'ಬ್ಯಾಡ್ ಮ್ಯಾನರ್ಸ್' ಟೈಟಲ್ನಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ವಿಚಾರಗಳಿಗೆ ಸುದ್ದಿಯಾಗುತ್ತಿರುವ ಚಿತ್ರ. ಕನ್ನಡ ಚಿತ್ರರಂಗದ ಸುಕ್ಕಾ ಸೂರಿ ನಿರ್ದೇಶನದ ಜೂನಿಯರ್ ಯಂಗ್ ರೆಬಲ್ ಅಭಿಷೇಕ್ ಅಂಬರೀಶ್ ಅಭಿನಯದ ಬ್ಯಾಡ್ ಮ್ಯಾನರ್ಸ್ ಈಗಾಗಲೇ ಟೀಸರ್ ಹಾಗು ಹಾಡುಗಳಿಂದ ಡಿಮ್ಯಾಂಡ್ ಹೆಚ್ಚಿಸಿಕೊಂಡಿದೆ. ಬಹುತೇಕ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿರೋ ಬ್ಯಾಡ್ ಮ್ಯಾನರ್ಸ್ ಚಿತ್ರ ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟುಹಬ್ಬಕ್ಕೆ ಇಂದು ಸಣ್ಣ ಟೀಸರ್ ಬಿಡುಗಡೆ ಮಾಡುವ ಮುಖಾಂತರ ಅಭಿಷೇಕ್ ಅಂಬರೀಶ್ ಮಾಸ್ ದರ್ಶನ ಮಾಡಿಸಿದ್ದಾರೆ.
ಟಗರು ಸಿನಿಮಾ ಬಳಿಕ ನಿರ್ದೇಶಕ ಸೂರಿ, ಅಭಿಷೇಕ್ ಅಂಬರೀಶ್ ಅವರಿಗಾಗಿ ಬ್ಯಾಡ್ ಮ್ಯಾನರ್ಸ್ ಸಿನಿಮಾ ನಿರ್ದೇಶನ ಮಾಡ್ತಾ ಇರೋದು ಗೊತ್ತಿರುವ ವಿಷ್ಯ. ಅಮರ್ ಸಿನಿಮಾ ನಂತರ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ನಟಿಸುತ್ತಿರುವ ಔಟ್ ಆ್ಯಂಡ್ ಔಟ್ ಕಮರ್ಷಿಯಲ್ ಚಿತ್ರ ಬ್ಯಾಡ್ ಮ್ಯಾನರ್ಸ್. ಈ ಚಿತ್ರದಲ್ಲಿ ಅಭಿಷೇಕ್ ಅಂಬರೀಶ್ ಖಾಕಿ ತೊಟ್ಟು ಡ್ರಗ್ಸ್ ಮಾಫಿಯಾ ವಿರುದ್ಧ ಹೋರಾಡುವ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಟೀಸರ್ಗಳನ್ನು ನೋಡ್ತಾ ಇದ್ರೆ, ನಿರ್ದೇಶಕ ಸುಕ್ಕಾ ಸೂರಿಯವರ ಫ್ಲೇವರ್ ಘಮ್ಮೆನ್ನುತ್ತಿದೆ. ರೌಡಿಸಂ, ರಕ್ತಸಿಕ್ತ ದೃಶ್ಯಗಳು, ಗಾಂಜಾ ಸುತ್ತ ನಡೆಯುವ ಭಯ ಹುಟ್ಟಿಸುವ ಚೇಸಿಂಗ್ ಸನ್ನಿವೇಶಗಳು ರೋಚಕವಾಗಿದೆ. ಇಂತಹ ಸೀನ್ಗಳಲ್ಲಿ ಅಭಿಷೇಕ್ ಅಂಬರೀಶ್ ಖದರ್ ಹೇಗಿರುತ್ತೆ ಅನ್ನೋದು ಅವರ ಅಭಿಮಾನಿ ಬಳಗದಲ್ಲಿ ಕುತೂಹಲ ಹೆಚ್ಚಿಸಿದೆ. ಬೆಂಗಳೂರು, ಮೈಸೂರು ಹಾಗು ಮಂಡ್ಯ, ಶ್ರೀರಂಗಪಟ್ಟಣ ಭಾಗದಲ್ಲಿ ಹೆಚ್ಚಾಗಿ ಚಿತ್ರೀಕರಣ ಮಾಡಲಾಗಿದೆ. ಇನ್ನು ಬ್ಯಾಡ್ ಮ್ಯಾನರ್ಸ್ ಚಿತ್ರದ ಹಾಡುಗಳು ಹಿಟ್ ಆಗಿದ್ದು, ಈ ಚಿತ್ರದ ಟೈಟಲ್ ಟ್ರ್ಯಾಕ್ ಬರೋಬ್ಬರಿ 5 ಮಿಲಿಯನ್ ಜನ ನೋಡಿ ಮೆಚ್ಚಿಕೊಂಡಿದ್ದಾರೆ. ಈ ಹಾಡಿನಲ್ಲಿ ಅಭಿಷೇಕ್ ಅಂಬರೀಶ್ ಜೂನಿಯರ್ ರೆಬೆಲ್ ಆಗಿ ಮಿಂಚಿದ್ದಾರೆ.
ನಿರ್ದೇಶಕ ಸೂರಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ 'ಬ್ಯಾಡ್ ಮ್ಯಾನರ್ಸ್'ನಲ್ಲಿ ರಚಿತಾ ರಾಮ್ ಮತ್ತು ಪ್ರಿಯಾಂಕಾ ಕುಮಾರ್ ಇಬ್ಬರು ನಾಯಕಿಯರಾಗಿ ನಟಿಸಿದ್ದಾರೆ. ಉಳಿದಂತೆ ಹಿರಿಯ ನಟಿ ತಾರಾ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ. ಪಾಪ್ ಕಾರ್ನ್, ಮಂಕಿ ಟೈಗರ್ ಹಾಗು ಪೆಟ್ರೋ ಮ್ಯಾಕ್ಸ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ಕೆ. ಎಂ. ಸುಧೀರ್ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ಮಾಸ್ತಿ ಮಂಜು ಸಂಭಾಷಣೆ ಬರೆದರೆ, ಚರಣ್ರಾಜ್ ಸಂಗೀತ ಸಂಯೋಜಿಸಿದ್ದಾರೆ. ಸದ್ಯ ರೆಬೆಲ್ ಸ್ಟಾರ್ ಹುಟ್ಟುಹಬ್ಬಕ್ಕೆ ಅನಾವರಣಗೊಂಡಿರುವ ಟೀಸರ್ ನೋಡಿದ ಅಭಿಷೇಕ್ ಅಂಬರೀಶ್ ಅಭಿಮಾನಿಗಳು ಎರಡು ಸ್ಟೆಪ್ ಹಾಕುತ್ತಿದ್ದಾರೆ. ಇಷ್ಟೆಲ್ಲಾ ಮಾಸ್ ಎಲಿಮೆಂಟ್ಸ್ ಹೊಂದಿರುವ ಬ್ಯಾಡ್ ಮ್ಯಾನರ್ಸ್ ಚಿತ್ರ ಮುಂದಿನ ತಿಂಗಳು ಬಿಡುಗಡೆ ಸಿದ್ಧತೆಯಲ್ಲಿದ್ದಾರೆ ನಿರ್ಮಾಪಕ ಕೆ. ಎಂ ಸುಧೀರ್.
ಇದನ್ನೂ ಓದಿ: 'ಮಂಡ್ಯದ ಗಂಡಿ'ಗೆ 71ನೇ ಹುಟ್ಟುಹಬ್ಬ: ರೆಬೆಲ್ ಸ್ಟಾರ್ ಕುರಿತು 10 ಸ್ವಾರಸ್ಯಕರ ಸಂಗತಿ!