ದಾವಣಗೆರೆ: ಸ್ಯಾಂಡಲ್ವುಡ್ ಕ್ವೀನ್ ಎಂದೇ ಖ್ಯಾತಿ ಪಡೆದ, ನೂರಾರು ಸಿನಿಮಾಗಳಲ್ಲಿ ಮಿಂಚಿ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡಿದ್ದ ನಟಿ ರಮ್ಯಾ ದಿಢೀರ್ ದಾವಣಗೆರೆಯಲ್ಲಿ ಕಾಣಿಸಿಕೊಂಡಿದ್ದರು. ಹೆಡ್ ಬುಷ್ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸ್ಯಾಂಡಲ್ವುಡ್ ಮೋಹಕ ತಾರೆ ರಮ್ಯಾ ದಾವಣಗೆರೆಗೆ ಭೇಟಿ ನೀಡಿ ಬೆಣ್ಣೆ ದೋಸೆ ಸವಿದಿದ್ದಾರೆ.
ವಿವಿಧ ಸಿನಿಮಾಗಳಲ್ಲಿ ನಟಿಸಿ ಪಡ್ಡೆ ಯುವಕರ ನಿದ್ದೆ ಕೆಡಿಸಿದ್ದ ನಟಿ ರಮ್ಯಾ ದಾವಣಗೆರೆಯ ಡೆಂಟಲ್ ಕಾಲೇಜು ರಸ್ತೆಯಲ್ಲಿರುವ ಪ್ರಸಿದ್ಧ ಗುರು ಕೊಟ್ಟೂರೇಶ್ವರ ಬೆಣ್ಣೆದೋಸೆ ಹೋಟೆಲ್ನಲ್ಲಿ ಬೆಣ್ಣೆದೋಸೆ ಸವಿದರು. ಭಾನುವಾರ ದಾವಣಗೆರೆಯಲ್ಲಿ ನಡೆದ ನಟ ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದರು. ದಾವಣಗೆರೆಯ ಖಾಸಗಿ ಹೋಟೆಲ್ನಲ್ಲಿ ಉಳಿದುಕೊಂಡಿದ್ದ ರಮ್ಯಾ ಬೆಳಗಿನ ಉಪಹಾರ ಸೇವಿಸಲು ಅಭಿಮಾನಿಗಳ ಸಲಹೆಯಂತೆ ಕೊಟ್ಟೂರೇಶ್ವರ ಬೆಣ್ಣೆ ದೋಸೆ ಹೋಟೆಲ್ನಲ್ಲಿ ಗರಿಗರಿ ಬೆಣ್ಣೆ ದೋಸೆ ಸವಿದರು.
ರಮ್ಯಾ ಬಂದಿದ್ದಾರೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಇನ್ನೂ ಕೆಲ ಯುವಕರು, ಹಾಗು ಕ್ಯೂಟ್ ಹುಡುಗಿಯರೊಂದಿಗೆ ಸೆಲ್ಫಿಗೆ ಪೋಸ್ ನೀಡಿದ್ರು. ಕೆಲ ಅಭಿಮಾನಿಗಳು ಗುಂಪು ಗುಂಪಾಗಿ ಸೆಲ್ಫಿಗಾಗಿ ಮುಗಿಬಿದ್ದ ದೃಶ್ಯಗಳು ಕಂಡುಬಂದವು. ಕೆಲವರು ಹರಸಾಹಸ ಪಟ್ಟು ಸೆಲ್ಫಿಗೆ ಪ್ರಯತ್ನಿಸಿ ಸೆಲ್ಫಿ ಸಿಗದೆ ನಿರಾಸೆ ವ್ಯಕ್ತಪಡಿಸಿದರು.
ಎರಡು ಬೆಣ್ಣೆ ದೋಸೆ ಸವಿದು ಏನ್ ಅಂದ್ರು ಗೊತ್ತಾ ರಮ್ಯಾ: ದಾವಣಗೆರೆಯ ಬೆಣ್ಣೆ ದೋಸೆ ಸವಿದ ರಮ್ಯಾ ಸಂತಸ ವ್ಯಕ್ತಪಡಿಸಿದರು. ನಿನ್ನೆ ಹೆಡ್ ಬುಷ್ ಸಿನಿಮ ಪ್ರೀ ರಿಲೀಸ್ ವೇದಿಕೆಯಲ್ಲಿ ಹೇಳಿದ್ದೆ, ವೇದಿಕೆಯಲ್ಲೂ ಜನ ಗುರು ಕೊಟ್ಟೂರೇಶ್ವರ ಬೆಣ್ಣೆದೋಸೆ ಹೋಟೆಲ್ನಲ್ಲಿ ಬೆಣ್ಣೆ ದೋಸೆ ಸವಿಯಿರಿ ಎಂದಿದ್ದರು. ಅದರಂತೆ ಬೆಣ್ಣೆ ದೋಸೆ ಸವಿದಿದ್ದೇನೆ. ಬೆಣ್ಣೆದೋಸೆ ತುಂಬಾ ಟೇಸ್ಟಿಯಾಗಿದೆ. ಇಲ್ಲಿ ಹಳ್ಳಿ ಬೆಣ್ಣೆ ಬಳಕೆ ಮಾಡ್ತಾರೆ. ಬೆಣ್ಣೆ ದೋಸೆಯನ್ನು ಪಾರ್ಸಲ್ ತೊಗೊಂಡು ತಿಂದ್ರೆ ಅಷ್ಟು ಚೆನ್ನಾಗಿರೋಲ್ಲ, ಅದಕ್ಕೆ ಹೋಟೆಲ್ಗೆ ಬಂದು ಒಂದು ಬೆಣ್ಣೆ ದೋಸೆ ಇನ್ನೊಂದು ಖಾಲಿ ದೋಸೆ ಎರಡೂ ತಿಂದೆ. ತುಂಬಾ ರುಚಿಯಾಗಿದೆ ಎಂದು ನಟಿ ರಮ್ಯಾ ದಾವಣಗೆರೆ ಜನತೆಗೆ ಧನ್ಯವಾದ ತಿಳಿಸಿದರು.
ರಮ್ಯಾ ನೋಡಲು ಮುಗಿಬಿದ್ದ ಅಭಿಮಾನಿಗಳು, ಕಿಲೋಮೀಟರ್ಗಟ್ಟಲೆ ಟ್ರಾಫಿಕ್ ಜಾಮ್: ಗುರು ಕೊಟ್ಟೂರೇಶ್ವರ ಬೆಣ್ಣೆದೋಸೆ ಹೋಟೆಲ್ಗೆ ನಟಿ ರಮ್ಯಾ ಬಂದಿದ್ದಾರೆ ಎಂಬ ಸುದ್ದಿ ತಿಳಿದ ಅಭಿಮಾನಿಗಳು ಹೋಟೆಲ್ ಮುಂದೆ ಜಮಾಯಿಸಿದ್ದರಿಂದ ಕಿಲೋ ಮೀಟರ್ಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು. ಇದರಿಂದ ವಾಹನ ಸವಾರರಿಗೆ ಟ್ರಾಫಿಕ್ ಕಿರಿಕಿರಿ ಅನುಭವಿಸುವಂತಾಯಿತು. ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಲು ಸಂಚಾರಿ ಪೊಲೀಸರು ಹರಸಾಹಸ ಪಡುವಂತಾಯಿತು. ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ಭಾಗಿಯಾಗಿ ಅಪ್ಪು ಅಪ್ಪು ಎಂದು ಘೋಷಣೆ ಹಾಕಿದರು.
ಇದನ್ನೂ ಓದಿ: 16 ವರ್ಷಗಳ ಹಿಂದೆಯೇ ಮೂಡಿ ಬಂದಿತ್ತು ಕಾಂತಾರದ ವಾ ಪೊರ್ಲುಯ ಹಾಡು