ಕೆಲವು ತಿಂಗಳ ಹಿಂದೆ 'ಸೇನಾಪುರ' ಚಿತ್ರದ ಟ್ರೇಲರ್ ಬಿಡುಗಡೆಯಾಗಿತ್ತು. ಈ ವೇಳೆ ಸದ್ಯದಲ್ಲೇ ಇನ್ನೊಂದು ಹೊಸ ಚಿತ್ರದ ಘೋಷಣೆ ಮಾಡುವುದಾಗಿ ನಿರ್ದೇಶಕ ಗುರು ಸಾವನ್ ಹೇಳಿದ್ದರು. ಅದರಂತೆ ಇದೀಗ 'ಮನ್ ರೇ' ಎಂಬ ಸಿನಿಮಾದೊಂದಿಗೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಅನೇಕ ಚಿತ್ರಗಳಲ್ಲಿ ನಟಿಸಿರುವ ಅಜಯ್ ರಾಜ್ ಹಾಗೂ ಐಶ್ವರ್ಯಾ ರಂಗರಾಜನ್ 'ಮನ್ ರೇ'ಗೆ ನಾಯಕ-ನಾಯಕಿಯಾಗಿದ್ದಾರೆ.
ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಗುರು ಸಾವನ್, "'ಮನ್ ರೇ' ಎಂದರೆ ಮನಸ್ಸಿನ ಎಕ್ಸ್ ರೇ ಎಂದರ್ಥ. ಮನಸ್ಸಿನ ತೊಳಲಾಟವನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಕಾನ್ಶಿಯಸ್ ಮತ್ತು ಸಬ್ ಕಾನ್ಶಿಯಸ್ ಮೈಂಡ್ ನಡುವಿನ ತೊಳಲಾಟವಿದು. ಸುಮಾರು 8 ರಿಂದ 9 ವರ್ಷಗಳ ಹಿಂದೆಯೇ ಕಥೆ ಮಾಡಿಕೊಂಡಿದ್ದೆ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಕಥೆ. ಸಂಪೂರ್ಣ ಕಾಲ್ಪನಿಕ ಕಥೆ" ಎಂದು ತಿಳಿಸಿದರು.
"ಇಂತಹದ್ದೊಂದು ಸಮಸ್ಯೆ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ನಾವು ಏನೋ ಕೆಲಸ ಮಾಡುತ್ತಿದ್ದರೆ, ಮನಸ್ಸು ಇನ್ನೇನೋ ಯೋಚಿಸುತ್ತಿರುತ್ತದೆ. ಇಲ್ಲಿ ನಾಯಕ ಆರವ್, ಭ್ರಮೆಯ ಲೋಕದಲ್ಲಿ ಬದುಕುತ್ತಿರುತ್ತಾನೆ. ಅವನು ವಾಸ್ತವಕ್ಕೆ ಹೇಗೆ ಬರುತ್ತಾನೆ. ಅವನ ಸುತ್ತಲಿನವರು, ಅವನ ಈ ಸಮಸ್ಯೆಯಿಂದ ಎಷ್ಟೆಲ್ಲಾ ಕಷ್ಟಪಡುತ್ತಾರೆ ಎನ್ನುವುದನ್ನು ಈ ಚಿತ್ರದ ಮೂಲಕ ತೋರಿಸಲು ಪ್ರಯತ್ನ ಮಾಡುತ್ತಿದ್ದೇವೆ. ಪ್ರಮೋದ್ ಶೆಟ್ಟಿ ಇಲ್ಲಿ ಅರಸ್ ಎಂಬ ವೈದ್ಯರ ಪಾತ್ರ ಮಾಡುತ್ತಿದ್ದಾರೆ. ಈಗಾಗಲೇ ಪ್ರೀಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ" ಎಂದು ಮಾಹಿತಿ ನೀಡಿದರು.
ಬಳಿಕ ನಾಯಕ ನಟ ಅಜಯ್ ರಾಜ್ ಮಾತನಾಡಿ, "ಸಾಮಾನ್ಯವಾಗಿ ಸೈಕಲಾಜಿಕಲ್ ಥ್ರಿಲ್ಲರ್ ಎಂದರೆ ಕ್ರೈಮ್ ಅಥವಾ ಹಿಂಸೆ ಇರುತ್ತದೆ. ಆದರೆ, ಈ ಚಿತ್ರದಲ್ಲಿ ಅಂಥದ್ದು ಯಾವುದೂ ಇರುವುದಿಲ್ಲ. ಸರಳವಾಗಿ ಹೇಳಬೇಕು ಎಂದರೆ ಇದು ಮನಸ್ಸಿನೊಳಗೆ ನಡೆಯುವ ಸಂಘರ್ಷ. ಇಲ್ಲಿ ನಾಯಕನೇ ಸಮಸ್ಯೆ. ಅವನಿಂದ ಏನಾಗುತ್ತದೆ ಎಂಬುದು ಕಥೆ" ಎಂದರು.
ಇದನ್ನೂ ಓದಿ: ಕೇವಲ 48 ಗಂಟೆಗಳಲ್ಲಿ ನಡೆಯುವ ಕಥೆ: 'ಘೋಸ್ಟ್' ಮಾಹಿತಿ ಹಂಚಿಕೊಂಡ ಶಿವರಾಜ್ಕುಮಾರ್
"ನನಗೆ ವಿಶೇಷ ಪಾತ್ರ ಸಿಕ್ಕಿದೆ. ಅಷ್ಟೇ ಅಲ್ಲ, ಇದು ನನ್ನ ಕನಸಿನ ಪಾತ್ರ. ನಿರ್ದೇಶಕರು ಬಂದು ಒಂದು ಸೀನ್ ಕೇಳಿ, ಆ ನಂತರ ಚಿತ್ರದಲ್ಲಿ ನಟಿಸುವ ಬಗ್ಗೆ ಯೋಚನೆ ಮಾಡಿ ಎಂದರು. ಬಹುಶಃ ಗ್ಲಾಮರಸ್ ಪಾತ್ರ ಇರಬಹುದು ಎಂದುಕೊಂಡೆ. ಆದರೆ, ಹಾಗೇನಿಲ್ಲ. ಇದೊಂದು ಸವಾಲಿನ ಪಾತ್ರ. ನಾನು ಇದುವರೆಗೂ ನೋಡಿರುವ ಚಿತ್ರಗಳಲ್ಲಿ ಇಂಥದ್ದೊಂದು ಪಾತ್ರ ಬಂದಿಲ್ಲ. ಹಾಗೆಯೇ ಇಂಥದ್ದೊಂದು ಪಾತ್ರ ಹೇಗೆ ಹೊಳೆಯಿತು ಎಂಬ ಆಶ್ಚರ್ಯವೂ ನನಗಾಯಿತು" ಎಂದು ನಟಿ ರಜನಿ ಸಂತಸ ವ್ಯಕ್ತಪಡಿಸಿದರು. ಕಥಾ ನಾಯಕಿ ಐಶ್ವರ್ಯಾ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಖುಷಿ ಹಂಚಿಕೊಂಡರು.
ನಿರ್ಮಾಪಕರಲ್ಲಿ ಒಬ್ಬರಾದ ತಿಲಕ್ ರಾಜು ಅನಿವಾಸಿ ಭಾರತೀಯ. ಸದ್ಯ ಅಮೆರಿಕದಲ್ಲಿ ವಾಸಿಸುತ್ತಿರುವ ಅವರಿಗೆ ಚಿತ್ರ ಮಾಡುವುದು ಬಹುದಿನಗಳ ಕನಸಾಗಿತ್ತಂತೆ. ಈ ಚಿತ್ರದ ಮೂಲಕ ಅದು ನನಸಾಗುತ್ತಿದೆ ಎಂದು ಸಂತಸಪಟ್ಟರು.
ಚಿತ್ರತಂಡ: 'ಮನ್ ರೇ' ಚಿತ್ರಕ್ಕೆ ಆದಿ ಛಾಯಾಗ್ರಹಣ, ಖ್ಯಾತ ಗಾಯಕ ಅನಿರುದ್ಧ್ ಶಾಸ್ತ್ರಿ ಸಂಗೀತದ ಜೊತೆಗೆ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಜಯ್ ರಾಜ್, ಐಶ್ವರ್ಯಾ ರಂಗರಾಜನ್ ಅಲ್ಲದೇ, ಕಿರುತೆರೆ ನಟಿ ರಜನಿ, ಪ್ರಮೋದ್ ಶೆಟ್ಟಿ, ಸೂರ್ಯ ಸಿದ್ಧಾರ್ಥ್, ಅಮಿತ್ ರಾಜ್ ಮುಂತಾದವರು ನಟಿಸುತ್ತಿದ್ದಾರೆ. ಭೂಮಿಕಾ ಕ್ರಿಯೇಷನ್ಸ್ ಅಡಿ ತಿಲಕ್ ರಾಜು ಮತ್ತು ರಾಜಣ್ಣ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೇ ನವೆಂಬರ್‌ನಲ್ಲಿ ಚಿತ್ರೀಕರಣ ಪ್ರಾರಂಭವಾಗಿ ಮುಂದಿನ ವರ್ಷ ಮೇ ತಿಂಗಳಲ್ಲಿ ಬಿಡುಗಡೆಗೊಳಿಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.
ಇದನ್ನೂ ಓದಿ: 'ಪುನೀತ್ ರಾಜ್ಕುಮಾರ್ ಮನೆ ಮನೆಯ ಮಗ, ಸ್ಮಾರಕ ಪುನರಾಭಿವೃದ್ಧಿಗೆ ಸರ್ಕಾರ ಸಾಥ್': ಸಿಎಂ ಸಿದ್ದರಾಮಯ್ಯ