ಹೈದರಾಬಾದ್: ಹಿಂದು ಮಹಾಕಾವ್ಯಗಳಲ್ಲಿ ಒಂದಾದ ಪವಿತ್ರ ರಾಮಾಯಾಣ ಆಧರಿತ 'ಆದಿಪುರುಷ್' ಸಿನಿಮಾ ಕೆಟ್ಟ ಸಂಭಾಷಣೆಯಿಂದಾಗಿ ವಿವಾದಕ್ಕೀಡಾಗಿದೆ. ಬಹುನಿರೀಕ್ಷಿತ ಚಿತ್ರದ ವಿರುದ್ಧ ಟೀಕೆಗಳು ಕೇಳಿ ಬರುತ್ತಿರುವ ನಡುವೆಯೇ ಮೂರೇ ದಿನದಲ್ಲಿ ಸಿನಿಮಾ 300 ಕೋಟಿ ಕ್ಲಬ್ ಸೇರಿದೆ.
ಓಂ ರಾವುತ್ ಅವರ ನಿರ್ದೇಶನದ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದ್ದು, ಚಿತ್ರ ಬಿಡುಗಡೆಯಾದ ಮೊದಲ ದಿನವೇ 140 ಕೋಟಿ ರೂಪಾಯಿ ಕೊಳ್ಳೆ ಹೊಡೆದಿತ್ತು. ಎರಡನೇ ದಿನ 100 ಕೋಟಿ ರೂಪಾಯಿ ದಾಖಲಿಸಿತ್ತು. ಭಾನುವಾರ ಮೂರನೇ ದಿನ ಚಿತ್ರ ವಿಶ್ವಾದ್ಯಂತ 85 ಕೋಟಿ ರೂಪಾಯಿ ಬಾಚಿಕೊಂಡಿದೆ ಎಂದು ನಿರ್ಮಾಣ ಸಂಸ್ಥೆ ಟಿ-ಸಿರೀಸ್ ತಿಳಿಸಿದೆ.
ಕಳೆದ ಅಕ್ಟೋಬರ್‌ನಲ್ಲಿ ಚಿತ್ರದ ಟೀಸರ್ ಬಿಡುಗಡೆಯಾದಂದಿನಿಂದ ಸಿನಿಮಾ ವಿವಾದಗಳ ಸುತ್ತ ಸುತ್ತುತ್ತಿದೆ. ಕಳಪೆ ದೃಶ್ಯ, ದೈವತ್ವಕ್ಕೆ ಹೆಸರಾದ ಶ್ರೀರಾಮ, ಹನುಮಂತನ ಪಾತ್ರಗಳ ಬಾಯಲ್ಲಿ ಟಪೋರಿ ಸಂಭಾಷಣೆ ಹೇಳಿಸಿದ ಕಾರಣಕ್ಕಾಗಿ ತೀವ್ರ ಟೀಕೆಗೆ ಗುರಿಯಾಗಿದೆ. ಅಯೋಧ್ಯೆಯ ಸಂತರು ಸಿನಿಮಾವನ್ನು ನಿಷೇಧಿಸುವಂತೆ ಒತ್ತಾಯಿಸಿದ್ದಾರೆ. ಈ ಮಧ್ಯೆ, ಉತ್ತರ ಪ್ರದೇಶದ ಹಜರತ್‌ಗಂಜ್‌ನಲ್ಲಿ ಆದಿಪುರುಷ್ ನಿರ್ಮಾಪಕರ ವಿರುದ್ಧ ಬಲಪಂಥೀಯ ಗುಂಪು ಎಫ್‌ಐಆರ್ ದಾಖಲಿಸಿದೆ. ಸಿನಿಮಾ ಹಿಂದೂ ಭಾವನೆಗಳನ್ನು ಅವಮಾನಿಸಿದೆ ಎಂದು ದೂರಲಾಗಿದೆ.
ಸಂಭಾಷಣೆ ಬದಲಿಗೆ ಒಪ್ಪಿಗೆ: ಹನುಮಂತನ ಪಾತ್ರಧಾರಿಯ ಸಂಭಾಷಣೆಯು ಫುಟ್ಪಾತ್ ಭಾಷೆಯಾಗಿದೆ. ಇದು ಹಿಂದೂ ದೇವರನ್ನು ಅವಮಾನಿಸಲಾಗಿದೆ ಎಂದು ತೀವ್ರ ಟೀಕೆ ವ್ಯಕ್ತವಾಗಿದೆ. ಇದನ್ನು ಸಂಭಾಷಣೆಕಾರ ಮನೋಜ್ ಮುಂತಾಶಿರ್ ಶುಕ್ಲಾ ಆರಂಭದಲ್ಲಿ ಸಮರ್ಥಿಸಿಕೊಂಡಿದ್ದರು. ಬಳಿಕ ಹಲವು ರಾಜಕೀಯ ಪಕ್ಷಗಳು ಸೇರಿದಂತೆ ಹಿಂದು ಪರರಿಂದ ಆಕ್ರೋಶ ಹೆಚ್ಚಾದ ಹಿನ್ನೆಲೆಯಲ್ಲಿ ಮಣಿದ ಚಿತ್ರತಂಡ ಆಕ್ಷೇಪಾರ್ಹ ಡೈಲಾಗ್ಗಳಿಗೆ ಕತ್ತರಿ ಹಾಕಲು ಒಪ್ಪಿಕೊಂಡಿದೆ.
ಈ ಬೆನ್ನಲ್ಲೇ ಇಂದು ಮನೋಜ್ ಮುಂತಶಿರ್ ಶುಕ್ಲಾ ಟ್ವೀಟ್ ಮಾಡಿದ್ದಾರೆ. 'ನಾನು ಇಡೀ ಚಿತ್ರಕ್ಕೆ 4,000ಕ್ಕೂ ಹೆಚ್ಚು ಸಂಭಾಷಣೆಗಳನ್ನು ಬರೆದಿದ್ದೇನೆ, ಆದರೆ ಕೆಲ ಆಯ್ದ ಸಂಭಾಷಣೆಗಳಿಗೆ ಮಾತ್ರ ವಿರೋಧ ವ್ಯಕ್ತವಾಗುತ್ತಿದೆ. 3 ಗಂಟೆಗಳ ಚಲನಚಿತ್ರದಲ್ಲಿ, ನಾನು ನಿಮ್ಮ ಕಲ್ಪನೆಯ ಕೆಲ 3 ನಿಮಿಷಗಳನ್ನು ಪ್ರತ್ಯೇಕಿಸಿರಬಹುದು. ಡೈಲಾಗ್ಸ್ ನಿಮಗೆ ಹಿಡಿಸದೇ ಇರಬಹುದು. ಅದಕ್ಕಾಗಿ ನೀವು ನನ್ನತ್ತ ಬೆರಳು ತೋರಿಸಲು ಪ್ರಾರಂಭಿಸಿದ್ದೀರಿ. ನನ್ನವರೇ ನನ್ನ ವಿರುದ್ಧ ಟೀಕೆ ಮಾಡಿದ್ದಾರೆ. ಆದಿಪುರುಷ್ ಚಿತ್ರದ ಹಾಡುಗಳನ್ನೂ ನಾನೇ ಬರೆದಿದ್ದೇನೆ. ಆದರೆ ಯಾರೂ ಅದನ್ನು ಗಮನಿಸಲಿಲ್ಲ' ಎಂದು ಹೇಳಿದ್ದಾರೆ.
'ಇಷ್ಟೆಲ್ಲ ಆದರೂ ನನ್ನ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಯಾವುದೇ ಕೆಟ್ಟ ಭಾವನೆ ಇಲ್ಲ. ನಿಮ್ಮ ಭಾವನೆಗಳು ನನಗೆ ಮುಖ್ಯ. ಹೀಗಾಗಿ ಎಲ್ಲರ ಭಾವನೆಗಳಿಗೆ ನೋವುಂಟು ಮಾಡಿರುವ ಆ ಡೈಲಾಗ್‌ಗಳನ್ನು ಚಿತ್ರದಲ್ಲಿ ಪರಿಷ್ಕರಿಸಲು ನಾನು ಮತ್ತು ಚಿತ್ರದ ನಿರ್ಮಾಪಕರು ನಿರ್ಧರಿಸಿದ್ದೇವೆ. ಈ ವಾರ ಸರಿಪಡಿಸುತ್ತೇವೆ' ಎಂದು ಭರವಸೆ ನೀಡಿದ್ದಾರೆ.
ಆದಿಪುರುಷ್ ಸಿನಿಮಾ ಜೂನ್ 16 ರಂದು ಪಂಚಭಾಷೆಗಳಲ್ಲಿ ಪ್ರಪಂಚದಾದ್ಯಂತ 10,000 ಪರದೆಗಳಲ್ಲಿ ಬಿಡುಗಡೆ ಕಂಡಿತ್ತು. ತೆಲುಗು ನಟ ಪ್ರಭಾಸ್ ಮತ್ತು ಬಾಲಿವುಡ್ ನಟಿ ಕೃತಿ ಸನೋನ್ ಮುಖ್ಯಭೂಮಿಕೆಯಲ್ಲಿದ್ದಾರೆ.
ವಿಶ್ವಾದ್ಯಂತ ಸಿನಿಮಾದ ಬಾಕ್ಸ್ ಆಫೀಸ್ ಗಳಿಕೆ
- ಮೊದಲ ದಿನ 140 ಕೋಟಿ ರೂಪಾಯಿ
- 2ನೇ ದಿನ 100 ಕೋಟಿ ರೂಪಾಯಿ
- ಮೂರನೇ ದಿನ 85 ಕೋಟಿ ರೂಪಾಯಿ( ಇದು ನಿರೀಕ್ಷಿಸಿದ ಕಲೆಕ್ಷನ್)
ಇದನ್ನೂ ಓದಿ: Adipurush: 'ಆದಿಪುರುಷ'ನಿಗೆ ಭಾರಿ ಆಕ್ಷೇಪ; ವಿವಾದಿತ ಸಂಭಾಷಣೆ ಬದಲಿಸಲು ಚಿತ್ರತಂಡ ನಿರ್ಧಾರ