ಬೆಂಗಳೂರು: ಪುನೀತ್ ರಾಜ್ ಕುಮಾರ್ ಅಗಲಿ ಇಂದಿಗೆ ವರ್ಷ ಪೂರೈಸಿದೆ. ಜನಸಾಗರ ತಮ್ಮ ನೆಚ್ಚಿನ ಅಪ್ಪುವಿನ ಅಗಲಿಕೆಯ ದುಖಃದಿಂದ ಇನ್ನೂ ಹೊರಬಂದಿಲ್ಲ. ಅಭಿಮಾನಿಗಳ ಮನದಲ್ಲಿ ಅಜರಾಮರಾಗಿರುವ ಪುನೀತ್ ರೀಲ್ನಲ್ಲಿ ಮಾತ್ರವಲ್ಲ, ರಿಯಲ್ ಲೈಫ್ನಲ್ಲೂ ರಿಯಲ್ ಹೀರೋವಾಗಿ ಮಿಂಚಿದ್ದವರು.
ತಮ್ಮ ನಿಜ ಜೀವನದಲ್ಲಿ ಅಪ್ಪು ಹಲವು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾಜ ಮುಖಿಯಾಗಿದ್ದರು. ಸಮಾಜಮುಖಿ ಸೇವೆಯಿಂದಲೇ ಪುನೀತ್ ಜನಮೆಚ್ಚುಗೆ ಗಳಿಸಿದ್ದರು. ಸಂಕಷ್ಟದಲ್ಲಿರುವವರಿಗೆ ಸದಾ ಹೆಗಲು ಕೊಡಲು ಮುಂದಾಗುತ್ತಿದ್ದ ಪವರ್ ಸ್ಟಾರ್ ನಿಜವಾಗಿಯೂ ನಿಜ ಜೀವನದಲ್ಲೂ ನಾಯಕನಾಗಿ ಜೀವಿಸಿದ್ದವರು. ಅಪ್ಪು ಹೃದಯ ವೈಶಾಲ್ಯವುಳ್ಳ ಹೃದಯವಂತ ಎಂಬುದನ್ನು ತೋರಿಸಿಕೊಟ್ಟಿದ್ದರು.
ಕೋವಿಡ್ ಸಂದರ್ಭ ಅಪ್ಪು ಸಹಾಯ ಹಸ್ತ: ತಾವು ಮಾಡಿರುವ ಪರೋಪಕಾರದ ಬಗ್ಗೆ ಎಲ್ಲೂ ಬಹಿರಂಗವಾಗಿ ಹೇಳಲು ಇಚ್ಛಿಸದ ಪುನೀತ್ ಸಾಕಷ್ಟು ಜನರಿಗೆ ಸಹಾಯವನ್ನು ಮಾಡಿದ್ದಾರೆ. ದೇಶ ಕೋವಿಡ್ ಸಂಕಷ್ಟದಲ್ಲಿದ್ದಾಗ ಅಪ್ಪು ಸಿಎಂ ಕೋವಿಡ್ ಪರಿಹಾರ ನಿಧಿಗೆ 50 ಲಕ್ಷ ರೂ. ನೆರವು ನೀಡಿದ್ದರು. ಹಣದ ಸಹಾಯದ ಜೊತೆಗೆ ಕೋವಿಡ್ ಸಂದರ್ಭದಲ್ಲಿ ಜನಜಾಗೃತಿ ಮೂಡಿಸುವಲ್ಲಿ ಅಪ್ಪು ಪ್ರಮುಖ ಪಾತ್ರ ವಹಿಸಿದ್ದರು. ತಮ್ಮ ಅಭಿಮಾನಿಗಳಿಗೂ ಸಿಎಂ ಕೋವಿಡ್ ಪರಿಹಾರ ನಿಧಿಗೆ ಕೊಡುಗೆ ನೀಡುವಂತೆ ಕರೆ ನೀಡಿದ್ದರು.
ಎರಡನೇ ಅಲೆ ವೇಳೆ ಪುನೀತ್ ಬೆಂಗಳೂರು ಪೊಲೀಸರ ಜೊತೆಗೂಡಿ ಕೋವಿಡ್ ಮುಂಜಾಗ್ರತೆ ಬಗ್ಗೆ ವಿಡಿಯೋ ಸಂದೇಶ ನೀಡಿದ್ದರು. ಕೋವಿಡ್ ಸಂದರ್ಭ ಕೆಲಸ ಕಳೆದುಕೊಂಡ ಸಿನಿಮಾ ಇಂಡಸ್ಟ್ರಿ ಸಿಬ್ಬಂದಿಗೆ ಮನಸಾರೆ ಸಹಾಯ ಹಸ್ತ ಚಾಚಿದ್ದರು.
ನೆರೆ ಸಂಸತ್ರಸರ ನೆರವಿಗೆ ದಾವಿಸಿದ್ದ ಅಪ್ಪು: ಪುನೀತ್ ರಾಜ್‍ಕುಮಾರ್ 2019ರಲ್ಲಿ ರಾಜ್ಯ ಭೀಕರ ಪ್ರವಾಹಕ್ಕೆ ತುತ್ತಾದಾಗ ಸಿಎಂ ವಿಪತ್ತು ಪರಿಹಾರ ನಿಧಿಗೆ 5 ಲಕ್ಷ ರೂ. ದೇಣಿಗೆ ನೀಡಿ ತಮ್ಮ ಸಹಾಯ ಹಸ್ತ ಚಾಚಿದ್ದರು. ಆ ಸಂದರ್ಭ ಉತ್ತರ ಕರ್ನಾಟಕ ಭಾಗ ಭಾರೀ ನೆರೆಗೆ ಮುಳುಗಿ ಹೋಗಿತ್ತು. ಈ ವೇಳೆ ಪುನೀತ್ ನೆರೆ ಸಂತ್ರಸ್ತರ ನೆರವಿಗೆ ಬಂದಿದ್ದರು. ಇದು ಅಪ್ಪುವಿನ ಸಹೃದಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. 2018ರಲ್ಲಿ ವರುಣನ ಆರ್ಭಟಕ್ಕೆ ಕೇರಳ ಅಕ್ಷರಶಃ ತತ್ತರಿಸಿ ಹೋಗಿತ್ತು. ಹೆಚ್ಚಿನ ಜನರು ಮನೆಯನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದರು. ನಿರಾಶ್ರಿತರ ನೋವು ಅರಿತ ಅಪ್ಪು ನೆರೆ ರಾಜ್ಯ ಕೇರಳ ಸಿಎಂ ನಿಧಿಗೆ 5 ಲಕ್ಷ ರೂ ನೀಡಿ ಹೃದಯ ವೈಶಾಲ್ಯ ಮೆರೆದಿದ್ದರು.
ಪುನೀತ್ ರಾಜ್ ಕುಮಾರ್ 26 ಅನಾಥಾಶ್ರಮ, 16 ವೃದ್ಧಾಶ್ರಮ ಹಾಗೂ 19 ಗೋಶಾಲೆಗಳಿಗೆ ಆರ್ಥಿಕ ನರವನ್ನೂ ನೀಡುತ್ತಿದ್ದರು. ತಾನು ಹಾಡುತ್ತಿದ್ದ ಹಾಡಿಗೆ ಬಂದ ಹಣವನ್ನು ಅಪ್ಪು ದಾನ ಮಾಡುತ್ತಿದ್ದರು. ಇದರ ಜೊತೆಗೆ ಆಗಾಗ ಕನ್ನಡ ಮಾಧ್ಯಮ ಶಾಲೆಗಳಿಗೂ ನೆರವಿನ ಹಸ್ತ ಚಾಚುತ್ತಿದ್ದರು.
ಶಕ್ತಧಾಮದ ಮೂಲಕ ಅಬಲೆಯರಿಗೆ ನೆರವು: ಅಪ್ಪು ಶಕ್ತಿಧಾಮ ಸಂಘಟನೆ ಮೂಲಕ ನಿರಾಶ್ರಿತ ಅಬಲೆಯರಿಗೆ ಆಸರೆಯಾಗಿದ್ದರು. ಶಕ್ತಿಧಾಮದ ಮೂಲಕ ಸಾವಿರಾರು ವಿದ್ಯಾರ್ಥಿನಿಯರಿಗೆ ನೆರವು ನೀಡಿದ್ದರು. ಈ ಸಂಘ ನಿರಾಶ್ರಿತ ಹುಡುಗಿಯರಿಗೆ ಶಿಕ್ಷಣ ನೀಡುತ್ತಿತ್ತು. ಈ ಸಂಘಟನೆ ಆತ್ಯಾಚಾರಕ್ಕೊಳಗಾದ ಹುಡುಗಿಯರಿಗೂ ಆಶ್ರಯ ನೀಡುತ್ತಿತ್ತು. ವರದಕ್ಷಿಣೆ ಕಿರುಕುಳಕ್ಕೊಳಗಾದ ಮಹಿಳೆ, ವೇಶ್ಯಾವಾಟಿಕೆಯಿಂದ ರಕ್ಷಿಸಲ್ಪಟ್ಟ ಮಹಿಳೆಯರಿಗೂ ಸಹಾಯ ಮಾಡುತ್ತಿದೆ.
ಕಣ್ಣು ದಾನಮಾಡಿ ಮಾದರಿಯಾದ ಅಪ್ಪು: ಅಪ್ಪು ತಂದೆಯಂತೆ ತಮ್ಮ ಕಣ್ಣನ್ನು ದಾನ ಮಾಡಿದ್ದರು. ಆ ಮೂಲಕ ದೃಷ್ಟಿಹೀನರ ಪಾಲಿಗೆ ಬೆಳಕಾಗಿ ಅಜರಾಮರಾದರು. ತಂದೆಯಂತೆ ಪುನೀತ್ ಕೂಡ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದರು. ಅಪ್ಪು ಅಸುನೀಗಿದ ತಕ್ಷಣ ಅವರ ಇಚ್ಛೆಯಂತೆ ಅವರ ಕಣ್ಣುಗಳನ್ನು ಸಂಗ್ರಹಿಸಲಾಯಿತು. ಪುನೀತ್ ಕಣ್ಣುಗಳು ಕೆಲ ದೃಷ್ಟಿ ಹೀನರ ಬಾಳಿಗೆ ಬೆಳಕು ನೀಡುವಂತಾಯಿತು.
ಹಲವು ಸರ್ಕಾರಿ ಅಭಿಯಾನಗಳಿಗೆ ಅಪ್ಪು ರಾಯಭಾರಿ: ಸರ್ಕಾರದ ಹಲವು ಅಭಿಯಾನಗಳಿಗೆ ಅಪ್ಪು ರಾಯಭಾರಿಯಾಗಿದ್ದರು. ಸಾಮಾಜಿಕ ಕಳಕಳಿಯಿಂದ ಉಚಿತವಾಗಿ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದರು. ಪುನೀತ್ ರಾಜಕುಮಾರ್ 2019ರಲ್ಲಿ ಬಿಎಂಟಿಸಿ ಸಂಸ್ಥೆಯ ರಾಯಭಾರಿಯಾಗಿದ್ದರು. ಆ ಮೂಲಕ ಜನರು ಹೆಚ್ಚಿಗೆ ಸಾರ್ವಜನಿಕ ಸಾರಿಗೆ ಬಳಸಲು ಪ್ರೇರೇಪಿಸುತ್ತಿದ್ದರು. ರಾಯಭಾರಿಯಾಗಿ ಅಪ್ಪು ಬಸ್ ಲೇನ್, ಕಡಿಮೆ ಸಂಚಾರ ದಟ್ಟಣೆ ದಿನ ಹಾಗೂ ಮಹಿಳಾ ಕಿರುಕುಳ ವಿರುದ್ಧದ ಅಭಿಯಾನದ ಪರ ಜಾಗೃತಿ ಮೂಡಿಸುತ್ತಿದ್ದರು.
ಅಪ್ಪು ಕೆಎಂಎಫ್ನ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಉಚಿತವಾಗಿ ರಾಯಭಾರಿಯಾಗಿ ಕೆಲಸ ಮಾಡಿದ್ದ ಪುನೀತ್ ಕೆಎಂಎಫ್ ಹಾಲು ಉತ್ಪನ್ನಗಳ ಬಗ್ಗೆ ಪ್ರಚಾರ ಮಾಡುತ್ತಿದ್ದರು. ಅಪ್ಪು ಚುನಾವಣಾ ಆಯೋಗದ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದರು. ಆ ಮೂಲಕ ಮತ ಚಲಾಯಿಸುವಂತೆ ರಾಜ್ಯದ ಜನರಿಗೆ ಕರೆ ನೀಡಿದ್ದರು.
ಇದರ ಜೊತೆಗೆ ಪುನೀತ್ ಹಲವು ವರ್ಷ ಬೆಸ್ಕಾಂನ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದರು. ಯಾವುದೇ ಹಣ ಪಡೆಯದೇ ಅಪ್ಪು ಎಲ್‌ಇಡಿ ಬಲ್ಬ್ ಬಗ್ಗೆ ಜನಜಾಗೃತಿ ಮೂಡಿಸಿದ್ದರು. ಇದರ ಜೊತೆಗೆ ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಗೂ ಕರೆ ನೀಡುತ್ತಿದ್ದರು.
ಇನ್ನು ಶಿಕ್ಷಣ ಯಾವತ್ತೂ ಅಪ್ಪು ಹೃದಯಕ್ಕೆ ಹತ್ತಿರದ ವಿಷಯವಾಗಿತ್ತು. ಹೀಗಾಗಿ ಅವರು ಪ್ರತಿ ವರ್ಷ ಅಸಂಖ್ಯಾತ ಮಕ್ಕಳ ಶಾಲಾ ಶುಲ್ಕವನ್ನು ಭರಿಸುತ್ತಿದ್ದರು. ಆರ್ಟಿಇ ಅಡಿ ಅನೇಕ ಸೀಟುಗಳು ಖಾಲಿ ಇದ್ದಾಗ ಪುನೀತ್ ಆ ಬಗ್ಗೆ ಜನಜಾಗೃತಿ ಮೂಡಿಸಿದ್ದರು.
ಓದಿ: ಪುನೀತ್ ರಾಜ್‌ಕುಮಾರ್ ಅಗಲಿಕೆಗಿಂದು ಒಂದು ವರ್ಷ: ಆ ಕರಾಳ ದಿನ ಆಗಿದ್ದೇನು?