ನಟ ಯಶ್ ಅವರ ಕೆಜಿಎಫ್ 2 ಗಲ್ಲಾಪೆಟ್ಟಿಗೆಯಲ್ಲಿನ ದಾಖಲೆಗಳನ್ನು ಮುರಿದು 2022ರ ಸೂಪರ್ ಹಿಟ್ ಸಿನಿಮಾ ಆಗಿ ಹೊರಹೊಮ್ಮಿದೆ. ಹಾಗಾದರೆ, ರಾಕಿಂಗ್ ಸ್ಟಾರ್ ಮುಂದಿನ ನಡೆ ಏನು? ಕೆಜಿಎಫ್ 3 ಬರಲಿದೆಯಾ? ಯಾವ ನಿರ್ದೇಶಕ, ನಿರ್ಮಾಪಕರ ಜೊತೆ ಅವರು ಕೈ ಜೋಡಿಸಿದ್ದಾರೆ? ಯಾವ ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ? ಹೀಗೆ ಹತ್ತು ಹಲವು ಪ್ರಶ್ನೆಗಳು ಅಭಿಮಾನಿಗಳಲ್ಲಿದೆ. ಇತ್ತೀಚೆಗೆ, ತಾನು ಹೆಚ್ಚಿನದನ್ನು ಸಾಧಿಸುವ ಹಂಬಲದಲ್ಲಿದ್ದೇನೆ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು.
ಕೆಜಿಎಫ್ ಯಶಸ್ಸಿನ ಬಳಿಕ, ನೀವು ಈಗೇನು ಮಾಡುತ್ತಿದ್ದೀರಿ, ನೀವು ಏನು ಮಾಡಬಹುದು? ಎಂದು ಜನರು ನನ್ನಲ್ಲಿ ಕೇಳುತ್ತಾರೆ. ನಿಮಗೆ ಏನನ್ನಿಸುತ್ತದೆ ಎಂದು ನಾನು ಮರು ಪ್ರಶ್ನಿಸುತ್ತೇನೆ. ಕೆಜಿಎಫ್ ಯಶಸ್ಸೇ ಅಂತಿಮವೇ. ಬಹುಶಃ ಇದು ನಿಮಗಾಗಿರಬಹುದು. ಆದರೆ ನಾನು ಇನ್ನೂ ಹೋರಾಡುವ ಮನಸ್ಸಿನಲ್ಲಿದ್ದೇನೆ ಎಂದು ಹೇಳುತ್ತೇನೆ. ನನಗೆ ಸಾಧಿಸುವ ಹಸಿವಿದೆ, ಹೋರಾಟದ ಮನೋಭಾವವಿದೆ ಎಂದು ಅವರು ತಿಳಿಸಿದರು.
'ನಾನು ಈ ಯಶಸ್ಸನ್ನು ಮಾಡಬೇಕು, ನನ್ನನ್ನು ಯಾವುದಾದರೊಂದು ಕ್ಷೇತ್ರದಲ್ಲಿ ಸ್ಥಾಪಿಸಿಕೊಳ್ಳಬೇಕು, ಬಳಿಕ ವಿಶ್ರಾಂತಿ ಪಡೆಯಬೇಕು ಎಂದು ಹೇಳುವ ವ್ಯಕ್ತಿಯಲ್ಲ. ಬದಲಾಗಿ, ನಾನು ಹೆಚ್ಚಿನದನ್ನು ಗೆಲ್ಲಲು ಚಡಪಡಿಸುವ ವ್ಯಕ್ತಿ. ನನಗೆ ಉತ್ಸಾಹವನ್ನು ನೀಡುವ ಯಾವುದನ್ನಾದರೂ ನಾನು ಮಾಡಿಯೇ ಮಾಡುತ್ತೇನೆ. ನಾನು ಹೋರಾಡುತ್ತಾ ಸತ್ತರೂ ಪರವಾಗಿಲ್ಲ, ಹೋರಾಡುತ್ತೇನೆ' ಎಂದು ಯಶ್ ಹೇಳಿದರು.
ಇದನ್ನೂ ಓದಿ: ವೇದ ರಿಲೀಸ್: ಕರುನಾಡ ಚಕ್ರವರ್ತಿಯ ಹೊಸ ಅವತಾರ ಮೆಚ್ಚಿದ ಅಭಿಮಾನಿಗಳು