ಹೈದರಾಬಾದ್: ಬಾಲಿವುಡ್ ಸ್ಟಾರ್ ಮಕ್ಕಳಾದ ಇಶಾನ್ ಖಟ್ಟರ್ ಮತ್ತು ಅನನ್ಯಾ ಪಾಂಡೆ ಬ್ರೇಕಪ್ ಆಗಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಶಾನ್ ಮತ್ತು ಅನನ್ಯಾ ಮೂರು ವರ್ಷಗಳ ನಂತರ ಬೇರೆಯಾಗಲು ನಿರ್ಧರಿಸಿರುವುದಾಗಿ ಎಲ್ಲೆಡೆಯೂ ಚರ್ಚೆಯಾಗುತ್ತಿದೆ. ಆದರೆ, ಈ ಬಗ್ಗೆ ಜೋಡಿ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ವರ್ಷಗಳ ಹಿಂದೆಯಷ್ಟೇ ತಮ್ಮ ಪ್ರೀತಿ ಹಾಗೂ ರಿಲೇಶನ್ಶಿಪ್ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದರು. ಅದಕ್ಕೆ ತಕ್ಕಂತೆ ಹಲವಾರು ಪಾರ್ಟಿಗಳಲ್ಲಿ ಮತ್ತು ಹಾಲಿಡೇ ಜಾಗಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡು ತಾವು ಹೇಳಿದ ಮಾತುಗಳಿಗೆ ಪುಷ್ಟಿ ನೀಡಿದ್ದರು. ಆದರೆ, ಈಗ ಈ ಜೋಡಿ ತಮ್ಮ ಮೂರು ವರ್ಷಗಳ ರಿಲೇಶನ್ಶಿಪ್ಗೆ ಅಂತ್ಯ ಹಾಡಿದೆ ಎಂಬ ಸುದ್ದಿ ವೈರಲ್ ಆಗಿದೆ. ಈ ಸುದ್ದಿಯಿಂದ ಅಭಿಮಾನಿಗಳು ಆಶ್ಚರ್ಯಗೊಂಡಿದ್ದಾರೆ.
ಬಾಲಿವುಡ್ ನಟ ಶಾಹಿದ್ ಕಪೂರ್ ಅವರ ಕಿರಿಯ ಸಹೋದರ ಇಶಾನ್ ಖಟ್ಟರ್ ಮತ್ತು ನಟ ಚಂಕಿ ಪಾಂಡೆ ಅವರ ಪುತ್ರಿ ಅನನ್ಯಾ ಪಾಂಡೆ, 'ಖಾಲಿ ಪೀಲಿ' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ತಿಂಗಳ ಹಿಂದೆ ಶಾಹಿದ್ ಕಪೂರ್ ಅವರ ಹುಟ್ಟುಹಬ್ಬದ ಆಚರಣೆಯಲ್ಲಿಯೂ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿತ್ತು. ಬರ್ತ್ಡೇ ಕಾರ್ಯಕ್ರಮದಲ್ಲಿ ಅನ್ಯೋನ್ಯವಾಗಿಯೇ ಕಾಣಿಸಿಕೊಂಡಿದ್ದ ಜೋಡಿ, ತುಂಬಾ ಇತ್ತೀಚೆಗೆ ಬೇರೆಯಾಗುವ, ಉತ್ತಮ ಸ್ನೇಹಿತರಾಗಿರುವ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಮೂಲಗಳು ಹೇಳುತ್ತಿವೆ.
ಈ ಹಿಂದೆ ನಟಿ ಜಾನ್ವಿ ಕಪೂರ್ ಜೊತೆ ಇಶಾನ್ ಖಟ್ಟರ್ ಹೆಸರು ತಳುಕು ಹಾಕಿಕೊಂಡಿತ್ತು. ಧಡಕ್ ಸಿನಿಮಾದಲ್ಲಿ ಇಶಾನ್ ಹಾಗೂ ಜಾನ್ವಿ ಕಪೂರ್ ಒಟ್ಟಿಗೆ ಅಭಿನಯಿಸಿದ್ದರು. ಆದರೆ, ಎರಡೂ ಸ್ಟಾರ್ಗಳು ಈ ಲಿಂಕ್ ಅಪ್ ಸುದ್ದಿಯನ್ನು ಕಡೆಗಣಿಸಿದ್ದರು. ತಾವು ಸ್ನೇಹಿತರಷ್ಟೇ ಎಂದು ಹೇಳಿಕೊಂಡಿದ್ದರು. ಅದೇ ಸಮಯಕ್ಕೆ 'ಖಾಲಿ-ಪೀಲಿ' ಚಿತ್ರದ ಸೆಟ್ನಿಂದ ಇಶಾನ್ ಹಾಗೂ ಅನನ್ಯಾ ಅವರ ರಿಲೇಶನ್ಶಿಪ್ ಬಗ್ಗೆಯೂ ಸುದ್ದಿ ಹರಡಿತ್ತು.
ಇದನ್ನೂ ಓದಿ: ಹಸಿ-ಬಿಸಿ ಫೋಟೋ ಹರಿಬಿಟ್ಟ ಅನನ್ಯಾ ಪಾಂಡೆ : ತುಂಡುಡುಗೆಯಲ್ಲಿ ಮಿಂಚಿದ ಗ್ಲಾಮರ್ ಗೊಂಬೆ
ಇಬ್ಬರೂ ತಮ್ಮ ತಮ್ಮ ವೃತ್ತಿಜೀವನದ ಮೇಲೆ ಕೇಂದ್ರೀಕರಿಸಿದ್ದು, ಅನನ್ಯಾ ಪಾಂಡೆ ಅಭಿನಯದ 'ಘೆಹ್ರಾಯನ್' ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿದೆ. ಇಶಾನ್ 'ಡೋಂಟ್ ಲುಕ್ ಅಪ್' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ಮುಂದಿನ ಚಿತ್ರ ಫೋನ್ ಭೂತ್ ನಲ್ಲಿ ಕತ್ರಿನಾ ಕೈಫ್ ಹಾಗೂ ಸಿದ್ಧಾಂತ್ ಚತುರ್ವೇದಿ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಆ ಚಿತ್ರ ಇದೇ ವರ್ಷ ಬಿಡುಗಡೆಯಾಗುವ ಸಾಧ್ಯತೆಯಿದೆ.