ದೊಡ್ಡಬಳ್ಳಾಪುರ (ಬೆಂಗಳೂರು): ಕನ್ನಡ ಸಿನಿಮಾ ಇಂಡಸ್ಟ್ರಿ ಕಂಡ ಖ್ಯಾತ ನಟಿ ಅಮೂಲ್ಯ ಈಗ ತಮ್ಮ ಅವಳಿ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ನಾಗದೋಷ ಸರ್ಪಸಂಸ್ಕಾರ ಸೇರಿದಂತೆ ಹಲವು ದೋಷಗಳಿಗೆ ಹೆಸರುವಾಸಿಯಾಗಿರುವ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯಕ್ಕೆ ನಟಿ ಅಮೂಲ್ಯ ಅವರು ಪತಿ, ತಾಯಿ ಮತ್ತು ತಮ್ಮ ಅವಳಿ ಮಕ್ಕಳ ಸಮೇತ ಆಗಮಿಸಿ ವಿಶೇಷ ಪೂಜೆ ಮಾಡಿಸಿದ್ದಾರೆ.
ಸುಬ್ರಹ್ಮಣ್ಯ ಸ್ವಾಮಿಗೆ ಪೂಜೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡ ಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸೋಮವಾರ ಸಂಜೆ ಆಗಮಿಸಿದ್ದ ನಟಿ ಅಮೂಲ್ಯ ಹಾಗೂ ಕುಟುಂಬಸ್ಥರು ಕೆಲ ಕಾಲ ದೇವಾಲಯದ ಆವರಣದಲ್ಲಿ ಕುಳಿತು ದೇವರ ದರ್ಶನ ಪಡೆದುಕೊಂಡು ನಂತರ ವಾಪಸ್ ಆಗಿದ್ದಾರೆ. ಬೆಂಗಳೂರಿನಿಂದ ಕೂಗಳತೆ ದೂರದಲ್ಲಿ ಘಾಟಿ ಸುಬ್ರಹ್ಮಣ್ಯ ದೇವಾಲಯ ಇರುವ ಕಾರಣ ಕುಕ್ಕೆಗೆ ಹೋಗಲಾಗದ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆದು ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸುವುದುಂಟು.
ಸಾಕಷ್ಟು ನಟ ನಟಿಯರು, ರಾಜಕೀಯ ನಾಯಕರು, ಗಣ್ಯ ವ್ಯಕ್ತಿಗಳು ಸಹ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಅದೇ ರೀತಿ ದೇವಾಲಯಕ್ಕೆ ನಟಿ ಅಮೂಲ್ಯ ಕುಟುಂಬಸ್ಥರು ಆಗಮಿಸಿದ್ದು, ಕೆಲ ಭಕ್ತರು ಮತ್ತು ದೇವಾಲಯದ ಆಡಳಿತ ಮಂಡಳಿಯ ಸದಸ್ಯರು ನಟಿಯ ಜೊತೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ.
ನಟಿ ಅಮೂಲ್ಯ ವೃತ್ತಿ ಜೀವನ: ನಟಿ ಅಮೂಲ್ಯ ಬಾಲ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ಚೆಲುವಿನ ಚಿತ್ತಾರ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕ ನಟಿಯಾಗಿ ಸ್ಯಾಂಡಲ್ವುಡ್ ಪ್ರವೇಶಿಸುತ್ತಾರೆ. ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಅಮೂಲ್ಯ ತೆರೆ ಹಂಚಿಕೊಂಡ ಚೆಲುವಿನ ಚಿತ್ತಾರ ಚಿತ್ರ ಸೂಪರ್ ಹಿಟ್ ಆಗಿ ಅಮೂಲ್ಯ ಅವರಿಗೆ ದೊಡ್ಡ ಮಟ್ಟದ ಹೆಸರು ತಂದು ಕೊಟ್ಟಿತು. ನಂತರ ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತೆ ಅವರ ಸಿನಿಮಾಗಳು ಯಶಸ್ಸು ಕಂಡವು. ಸ್ಟಾರ್ ನಟರ ಜೊತೆ ಅಭಿನಯಿಸುವ ಅವಕಾಶ ಪಡೆದುಕೊಂಡರು.
ಇದನ್ನೂ ಓದಿ: ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಗಾಲಿ ಜನಾರ್ದನ ರೆಡ್ಡಿ ದಂಪತಿ ಭೇಟಿ
ಶ್ರಾವಣಿ ಸುಬ್ರಹ್ಮಣ್ಯ ಚಿತ್ರದಲ್ಲಿನ ಅವರ ಅಭಿನಯಕ್ಕೆ ಫಿಲ್ಮ್ಫೇರ್ ಪ್ರಶಸ್ತಿ ಕೂಡ ಒಲಿದಿದೆ. ಈ ಸಿನಿಮಾ ಮಾತ್ರವಲ್ಲದೇ ಚೈತ್ರದ ಚಂದ್ರಮ, ಪ್ರೇಮಿಸಂ, ನಾನು ನನ್ನ ಕನಸು, ಮನಸೋಲಾಜಿ, ಗಜಕೇಸರಿ, ಖುಷಿ ಖುಷಿಯಾಗಿ, ಮಳೆ ಸೇರಿ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ ನಟಿ ಅಮೂಲ್ಯ. 2017ರಲ್ಲಿ ತೆರೆ ಕಂಡ ಮುಗುಳು ನಗೆ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ ಬಳಿಕ ಅಮೂಲ್ಯ ಅವರು ಬೇರೆ ಯಾವುದೇ ಸಿನಿಮಾದಲ್ಲೂ ನಟಿಸಿಲ್ಲ. ವಿವಾಹದ ಬಳಿಕ ಸಿನಿಮಾಗಳಿಂದ ದೂರ ಉಳಿದಿರುವ ನಟಿ ಅಮೂಲ್ಯ ಅವರನ್ನು ಮತ್ತೆ ತೆರೆ ಮೇಲೆ ನೋಡಬೇಕೆಂಬುದು ಅಭಿಮಾನಿಗಳ ಆಸೆ.
ದೇವಸ್ಥಾನಕ್ಕೆ ಗಾಲಿ ಜನಾರ್ದನ ರೆಡ್ಡಿ ದಂಪತಿ ಭೇಟಿ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ದಂಪತಿ ಕೂಡ ಇಂದು ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ. ಬೆಳಗ್ಗೆ ಮಡದಿ ಅರುಣಾ ಲಕ್ಷ್ಮೀ ಅವರೊಂದಿಗೆ ದೇವಾಲಯಕ್ಕೆ ಆಗಮಿಸಿದ ಗಾಲಿ ಜನಾರ್ದನ ರೆಡ್ಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು.
ಇದನ್ನೂ ಓದಿ: ಪಠಾಣ್ ಬಿಡುಗಡೆಗೆ ಕ್ಷಣಗಣನೆ: ಕೆಜಿಎಫ್ ದಾಖಲೆ ಮುರಿಯಲಿದೆಯಾ ಶಾರುಖ್ ಸಿನಿಮಾ?!