ಬೆಂಗಳೂರು: ಕನ್ನಡ ಚಿತ್ರರಂಗದ ನಟ ನಾಗಭೂಷಣ್ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣಾ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಹೇಳಿಕೆ ಸಹಿತ ಪಿಡಬ್ಲ್ಯೂಡಿ, ಸಾರಿಗೆ ಇಲಾಖೆ ಅಧಿಕಾರಿಗಳ ವರದಿ, ನಾಗಭೂಷಣ್ ರಕ್ತದ ಮಾದರಿ ಪರಿಶೀಲಿಸಿದ್ದ ವೈದ್ಯಕೀಯ ವರದಿ, ಸಿಸಿಟಿವಿ ದೃಶ್ಯಗಳು ಸೇರಿದಂತೆ 22 ಜನರ ಹೇಳಿಕೆಯ ಸಾಕ್ಷ್ಯ ಆಧರಿಸಿ
ಐಪಿಸಿ ಸೆಕ್ಷನ್ 279 (ಅತಿವೇಗ ಹಾಗೂ ಅಜಾಗರೂಕ ಚಾಲನೆ), 304A (ನಿರ್ಲಕ್ಷ್ಯತೆಯಿಂದ ಸಾವಿಗೆ ಕಾರಣ) ಆರೋಪದಡಿ ಸರಿ ಸುಮಾರು 65 ಪುಟಗಳ ಚಾರ್ಜ್ಶೀಟ್ ಅನ್ನು ನ್ಯಾಯಾಲಕ್ಕೆ ಸಲ್ಲಿಸಲಾಗಿದೆ.
ಅಪಘಾತದ ಸಂದರ್ಭದಲ್ಲಿ ರಸ್ತೆಯು ಉತ್ತಮ ಸ್ಥಿತಿಯಲ್ಲಿತ್ತು ಎಂದು ಪಿಡಬ್ಲ್ಯೂಡಿ ಇಲಾಖೆ ವರದಿ ನೀಡಿದೆ. ಅಲ್ಲದೇ, ಅಪಘಾತಕ್ಕೆ ಕಾರಣವಾಗುವಂತಹ ಯಾವುದೇ ತಾಂತ್ರಿಕ ದೋಷಗಳು ನಾಗಭೂಷಣ್ ಹೊಂದಿದ್ದ ಎಸ್.ಯು.ವಿ ವಾಹನದಲ್ಲಿ ಇರಲಿಲ್ಲ ಎಂದು ಸಾರಿಗೆ ಇಲಾಖೆ ವರದಿಯಲ್ಲಿ ತಿಳಿಸಿದೆ. ಮತ್ತೊಂದೆಡೆ, ಅಪಘಾತದ ಸಂದರ್ಭದಲ್ಲಿ ನಾಗಭೂಷಣ್ ಮದ್ಯಪಾನ ಮಾಡಿರಲಿಲ್ಲ ಎಂದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ.
ಅಪಘಾತ ನಡೆದ ಸ್ಥಳದಿಂದ ನೂರು ಮೀಟರ್ ಮುನ್ನ ಸ್ಪೀಡ್ ಬ್ರೇಕರ್ ಇದೆಯಾದರೂ ಅತಿ ವೇಗವಾಗಿ ಬಂದಿದ್ದ ನಾಗಭೂಷಣ್ ನಂತರ ಪಾದಚಾರಿ ದಂಪತಿ ಗಮನಿಸಿದ್ದಾರೆ. ಆದರೆ ಬ್ರೇಕ್ ಬದಲು ಆ್ಯಕ್ಸಲರೇಟರ್ ತುಳಿದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಇದನ್ನೂ ಓದಿ: ನಟ ನಾಗಭೂಷಣ್ ಕಾರು ಅಪಘಾತ: ಮಹಿಳೆ ಸಾವು, ಪತಿ ಸ್ಥಿತಿ ಗಂಭೀರ.. ಸ್ಯಾಂಡಲ್ವುಡ್ ನಟ ಪೊಲೀಸ್ ವಶಕ್ಕೆ
ಪ್ರಕರಣದ ಹಿನ್ನೆಲೆ? : ಸೆಪ್ಟೆಂಬರ್ 30ರ ರಾತ್ರಿ 9:30ರ ಸುಮಾರಿಗೆ ಉತ್ತರಹಳ್ಳಿಯಿಂದ ಕೋಣನಕುಂಟೆ ಕ್ರಾಸ್ ದಾರಿ ಮಧ್ಯೆ ನಟ ನಾಗಭೂಷಣ್ ಅವರ ಕಾರು ಅಪಘಾತಕ್ಕೊಳಗಾಗಿತ್ತು. ಸ್ನೇಹಿತರನ್ನು ಭೇಟಿಯಾಗಿ ಜೆ.ಪಿ ನಗರದ ತಮ್ಮ ಮನೆಗೆ ನಾಗಭೂಷಣ್ ತೆರಳುತ್ತಿದ್ದರು. ಈ ವೇಳೆ ನಾಗಭೂಷಣ್ ಚಲಾಯಿಸುತ್ತಿದ್ದ ಕಾರು ಫುಟ್ ಪಾತ್ ಮೇಲೆ ವಾಕಿಂಗ್ ಮಾಡುತ್ತಿದ್ದ ಪಾದಚಾರಿಗಳಿಗೆ ಡಿಕ್ಕಿ ಹೊಡೆದು ನಂತರ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿತ್ತು.
ಪರಿಣಾಮ ಪ್ರೇಮಾ ಎಸ್ (48) ಎಂಬುವವರು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟರೆ, ಅವರ ಪತಿ ಕೃಷ್ಣ ಬಿ (58) ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ, ಕೃಷ್ಣ ಅವರ ಹೇಳಿಕೆಯನ್ನೂ ಸಹ ಪೊಲೀಸರು ದಾಖಲಿಸಿಕೊಂಡಿದ್ದಾರೆ. 'ಅತಿವೇಗ ಮತ್ತು ಅಜಾಗರೂಕತೆಯ ಕಾರಣದಿಂದಲೇ ಫುಟ್ಪಾತ್ ಮೇಲೆ ಹೋಗುತಿದ್ದ ನನಗೆ ಮತ್ತು ನನ್ನ ಪತ್ನಿಗೆ ಕಾರು ಡಿಕ್ಕಿಯಾಗಿತ್ತು' ಎಂದು ಅವರು ಹೇಳಿಕೆ ನೀಡಿದ್ದು, ಅದನ್ನೂ ಕೂಡ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಕಾರು ಅಪಘಾತ ಪ್ರಕರಣ: ನಟ ನಾಗಭೂಷಣ್ ಠಾಣಾ ಜಾಮೀನಿನ ಮೇಲೆ ಬಿಡುಗಡೆ- ಡಿಸಿಪಿ