ್ ಜಾರಿಗೆ ತಂದಿತು. ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಬರಬಾರದು ಎಂಬ ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಲಾಗಿತ್ತು.
ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಜನರಿಗೆ ಸರಿಯಾಗಿದ್ದರೂ ಸಹ ದೂರದ ಊರುಗಳಿಂದ ಉದ್ಯೋಗಕ್ಕಾಗಿ ಬಂದವರಿಗೆ ಈ ನಿಬಂಧನೆ ತುಂಬಾ ತೊಂದರೆಯಾಗಿ ಪರಿಣಮಿಸಿತ್ತು. ವಲಸೆ ಕಾರ್ಮಿಕರ ಪರಿಸ್ಥಿತಿಯಂತು ಹೇಳತೀರದ್ದಾಗಿತ್ತು. ಲಾಕ್ಡೌನ್ನಿಂದಾಗಿ ಎಲ್ಲ ಕೆಲಸಗಳು ಒಂದೇ ಬಾರಿಗೆ ನಿಂತು ಹೋಗಿದ್ದವು. ಜೊತೆಗೆ ಕೆಲಸ ಕೂಡ ಕಳೆದುಕೊಂಡ ಜನರಿಗೆ ತಮ್ಮ ಊರಿಗೆ ತೆರಳಲು ಸಾರಿಗೆ ವ್ಯವಸ್ಥೆ ಇಲ್ಲದೇ ಪರದಾಡುವಂತಾಗಿತ್ತು. ತಮ್ಮ ಸ್ವಂತ ಊರು ತಲುಪಲು ದಾರಿ ಕಾಣದೇ ಕಂಗಾಲಾಗಿ ಹೋಗಿದ್ದರು.
ಇದನ್ನೂ ಓದಿ: ಆಸ್ಕರ್ ವೇದಿಕೆಯಲ್ಲಿ RRR ಭಾರತವನ್ನು ಹೃದಯದಲ್ಲಿಟ್ಟುಕೊಂಡು ಹೆಜ್ಜೆ ಹಾಕಲಿದೆ: ಜೂ.ಎನ್ಟಿಆರ್
ಆದರೆ, ಕೆಲವರು ಹೇಗಾದರೂ ಮಾಡಿ ಮನೆ ತಲುಪಲು ನಡೆದುಕೊಂಡೇ ಹೋಗಲು ತೀರ್ಮಾನಿಸಿದ್ದರು. ಆದರೆ, ಅವರಿಗೆ ಅದರಲ್ಲೂ ಕಹಿ ಅನುಭವಗಳು ಎದುರಾದವು. ಹಸಿವು ನೀಗಿಸಲು ಎಲ್ಲೋ ಒಂದು ಕಡೆ ನಿಂತರೆ ಆ ಹಳ್ಳಿ ಜನ ಅವರನ್ನು ಹತ್ತಿರಕ್ಕೂ ಸೇರಿಸಿಕೊಳ್ಳುತ್ತಿರಲಿಲ್ಲ. ಕೆಲವೆಡೆ ಪೊಲೀಸರು ಅಂತಹವರ ಮೇಲೆ ಹಲ್ಲೆ ನಡೆಸಿದ್ದೂ ಇದೆ. ಇಂತಹ ಇನ್ನೂ ಅನೇಕ ಘಟನೆಗಳು ನಡೆದಿವೆ. ಇದ್ಯಾವುದನ್ನೂ ಜನ ಮರೆತಿಲ್ಲ. ನಿಜ ಜೀವನದಲ್ಲಿ ಅನುಭವಿಸಿದ ಈ ವ್ಯಥೆ ಇದೀಗ ಕಥೆಯಾಗಿ ಬೆಳ್ಳಿತೆರೆಯಲ್ಲಿ ಮೂಡಲು ತಯಾರಾಗಿದೆ.
ಬಾಲಿವುಡ್ ಖ್ಯಾತ ನಿರ್ದೇಶಕ ಅನುಭವ್ ಸಿನ್ಹಾ ಅವರ ಭೀಡ್ ಚಿತ್ರ ಇದೇ ಮಾರ್ಚ್ 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇಡೀ ಸಿನಿಮಾವನ್ನು ಕಪ್ಪು ಬಿಳುಪಿನಲ್ಲಿ ಚಿತ್ರೀಕರಿಸಲಾಗಿದೆ. ಬನಾರಸ್ ಮೀಡಿಯಾ ವರ್ಕ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಬಾಲಿವುಡ್ ಹೀರೋ ರಾಜ್‌ಕುಮಾರ್ ರಾವ್ ಜೊತೆಗೆ ಭೂಮಿ ಪೆಡ್ನೇಕರ್ ನಟಿಸುತ್ತಿದ್ದಾರೆ. ಇವರೊಂದಿಗೆ ಪಂಕಜ್ ಕಪೂರ್, ಅಶುತೋಷ್ ರಾಣಾ, ದಿಯಾ ಮಿರ್ಜಾ, ವೀರೇಂದ್ರ ಸಕ್ಸೇನಾ, ಆದಿತ್ಯ ಶ್ರೀವಾಸ್ತವ್, ಕೃತಿಕಾ ಕಾಮ್ರಾ, ಕರಣ್ ಪಂಡಿತ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಸ್ವರಾ ಫಹಾದ್ ಅದ್ದೂರಿ ಮದುವೆಗೆ ಕ್ಷಣಗಣನೆ; ದೀಪಾಲಂಕೃತ ಮನೆ ಫೋಟೋ ಹಂಚಿಕೊಂಡ ನಟಿ