'ವಜ್ರಕಾಯ', 'ಕಿರುಗೂರಿನ ಗಯ್ಯಾಳಿಗಳು' ಹಾಗೂ 'ಪೆಟ್ರೋಮ್ಯಾಕ್ಸ್' ಚಿತ್ರಗಳಿಂದ ಸ್ಯಾಂಡಲ್ವುಡ್ನಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಟಿ ಕಾರುಣ್ಯ ರಾಮ್. ಸಿನಿಮಾ ಅಭಿನಯದ ಜೊತೆಗೆ ತಮ್ಮದೇ ಆದ ಸಂಸ್ಕಾರ ಟ್ರಸ್ಟ್ ವತಿಯಿಂದ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತ ಬರ್ತಾ ಇದ್ದಾರೆ. ಇತ್ತೀಚೆಗೆ ಕರ್ನಾಟಕ ಸಿಂಡಿಕೇಟ್ ಫೌಂಡೇಶನ್ ಹಾಗೂ ಕಿಮ್ಸ್ ಆಸ್ಪತ್ರೆಯ ಸಹಯೋಗದಲ್ಲಿ ಅಂಗಾಂಗ ದಾನ ಶಿಬಿರ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ನಟ ಧ್ರುವ ಸರ್ಜಾ ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದರು. ಅಶ್ವಿನಿ ಪುನೀತರಾಜಕುಮಾರ್ ಅವರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ನಟಿ ಕಾರುಣ್ಯ ರಾಮ್, "ಅಂಗಾಂಗ ದಾನ ಮಾಡುವುದರಿಂದ ನಾವು ಸತ್ತ ಬಳಿಕವೂ ನಮ್ಮ ಉಪಯೋಗ ಆಗುತ್ತದೆ. ಅಂಗಾಂಗ ದಾನದಿಂದ ಪುಣ್ಯ ಸಿಗುತ್ತೆ. ಎಲ್ಲರೂ ಅಂಗಾಂಗ ದಾನ ಮಾಡಿ" ಎಂದು ಮನವಿ ಮಾಡಿದರು.

ನಂತರ ಮಾತನಾಡಿದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, "ನಾವು ಯೂಸ್ಲೆಸ್ ಅಂತ ಹೇಳುತ್ತಿರುತ್ತೇವೆ. ಆದರೆ ಇಲ್ಲಿ ಯಾರೂ ಯೂಸ್ಲೆಸ್ ಅಲ್ಲ. ಯೂಸ್ಡ್ ಲೆಸ್ ಅಷ್ಟೇ. ಅಂಗಾಂಗ ದಾನ ಮಾಡಿ ಇನ್ನೊಬ್ಬರಿಗೆ ಉಪಯೋಗ ಆಗುತ್ತೆ. ನಾವು ಸತ್ತ ಮೇಲೂ ಇನ್ನೊಬ್ಬರಿಗೆ ಉಪಯೋಗ ಆಗುತ್ತೆ ಎಂದರೆ ಯಾಕೆ ಮಾಡಬಾರದು. ಎಲ್ಲರೂ ದಯವಿಟ್ಟು ಇದಕ್ಕೆ ಕೈ ಜೋಡಿಸಿ. ನಿಮ್ಮ ಪಕ್ಕದವರಿಗೂ ಹೇಳಿ. ಇಂತಹ ಶಿಬಿರಗಳನ್ನು ಎಲ್ಲಾ ಕಡೆ ಮಾಡಬೇಕು" ಎಂದು ಹೇಳಿದರು.
ಇನ್ನು, ಈ ಕಾರ್ಯಕ್ರಮದಲ್ಲಿ ಸುಮಾರು 700 ರಿಂದ 1000 ಮಂದಿ ಅಂಗಾಂಗ ದಾನ ಪ್ರತಿಗೆ ಸಹಿ ಮಾಡಿದರು. ಈ ವೇಳೆ ಹೆಲ್ತ್ ಅಂಡ್ ವೆಲ್ತ್ ಜಾಯಿಂಟ್ ಡೈರೆಕ್ಟರ್, ಕಿಮ್ಸ್ ಅಧ್ಯಕ್ಷರು, ಆರ್ಗನ್ ಡೊನೇಷನ್ ಡಿಪಾರ್ಟ್ಮೆಂಟ್ ಭಾಗಿಯಾಗಿತ್ತು.

ಇದನ್ನೂ ಓದಿ: ರೆಡ್ & ಬ್ಲ್ಯಾಕ್ ಡ್ರೆಸ್ನಲ್ಲಿ ನಟಿ ಕಾರುಣ್ಯ ರಾಮ್ - ಹುಡುಗರೆದೆಗೆ ಕಿಚ್ಚು ಹಚ್ಚಿದ ಫೋಟೋಗಳಿವು
ಸಮಾಜಮುಖಿ ಕಾರ್ಯದಲ್ಲಿ ಸದಾ ಮುಂದು: ಇದಕ್ಕೂ ಮುನ್ನ ನಟಿ ಕಾರುಣ್ಯ ರಾಮ್ ತಮ್ಮ ರಾಜರಾಜೇಶ್ವರಿ ನಗರದ ರಸ್ತೆ ಗುಂಡಿಗಳನ್ನು ಮುಚ್ಚುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದರು. ತಮ್ಮ ಸ್ನೇಹಿತರು ಮತ್ತು ಸಹೋದರಿಯ ಜೊತೆ ರಸ್ತೆಗಿಳಿದ ಕಾರುಣ್ಯ ರಾಮ್ ಹತ್ತಕ್ಕೂ ಹೆಚ್ಚು ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿದ್ದರು.
ಅದಕ್ಕೂ ಮೊದಲು ಕೆಲ ತಿಂಗಳುಗಳ ಹಿಂದೆ ಕಾರುಣ್ಯ ರಾಮ್ ರಾಜರಾಜೇಶ್ವರಿ ನಗರದಲ್ಲಿ ಆರೋಗ್ಯ ಶಿಬಿರ ಹಮ್ಮಿಕೊಂಡಿದ್ದರು. ಆ ಭಾಗದ ಜನರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಿಸಿದ್ದರು. ಅಲ್ಲದೇ, ಕೋವಿಡ್ ವೇಳೆಯಲ್ಲೂ ಅವರು ಫುಡ್ ಕಿಟ್ ಹಂಚಿದ್ದರು. ಹೀಗೆ ತಮ್ಮ ಕೈಲಾದ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವ ಕಾರುಣ್ಯ ರಾಮ್ ಕೆಲಸಕ್ಕೆ ಸಿನಿ ಪ್ರೇಮಿಗಳು ಹಾಗೂ ಅಕ್ಕ ಪಕ್ಕದ ಜನರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಕೊರೊನಾದಿಂದ ಕಂಗಾಲಾದವರಿಗೆ ಆಹಾರ ಕಿಟ್ ವಿತರಿಸಿದ ನಟಿ ಕಾರುಣ್ಯ ರಾಮ್