ಬಾಲಿವುಡ್ ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ರಾಮಾಯಣವನ್ನು ಆಧರಿಸಿ ಸಿನಿಮಾವೊಂದನ್ನು ಮಾಡಲು ಹೊರಟಿದ್ದಾರೆ. ಈ ವರ್ಷದ ದೀಪಾವಳಿ ಸಂದರ್ಭ ಈ ಸಿನಿಮಾವನ್ನು ಘೋಷಿಸಬಹುದು. ಈ ಚಿತ್ರದಲ್ಲಿ ನಿಜ ಜೀವನದ ಜೋಡಿ ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ರಾಮ ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾವಣನ ಪಾತ್ರಕ್ಕೆ ಯಶ್ ಹೆಸರು ಕೇಳಿಬಂದಿದ್ದವು. ಆದರೆ ಅವರು ಈ ಯೋಜನೆಯಿಂದ ಹಿಂದೆ ಸರಿದಿರುವುದಾಗಿ ತಿಳಿಬಂದಿದೆ.
ಸದ್ಯ ಸಿನಿಮಾದ ಪಾತ್ರಗಳ ಆಯ್ಕೆ ನಡೆಯುತ್ತಿದೆ. ಈ ವರ್ಷಾಂತ್ಯದಲ್ಲಿ ಅಂದರೆ ಡಿಸೆಂಬರ್ನಲ್ಲಿ ಚಿತ್ರ ಸೆಟ್ಟೇರಲಿದೆ ಎಂಬ ಮಾಹಿತಿ ಇದೆ. ಈ ಬೃಹತ್ ಪ್ರಾಜೆಕ್ಟ್ ಬಗ್ಗೆ ಸದ್ಯ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿರುವ 'ಆದಿಪುರುಷ್' ಚಿತ್ರದ ನಿರ್ದೇಶಕ ಓಂ ರಾವುತ್ ಪ್ರತಿಕ್ರಿಯಿಸಿದ್ದಾರೆ. ಪ್ರತಿಯೊಬ್ಬ ರಾಮ ಭಕ್ತನಂತೆ ತಾವೂ ಈ ಯೋಜನೆಗೆ ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. ಜೊತೆಗೆ ಆದಿಪುರುಷ್ ಟ್ರೋಲ್ ಕುರಿತಾಗಿಯೂ ಪ್ರತಿಕ್ರಿಯಿಸಿದ್ದಾರೆ.
ರಾಮಾಯಣಕ್ಕಾಗಿ ನಾನು ಕಾಯುತ್ತಿರುವೆ.. "ನಿತೇಶ್ ಒಬ್ಬ ಉತ್ತಮ ನಿರ್ದೇಶಕ ಮತ್ತು ನನ್ನ ಸ್ನೇಹಿತ ಕೂಡ. ಅವರ ‘ದಂಗಲ್’ ಸಿನಿಮಾ ತುಂಬಾ ಚೆನ್ನಾಗಿದೆ. ಕಥೆ ಬರೆಯುವ ರೀತಿ ಮತ್ತು ಚಿತ್ರ ನಿರ್ಮಿಸಿದ ರೀತಿ ಮತ್ತೊಂದು ಹಂತದಲ್ಲಿದೆ. ಪ್ರತಿಯೊಬ್ಬ ರಾಮ ಭಕ್ತನಂತೆ ನಾನು ಕೂಡ ನಿತೇಶ್ ಅವರ ಮುಂಬರುವ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದೇನೆ. ರಾಮಾಯಣ ಮತ್ತು ಶ್ರೀರಾಮನ ಕುರಿತು ಈಗಾಗಲೇ ಬೆಳ್ಳಿತೆರೆಯಲ್ಲಿ ಸಾಕಷ್ಟು ಸಿನಿಮಾಗಳು ಮೂಡಿಬಂದಿವೆ. ರಾಮಾಯಣ ನಮ್ಮ ಮಹಾಕಾವ್ಯ. ಈ ಮಹಾಕಾವ್ಯದ ಹಿರಿಮೆಯನ್ನು ತಿಳಿಸಲು ಎಷ್ಟು ಬಾರಿ ಬೇಕಾದರೂ ಸಿನಿಮಾ ಮಾಡಬಹುದು. ಸಾಧ್ಯವಾದಷ್ಟು ಜನರು ಈ ಕಥೆಯನ್ನು ತಿಳಿದುಕೊಳ್ಳಬೇಕು" ಎಂದು ಹೇಳಿದ್ದಾರೆ.
'ಆದಿಪುರುಷ್' ಬಗ್ಗೆ ಪ್ರೇಕ್ಷಕರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲೂ ಟ್ರೋಲ್ ಮಾಡುತ್ತಿದ್ದಾರೆ. ಅದಕ್ಕಿಂತ ಮುಖ್ಯವಾಗಿ, ಓಂ ರಾವುತ್‌ಗೆ ರಾಮಾಯಣ ಗೊತ್ತಿದೆಯೇ? ಎಂದು ಕೇಳುತ್ತಿದ್ದಾರೆ. ಇದೀಗ ಈ ನಕಾರಾತ್ಮಕ ವಿಮರ್ಶೆಗಳ ಬಗ್ಗೆ ಓಂ ರಾವುತ್ ಕೂಡ ಮಾತನಾಡಿದ್ದಾರೆ.
"ಇಲ್ಲಿ ಮುಖ್ಯವಾದದ್ದು ಬಾಕ್ಸ್ ಆಫೀಸ್‌ನಲ್ಲಿನ ಪ್ರತಿಕ್ರಿಯೆ. ಈ ಬಗ್ಗೆ ನನಗೆ ತುಂಬಾ ಖುಷಿಯಾಗಿದೆ. ಏಕೆಂದರೆ ಈ ಚಿತ್ರ ಉತ್ತಮ ಕಲೆಕ್ಷನ್ ಪಡೆಯುತ್ತಿದೆ. ಹಾಗಂತ ರಾಮಾಯಣದ ಬಗ್ಗೆ ನನಗೆಲ್ಲಾ ಗೊತ್ತು ಎಂದು ಹೇಳಿದರೆ ಅದು ಸುಳ್ಳಾಗುತ್ತದೆ. ರಾಮಾಯಣವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಯಾರಿಗೂ ಇಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಅರ್ಥಮಾಡಿಕೊಂಡ ರಾಮಾಯಣದ ಭಾಗವನ್ನು ತೆರೆಯ ಮೇಲೆ ತೋರಿಸುವ ಪ್ರಯತ್ನ ಮಾಡಿದ್ದೇನೆ. ರಾಮಾಯಣವನ್ನು ಸಂಪೂರ್ಣವಾಗಿ ತೆರೆಯ ಮೇಲೆ ತೋರಿಸುವುದು ಸುಲಭವಲ್ಲ. ಅದರ ಒಂದು ಭಾಗದತ್ತ ಗಮನ ಹರಿಸಿದ್ದೇನೆ. ಆದರೆ, ರಾಮಾಯಣವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ನನಗೆ ರಾಮಾಯಣ ಪೂರ್ತಿ ಗೊತ್ತು ಎಂದು ಯಾರಾದರೂ ಹೇಳಿದರೆ, ಅದನ್ನು ಮೂರ್ಖತನವೆಂದೇ ಕರೆಯಬೇಕಷ್ಟೇ. ಇಲ್ಲವೇ ಅದು ಸುಳ್ಳು ಎಂದು ಹೇಳಬೇಕಷ್ಟೇ" ಎಂದಿದ್ದಾರೆ.
ಇದನ್ನೂ ಓದಿ: Adipurush: 'ಆದಿಪುರುಷ'ನಿಗೆ ಭಾರಿ ಆಕ್ಷೇಪ; ವಿವಾದಿತ ಸಂಭಾಷಣೆ ಬದಲಿಸಲು ಚಿತ್ರತಂಡ ನಿರ್ಧಾರ