ಬಿ.ಆರ್.ರಾಜಶೇಖರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಬ್ಯಾಕ್ ಬೆಂಚರ್ಸ್' ಚಿತ್ರ ನೋಡುಗರಿಗೆ ಪರಿಶುದ್ಧ ಮನೋರಂಜನೆಯ ರಸದೌತಣ ಉಣಬಡಿಸಲು ಸಿದ್ದವಾಗಿದೆ. ಬಹುತೇಕ ಚಿತ್ರೀಕರಣ ಮುಗಿಸಿ ಸದ್ಯ ಬಿಡುಗಡೆಗೆ ಸಿದ್ಧವಾಗಿದೆ. ಭಾರತೀಯ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ.
ಇತ್ತೀಚೆಗೆ 'ಬ್ಯಾಕ್ ಬೆಂಜರ್ಸ್' ಚಿತ್ರದ ಹಾಡೊಂದು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ನಕುಲ್ ಅಭಯಂಕರ್ ಸಂಗೀತ ನೀಡಿರುವ ಈ ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಆನ್ಲೈನ್ ಮೂಲಕ ಈ ಹಾಡು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.
ಈ ಚಿತ್ರದ ಬಗ್ಗೆ 'ಬ್ಯಾಕ್ ಬೆಂಜರ್ಸ್' ಚಿತ್ರತಂಡ ತಮ್ಮ ಅನುಭವಗಳನ್ನು ಹಂಚಿಕೊಂಡಿದೆ. ನಿರ್ದೇಶಕ ಬಿ.ಆರ್.ರಾಜಶೇಖರ್ ಮಾತನಾಡಿ, "ಸುಮಾರು ಒಂದು ವರ್ಷಗಳ ಕಾಲ ವರ್ಕ್ಶಾಪ್ ನಡೆಸಿ ಈ ಚಿತ್ರದ ಚಿತ್ರೀಕರಣ ಮಾಡಿದ್ದೇವೆ. ಬ್ಯಾಕ್ ಬೆಂಚರ್ಸ್ ಚಿತ್ರದಲ್ಲಿ ಮನೋರಂಜನೆ ಪ್ರಮುಖಾಂಶ. ಎಲ್ಲರಿಗೂ ಕಾಲೇಜು ದಿನಗಳನ್ನು ನೆನಪಿಸುವ ಚಿತ್ರವಿದು" ಎಂದರು.
ಈ ಚಿತ್ರದಲ್ಲಿ ಅರವಿಂದ್ ಕುಪ್ಳಿಕರ್, ರಂಜನ್ ನರಸಿಂಹಮೂರ್ತಿ, ಜತಿನ್ ಆರ್ಯನ್, ಆಕಾಶ್, ಶಶಾಂಕ್ ಸಿಂಹ, ಮಾನ್ಯ ಗೌಡ, ಕುಂಕುಮ್, ಅನುಶಾ ಸುರೇಶ್, ಮನೋಜ್ ಶೆಟ್ಟಿ, ನಮಿತಾ ಗೌಡ ಸೇರಿದಂತೆ ಸಾಕಷ್ಟು ಹೊಸ ಕಲಾವಿದರು ಅಭಿನಯಿಸಿದ್ದಾರೆ.
ಚಿತ್ರದ ಸಂಗೀತ ನಿರ್ದೇಶಕ ನಕುಲ್ ಭಯಂಕರ್ ಮಾತನಾಡಿ, "ನಮ್ಮ ಚಿತ್ರದಲ್ಲಿ ಏಳು ಹಾಡುಗಳಿವೆ. ಮೊದಲ ಹಾಡು ಈಗ ಬಿಡುಗಡೆಯಾಗಿದೆ. ಈ ಹಾಡನ್ನು ಎ.ಆರ್.ರೆಹಮಾನ್ ಅವರು ಆನ್ಲೈನ್ನಲ್ಲಿ ರಿಲೀಸ್ ಮಾಡಿರುವುದು ತುಂಬಾನೇ ಖುಷಿಯಾಗಿದೆ. ಲವ್ ಮಾಕ್ಟೇಲ್ 2 ಚಿತ್ರದ ನಂತರ ನಾನು ಸಂಗೀತ ನೀಡುತ್ತಿರುವ ಚಿತ್ರವಿದು" ಎಂದು ಸಂತಸ ವ್ಯಕ್ತಪಡಿಸಿದರು.
ಬೆಂಗಳೂರಿನ ಸುಂದರ ತಾಣಗಳಲ್ಲಿ ಮೂವತ್ತೈದು ದಿನಗಳ ಕಾಲ 'ಬ್ಯಾಕ್ ಬೆಂಜರ್ಸ್' ಚಿತ್ರೀಕರಣ ಮಾಡಲಾಗಿದೆ. ಸಾಕಷ್ಟು ಹೊಸ ಪ್ರತಿಭೆಗಳೇ ಅಭಿನಯಿಸಿರುವ ಈ ಚಿತ್ರಕ್ಕೆ ನಕುಲ್ ಅಭಯಂಕರ್ ಸಂಗೀತ ನಿರ್ದೇಶನ ಹಾಗೂ ಮನೋಹರ್ ಜೋಶಿ ಛಾಯಾಗ್ರಹಣವಿದೆ. ಪಿ.ಪಿ.ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮ್ಯಾ ನಿರ್ಮಾಣ ಮಾಡಿದ್ದಾರೆ. ಸದ್ಯ ಚಿತ್ರದ ಟೈಟಲ್ ಹಾಗೂ ಹಾಡಿನಿಂದ ಗಮನ ಸೆಳೆಯುತ್ತಿರುವ 'ಬ್ಯಾಕ್ ಬೆಂಚರ್ಸ್' ಸದ್ಯದಲ್ಲೇ ತೆರೆಗೆ ಬರಲಿದೆ.
ಇದನ್ನೂ ಓದಿ: ಒಮ್ಮೆಲೆ ಮೂರು ಹಿಟ್ ಸೀಕ್ವೆಲ್ ರಿಲೀಸ್ಗೆ ತಯಾರಿ: ಹ್ಯಾಟ್ರಿಕ್ ನಿರೀಕ್ಷೆಯಲ್ಲಿ ಕಾರ್ತಿ