ಹೈದರಾಬಾದ್ (ತೆಲಂಗಾಣ): ಟಾಲಿವುಡ್ನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ನಟಿ ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ: ದಿ ರೈಸ್ ಚಿತ್ರದ ಮುಂದುವರೆದ ಭಾಗ ಆರಂಭವಾಗಿದೆ. ಇಂದು (ಸೋಮವಾರ) ಹೈದರಾಬಾದ್‌ನಲ್ಲಿ ವಿಶೇಷ ಪೂಜೆ ಮಾಡುವ ಮೂಲಕ ಪುಷ್ಪ-2 ಸಿನಿಮಾದ ಚಿತ್ರೀಕರಣಕ್ಕೆ ಚಾಲನೆ ದೊರೆತಿದೆ. ಚಿತ್ರದ ಕ್ಲೈಮ್ಯಾಕ್ಸ್ಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಚಿತ್ರ ತಂಡ ಖುಷಿ ವಿಚಾರ ನೀಡಿದೆ.
ಟ್ವಿಟರ್‌ನಲ್ಲಿ ಅಲ್ಲು ಅರ್ಜುನ್ ಅಭಿಮಾನಿ ಬಳಗವು ಸಮಾರಂಭದ ಕೆಲವು ಫೋಟೋಗಳನ್ನು ಹಂಚಿಕೊಂಡಿದೆ. ನಿರೀಕ್ಷೆಯಂತೆ ಮುಂದುವರೆದ ಭಾಗ ಪುಷ್ಪ: ದಿ ರೂಲ್ ಚಿತ್ರೀಕರಣ ಶುರುವಾಗಿದೆ ಎಂದು ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಚಿತ್ರದ ತಂಡದ ಸದಸ್ಯರೊಂದಿಗೆ ಶ್ರಿವಲ್ಲಿ ಅಲಿಯಾಸ್ ನಟಿ ರಶ್ಮಿಕಾ ಮಂದಣ್ಣ ಎಥ್ನಿಕ್ ವೇರ್ನಲ್ಲಿ ಕಾಣಿಸಿಕೊಂಡರೆ ಪುಷ್ಪರಾಜ್ ಅಲಿಯಾಸ್ ನಟ ಅಲ್ಲುಅರ್ಜುನ್ ಕಾಣೆಯಾಗಿದ್ದರು. ಅವರು ಕಾರ್ಯನಿಮಿತ್ತ ನ್ಯೂಯಾರ್ಕ್‌ನಲ್ಲಿರುವುದರಿಂದ ಗೈರಾಗಿದ್ದರು ಎಂದು ಹೇಳಲಾಗುತ್ತಿದೆ.
ಚಿತ್ರಕ್ಕೆ ಹಣ ಹೂಡಿರುವ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀಸ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದೆ. ಪುಷ್ಪರಾಜ್ ಈಸ್ ಬ್ಯಾಕ್ ಎಂದು ಬರೆದುಕೊಳ್ಳಲಾಗಿದೆ. ಇದಕ್ಕೂ ಮುನ್ನ ಆಗಸ್ಟ್ 22 ಸೋಮವಾರದಂದು ವಿಶೇಷ ಪೂಜೆ ನಡೆಯಲಿದೆ ಎಂದು ಅವರು ಬಹಿರಂಗಪಡಿಸಿದ್ದರು. ನಿರೀಕ್ಷೆಯಂತೆ ಇದೀಗ ಚಿತ್ರೀಕರಣಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಸುಕುಮಾರ್ ನಿರ್ದೇಶನದ ಪುಷ್ಪ: ದಿ ರೈಸ್ ಚಿತ್ರವು ಡಿ. 17, 2021 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಮೂಲಕ ಬಾಕ್ಸ್ ಆಫೀಸ್ನಲ್ಲಿ ಧೂಳ್ ಎಬ್ಬಿಸಿತ್ತು. ರಕ್ತಚಂದನ ಕಳ್ಳಸಾಗಣೆ ಕತೆ ಹೊಂದಿರುವ ಚಿತ್ರ ಇದಾಗಿದ್ದು ಸಕ್ಸಸ್ ಕಂಡಿತ್ತು. ಹಾಡು, ಸಾಹಸ ದೃಶ್ಯಗಳು, ಅಲ್ಲು ಅರ್ಜುನ್ ಅವರ ನಟನೆ, ರಶ್ಮಿಕಾ ಮಂದಣ್ಣ ನೃತ್ಯ ಸೇರಿದಂತೆ ಹಲವು ಕಾರಣಗಳಿಂದ ನೋಡುಗರ ಮನ ಗೆದ್ದಿತ್ತು.
ಇದನ್ನೂ ಓದಿ: ನಾಳೆ ಮೆಗಾಸ್ಟಾರ್ ಚಿರಂಜೀವಿ ಹುಟ್ಟುಹಬ್ಬ..ಬೋಲಾ ಶಂಕರ್ ಬಿಡುಗಡೆ ದಿನಾಂಕ ಅನೌನ್ಸ್