ಹೈದರಾಬಾದ್: ಇಸ್ರೇಲ್- ಹಮಾಸ್ ನಡುವಿನ ಯುದ್ಧಭೂಮಿಯಿಂದ ಬಾಲಿವುಡ್ ನಟಿ ನುಸ್ರುತ್ ಬರುಚ್ಛಾ ಕ್ಷೇಮವಾಗಿ ಭಾರತಕ್ಕೆ ಮರಳಿದ್ದಾರೆ. ಆದರೆ, 'ನಾಗಿನ್', 'ಪ್ಯಾರ್ ಕೀ ಯೇ ಎಕ್ ಕಹಾನಿ' ಧಾರಾವಾಹಿಗಳಲ್ಲಿ ನಟಿಸಿದ್ದ ನಟಿ ಮತ್ತು ಮಾಡೆಲ್ ಆಗಿರುವ ಮಧುರಾ ನಾಯ್ಕ್ ಯುದ್ಧದ ಆಘಾತಕ್ಕೆ ಒಳಗಾಗಿದ್ದಾರೆ.
ಉಗ್ರರ ದಾಳಿಯಲ್ಲಿ ಮಧುರಾ ತಮ್ಮ ಸಹೋದರ ಸಂಬಂಧಿ ಮತ್ತು ಗಂಡನನ್ನು ಕಳೆದುಕೊಂಡಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿರುವ ಅವರು, ಈ ದಾಳಿಯ ಕುರಿತು ಮಾಹಿತಿ ಹಂಚಿಕೊಂಡಿದ್ದು, ಅಕ್ಟೋಬರ್ 7ರಂದು ಮಕ್ಕಳ ಎದುರಿಗೆ ಇಬ್ಬರು ಪ್ರಾಣ ಕಳೆದುಕೊಂಡರು ಎಂಬ ಸುದ್ದಿ ಹಂಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಮಧುರಾ ನಾಯ್ಕ್ ವಿಡಿಯೋವನ್ನು ಹಂಚಿಕೊಂಡಿದ್ದು, ಇಸ್ರೇಲ್ನಲ್ಲಿ ಹಮಾಸ್ ದಾಳಿಯ ಭೀಕರತೆಯನ್ನು ತೋರಿಸಿದ್ದಾರೆ. ಇಸ್ರೇಲ್ ಗಡಿ ಪ್ರದೇಶದಲ್ಲಿ ಹಾಡು ಹಗಲೆ ಮಹಿಳೆ, ಮಕ್ಕಳು ಮತ್ತು ವೃದ್ಧರನ್ನು ಹಮಾಸ್ ಉಗ್ರರು ದಾಳಿ ನಡೆಸಿ, ಕೊಂದಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದ ಆರಂಭದಲ್ಲಿ ಮಧುರಾ ತಮ್ಮ ಪರಿಚಯ ಮಾಡಿಕೊಂಡಿದ್ದು, ಅಲ್ಲಿ ನಡೆಯುತ್ತಿರುವ ಘಟನೆಯಿಂದ ನಮ್ಮ ಕುಟುಂಬ ಸಾಕಷ್ಟು ನೋವು ಅನುಭವಿಸುವಂತೆ ಆಗಿದೆ ಎಂದಿದ್ದಾರೆ.
"ನಾನು ಮಧುರಾ ನಾಯ್ಕ್, ಭಾರತೀಯ ಮೂಲದ ಯಹೂದಿ ಆಗಿದ್ದೇನೆ. ಭಾರತದಲ್ಲಿ ನಮ್ಮ ಜನಸಂಖ್ಯೆ ಬಲ ಕೇವಲ 3,000 ಆಗಿದೆ. ಅಕ್ಟೋಬರ್ 7ರಂದು ನಾವು ನಮ್ಮ ಕುಟುಂಬದಿಂದ ಮಗಳು ಮತ್ತು ಮಗನನ್ನು ಕಳೆದುಕೊಂಡಿದ್ದೇವೆ. ನನ್ನ ಕಸಿನ್ ಒಡೆಯ ಮತ್ತು ಆಕೆಯ ಗಂಡನನ್ನು ಅವರು ಮಕ್ಕಳ ಕಣ್ಣೇದುರಿನಲ್ಲೆ ಹತ್ಯೆ ಮಾಡಲಾಗಿದೆ. ಇಂದು ನಾನು ನನ್ನ ಕುಟುಂಬ ಅನುಭವಿಸುತ್ತಿರುವ ದುಃಖವನ್ನು ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲ" ಎಂದಿದ್ದಾರೆ.
ಮುಂದುವರೆದು ಮಾತನಾಡಿರುವ ಅವರು "ಇಂದು ಇಸ್ರೇಲ್ ನೋವಿನಲ್ಲಿದೆ. ಆಕೆಯ ಮಕ್ಕಳು, ಅಲ್ಲಿನ ರಸ್ತೆಗಳು ಹಮಾಸ್ಗಳು ಹಚ್ಚಿದ ಬೆಂಕಿಯ ಜ್ವಾಲೆಯಿಂದ ಸುಡುತ್ತಿದೆ. ಮಹಿಳೆ, ಮಕ್ಕಳು, ವೃದ್ಧರು ಮತ್ತು ದುರ್ಬಲರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ನಿನ್ನೆಯಷ್ಟೇ ನಮ್ಮ ದುಃಖವನ್ನು ಜಗತ್ತು ನೋಡಲಿ ಎಂದು ನನ್ನ ಸಹೋದರಿ ಮತ್ತು ಕುಟುಂಬದ ಫೋಟೋವನ್ನು ಹಂಚಿಕೊಂಡಿದ್ದೆ. ಪ್ರೊ ಪ್ಯಾಲೆಸ್ತೇನಿಯನ್ ಅರಬ್ಗಳ ಪ್ರಚಾರ ಹೇಗೆ ನಡೆಯುತ್ತಿದೆ ಎಂದು ಕಂಡು ಆಘಾತಕ್ಕೆ ಒಳಗಾಗಿದ್ದೇನೆ".
"ಇಂದು ನಾನು ನನ್ನ ಭಾವನೆಗಳಿಗೆ ಧ್ವನಿಯಾಗಬೇಕಿದೆ. ನನ್ನ ಬೆಂಬಲಿಗರಿಗೆ, ಸ್ನೇಹಿತರಿಗೆ, ನನ್ನ ಪ್ರೀತಿ ಮಾಡುವ ಜನರಿಗೆ ನಾನು ಬೆಂಬಲಿಸಬೇಕಿದೆ. ಇಷ್ಟು ವರ್ಷಗಳ ಕಾಲ ನನ್ನನ್ನು ಪ್ರೀತಿಸಿ, ಶ್ಲಾಘಿಸಿದ್ದಕ್ಕೆ ಧನ್ಯವಾದ ಹೇಳಬೇಕಿದೆ ಎಂದಿದ್ದು, ತಾವು ಯಾವುದೇ ರೀತಿಯ ಹಿಂಸೆಯನ್ನು ಬೆಂಬಲಿಸುವುದಿಲ್ಲ" ಎಂದಿದ್ದಾರೆ.
ಇದನ್ನೂ ಓದಿ: ಹಮಾಸ್ - ಇಸ್ರೇಲ್ ಕಾಳಗ: 2100 ಕ್ಕೂ ಹೆಚ್ಚು ಸಾವು -ನೋವು.. ಗಾಜಾಪಟ್ಟಿಯಿಂದ ವಲಸೆ ಶುರು