'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ತಮ್ಮ ಮುಂದಿನ ಸಿನಿಮಾ 'ದಿ ವ್ಯಾಕ್ಸಿನ್ ವಾರ್'ನಲ್ಲಿ ನಿರತರಾಗಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಮತ್ತು ಅಗ್ನಿಹೋತ್ರಿ ಅವರ ಪತ್ನಿ ಪಲ್ಲವಿ ಜೋಶಿ ಈ ಚಿತ್ರ ನಿರ್ಮಿಸುವುದರ ಜೊತೆಗೆ ಒಂದು ಪ್ರಮುಖ ಪಾತ್ರದಲ್ಲೂ ನಟಿಸುತ್ತಿದ್ದಾರೆ. ಆದರೆ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಅವಘಡವೊಂದು ಸಂಭವಿಸಿದೆ. ಹೈದರಾಬಾದ್ನಲ್ಲಿ ನಡೆಯುತ್ತಿರುವ ಚಿತ್ರದ ಶೂಟಿಂಗ್ ವೇಳೆ ಪಲ್ಲವಿ ಜೋಶಿ ಗಾಯಗೊಂಡಿದ್ದಾರೆ.
ವಿವೇಕ್ ಅಗ್ನಿಹೋತ್ರಿಯವರ ಬಹುನಿರೀಕ್ಷಿತ ಸಿನಿಮಾ 'ದಿ ವ್ಯಾಕ್ಸಿನ್ ವಾರ್' ಚಿತ್ರೀಕರಣವನ್ನು ಲಖೌನ್ನಲ್ಲಿ ಮುಗಿಸಿ, ಚಿತ್ರತಂಡ ಮುಂದಿನ ಶೂಟಿಂಗ್ಗಾಗಿ ಹೈದರಾಬಾದ್ಗೆ ಆಗಮಿಸಿತ್ತು. ಚಿತ್ರೀಕರಣ ನಡೆಯುವಾಗ ಪಲ್ಲವಿ ಜೋಶಿ ಅವರಿಗೆ ವಾಹನವೊಂದು ಡಿಕ್ಕಿ ಹೊಡೆದಿದ್ದು, ಗಾಯಗೊಂಡಿದ್ದರು. ಆದರೆ ಚಿತ್ರೀಕರಣವನ್ನು ನಿಲ್ಲಿಸದ ಅವರು, ಸಂಪೂರ್ಣ ಶೂಟಿಂಗ್ ಮುಗಿದ ಬಳಿಕ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈಗ ಅವರು ಆರೋಗ್ಯದಿಂದ ಇರುವುದಾಗಿ ಚಿತ್ರತಂಡದ ಮೂಲಗಳು ತಿಳಿಸಿವೆ.
'ದಿ ವ್ಯಾಕ್ಸಿನ್ ವಾರ್' ಸಿನಿಮಾ ವಿಶೇಷತೆ: 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಅತೀ ಹೆಚ್ಚು ಜನಪ್ರಿಯತೆ ಗಳಿಸಿತ್ತು. ಈ ಚಿತ್ರದಿಂದಾಗಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತು ನಿರ್ಮಾಪಕಿ, ನಟಿ ಪಲ್ಲವಿ ಜೋಶಿ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತ್ತು. ಇದೀಗ ಈ ಜೋಡಿ 'ದಿ ವ್ಯಾಕ್ಸಿನ್ ವಾರ್' ಪ್ರಾಜೆಕ್ಟ್ ಕೈಗೆತ್ತಿಕೊಂಡಿದೆ. ಕೊರೊನಾ ವ್ಯಾಕ್ಸಿನ್ ಕುರಿತಾದ ಸಿನಿಮಾ ಇದಾಗಿದ್ದು, ನೈಜ ಘಟನೆಗಳನ್ನು ಆಧರಿಸಿ ಚಿತ್ರ ತಯಾರಾಗುತ್ತಿದೆ. ಜೊತೆಗೆ ಭಾರತೀಯ ವಿಜ್ಞಾನಿಗಳ ಕಥೆಯಾಧಾರಿತವಾಗಿದೆ. ಪ್ರತಿಯೊಬ್ಬ ಭಾರತೀಯ ತನ್ನ ದೇಶವನ್ನು ಹೆಮ್ಮೆ ಪಡುವಂತಹ ಕಥೆಯನ್ನು ಈ ಬಾರಿ ನಿರ್ದೇಶಕರು ನೀಡಲಿದ್ದಾರಂತೆ. ಈ ಸಿನಿಮಾವು ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಮರಾಠಿ ಸೇರಿದಂತೆ ಒಟ್ಟು 11 ಭಾಷೆಗಳಲ್ಲಿ ಆಗಸ್ಟ್ 15 ರಂದು ತೆರೆ ಕಾಣಲಿದೆ.
ವ್ಯಾಕ್ಸಿನ್ ವಾರ್ನಲ್ಲಿ ಸಪ್ತಮಿ ಗೌಡ: ಸೂಪರ್ ಹಿಟ್ 'ಕಾಂತಾರ' ಸಿನಿಮಾದಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದ ಸಪ್ತಮಿ ಗೌಡ ಇದೀಗ 'ದಿ ವ್ಯಾಕ್ಸಿನ್ ವಾರ್' ಚಿತ್ರದ ಮೂಲಕ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಈ ಚಿತ್ರದಲ್ಲಿ ಸಪ್ತಮಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೆ, ಹೈದರಾಬಾದ್ನಲ್ಲಿ ನಡೆಯುತ್ತಿರುವ ಶೂಟಿಂಗ್ನಲ್ಲಿ ಅವರು ಕೂಡ ಭಾಗಿಯಾಗಿದ್ದಾರೆ.
'ದಿ ಕಾಶ್ಮೀರ್ ಫೈಲ್ಸ್' ಹಿಟ್: 90 ರ ದಶಕದಲ್ಲಿ ಕಾಶ್ಮೀರದಲ್ಲಿ ಪಾಕ್ ಬೆಂಬಲಿತ ಮುಸ್ಲಿಂ ಮೂಲಭೂತವಾದಿಗಳಿಂದ ನಡೆದ ಬ್ರಾಹ್ಮಣ ಪಂಡಿತರ ನರಮೇಧದ ಕುರಿತು ಚಿತ್ರಿಸಲಾದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಭಾರಿ ಹಿಟ್ ಕಂಡಿತ್ತು. ಕಡಿಮೆ ಬಜೆಟ್ನಲ್ಲಿ ತಯಾರಾದ ಈ ಚಿತ್ರ 340 ಕೋಟಿ ರೂ.ಗಿಂತಲೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ ಮತ್ತು ಪುನೀತ್ ಇಸ್ಸಾರ್ ಸೇರಿದಂತೆ ಅನೇಕ ಸೂಪರ್ಸ್ಟಾರ್ಗಳು ಸಿನಿಮಾದಲ್ಲಿ ನಟಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯ ವ್ಯಕ್ತಿಗಳು ಈ ಚಿತ್ರವನ್ನು ಮೆಚ್ಚಿಕೊಂಡಿದ್ದರು.
ಇದನ್ನೂ ಓದಿ: ಬಾಲಿವುಡ್ಗೆ ಕಾಲಿಟ್ಟ 'ಕಾಂತಾರ' ನಟಿ: ದಿ ವ್ಯಾಕ್ಸಿನ್ ವಾರ್ ಚಿತ್ರದಲ್ಲಿ ಸಪ್ತಮಿ ಗೌಡ