ಅಲೆಕ್ಸ್ ಸ್ಯಾಂಡಲ್ ವುಡ್ನಲ್ಲಿ ತನ್ನ ಟೈಟಲ್ ನಿಂದಲೇ ಸದ್ದು ಮಾಡುತ್ತಿದೆ. ಈ ಚಿತ್ರದಲ್ಲಿ ಕನ್ನಡದ ಸ್ಟಾರ್ ನಟಿ ಅದಿತಿ ಪ್ರಭುದೇವ ಹಾಗೂ ನಟ ಪವನ್ ತೇಜ್ ಮುಖ್ಯಭೂಮಿಕೆಯಲ್ಲಿದ್ದಾರೆ. ಸಂಪೂರ್ಣ ಶೂಟಿಂಗ್ ಮುಗಿಸಿ ತೆರೆಗೆ ಬರೋದಕ್ಕೆ ಸಜ್ಜಾಗಿರೋ ಅಲೆಕ್ಸ್ ಚಿತ್ರದ ಹಾಡುಗಳು ಹಾಗೂ ಟ್ರೈಲರ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು.
ಜೀವ ನಿರ್ದೇಶನದ ಅಲೆಕ್ಸಾ ಚಿತ್ರಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಭಾ.ಮ.ಹರೀಶ್, ಹಿರಿಯ ಕಲಾವಿದರಾದ ಸುಂದರರಾಜ್, ಪ್ರಮೀಳಾ ಜೋಷಾಯಿ, ಐಪ್ಲೆಕ್ಸ್ ಆಡಿಯೋ ಸಂಸ್ಥೆಯ ಮೋಹನ್ ಮುಂತಾದ ಗಣ್ಯರು ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದರು.
ನಿರ್ದೇಶಕ ಜೀವ ಮಾತನಾಡಿ, ಅಲೆಕ್ಸಾ ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿರುವ ಚಿತ್ರ. "ಬುಜಂಗ" ಚಿತ್ರದ ನಂತರ ನಾನು ನಿರ್ದೇಶಿಸಿರುವ ಎರಡನೇ ಚಿತ್ರವಿದು. ಚಿತ್ರತಂಡದ ಸಹಕಾರದಿಂದ ಅಲೆಕ್ಸಾ ಚೆನ್ನಾಗಿ ಮೂಡಿಬಂದಿದೆ ಎಂದರು.
ನಂತರ ಅದಿತಿ ಪ್ರಭುದೇವ ಮಾತನಾಡಿ ನಾನು ಈ ಚಿತ್ರದಲ್ಲಿ ಇನ್ವೆಸ್ಟಿಕೇಶನ್ ಪೊಲೀಸ್ ಆಫೀಸರ್. "ಅಲೆಕ್ಸಾ" ನನ್ನ ಪಾತ್ರದ ಹೆಸರು. ನನಗೆ ನಿಜ ಜೀವನದಲ್ಲಿ ಪೊಲೀಸ್ ಅಧಿಕಾರಿಯಾಗಬೇಕೆಂಬ ಆಸೆಯಿತ್ತು. ನಿರ್ದೇಶಕರು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಎಂದ ತಕ್ಷಣ ಒಪ್ಪಿಕೊಂಡೆ. ಈ ಚಿತ್ರದಲ್ಲಿ ನಾನು ಸಾಹಸ ದೃಶ್ಯಗಳಲ್ಲಿ ಅಭಿನಯಿಸಿದ್ದೇನೆ. ಸಾಹಸ ದೃಶ್ಯ ಹೇಳಿಕೊಟ್ಟ ಸಾಹಸ ನಿರ್ದೇಶಕ ರವಿವರ್ಮ ಅವರಿಗೆ ಧನ್ಯವಾದ ಎಂದು ಹೇಳಿದರು.
ಇನ್ನು ನಾಯಕ ಪವನ್ ತೇಜಾ ಮಾತನಾಡಿ ನಮ್ಮದು ಮರ್ಡರ್ ಮಿಸ್ಟರಿ ಕಥೆ ಎನ್ನಬಹುದು. ಸಸ್ಪೆನ್ಸ್ ಥ್ರಿಲ್ಲರ್ ಕಥೆ ಎನ್ನಬಹುದು. ಈ ಹಿಂದೆ ಕನ್ನಡದಲ್ಲಿ ಮರ್ಡರ್ ಮಿಸ್ಟರಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳು ಸಾಕಷ್ಟು ಬಂದಿವೆಯಾದರೂ ನಮ್ಮ ಚಿತ್ರದ ಕಥೆ ಸ್ವಲ್ಪ ವಿಭಿನ್ನವಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ವರ್ಷದ ಕೊನೆಗೆ ಬಿಡುಗಡೆಯಾಗುತ್ತಿರುವ ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹ ನೀಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದರು.
ಈ ಚಿತ್ರಕ್ಕೆ ಸತೀಶ್ ಚಂದ್ರ ಛಾಯಾಗ್ರಹಣವಿದ್ದು, ಉಮೇಶ್ ಆರ್.ಬಿ ಸಂಕಲನವಿದೆ. ವಿ.ಚಂದ್ರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಸದ್ಯ ಟ್ರೇಲರ್ ಹಾಗೂ ಹಾಡುಗಳು ಕೂಡ ಸಿನಿಮಾ ಪ್ರೇಮಿಗಳ ಮನ ಗೆಲುತ್ತಿದೆ. ಡಿಸೆಂಬರ್ 29 ರಂದು ಬಹು ನಿರೀಕ್ಷಿತ ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಇದನ್ನೂ ಓದಿ : ಅಭಿನಯದ ಜೊತೆಗೆ ನಿರ್ದೇಶಕಿಯಾಗಲು ಹೊರಟ ಅಪೂರ್ವ ಸಿನಿಮಾದ ಚೆಲುವೆ