ಹೆಡ್ ಬುಷ್ ಸಿನಿಮಾ ಬಳಿಕ ಬರುತ್ತಿರುವ ಡಾಲಿ ಧನಂಜಯ್ ಅಭಿನಯದ ವಿಭಿನ್ನ ಕಥೆಯುಳ್ಳ ಸಿನಿಮಾ ''ಒನ್ಸ್ ಅಪಾನ್ ಎ ಟೈಮ್ ಜಮಾಲಿ ಗುಡ್ಡ''. ಡಾಲಿ ಉದ್ದ ಕೂದಲು ಬಿಟ್ಟುಕೊಂಡು ಬಾರ್ ಸಪ್ಲೈಯರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರ ಈ ವರ್ಷದ ಎಂಡ್ನಲ್ಲಿ ಪ್ರೇಕ್ಷಕರಿಗೆ ದರ್ಶನ ಕೊಡಲಿದೆ.
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳಿಂದ ಬೇಡಿಕೆ ಹೊಂದಿರುವ ಯಶ್ ಶೆಟ್ಟಿ ಒನ್ಸ್ ಅಪಾನ್ ಎ ಟೈಮ್ ಜಮಾಲಿ ಗುಡ್ಡ ಸಿನಿಮಾದಲ್ಲಿ ವಿಚಿತ್ರ ಹೆಸರಿನ ಪಾತ್ರವೊಂದನ್ನು ಮಾಡಿದ್ದಾರೆ. ಆ ಪಾತ್ರದ ಬಗ್ಗೆ ಯಶ್ ಶೆಟ್ಟಿ ಈ ಟಿವಿ ಭಾರತ ಜೊತೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಒಬ್ಬ ನಟನಿಗೆ ಸಿನಿಮಾ ಜೊತೆ ಅವರ ಪಾತ್ರದ ಹೆಸರುಗಳು ಕೂಡಾ ಆ ನಟನ ಅದೃಷ್ಟ ಬದಲಾಯಿಸುತ್ತದೆ. ಆ ಸಾಲಿನಲ್ಲಿ ಡಾಲಿ, ಚಿಟ್ಟೆ ಹೆಸರುಗಳು ಧನಂಜಯ್ ಹಾಗೂ ವಸಿಷ್ಠ ಸಿಂಹರಿಗೆ ಹೆಸರು ತಂದುಕೊಟ್ಟಿದೆ. ಇಂಥಹುದ್ದೇ ಪಾತ್ರದಲ್ಲಿ ಯಶ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಆ ಪಾತ್ರದ ಹೆಸರು ''ನಾಗಸಾಕಿ''.
ಅವರ ಎಡ ಕಣ್ಣನ್ನು ನೋಡಿದರೆ ಭಯ ಆಗುತ್ತೆ, ಅಂತಹ ಪಾತ್ರದಲ್ಲಿ ಯಶ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಧನಂಜಯ್ ಜೊತೆ ಯಶ್ ಶೆಟ್ಟಿ ಫೈಟ್ ಮಾಡುವ ಸನ್ನಿವೇಶಗಳನ್ನು ಚಿತ್ರ ಒಳಗೊಂಡಿದೆ. ನನ್ನನ್ನು ನೋಡಿದ್ರೆ ಎಂಥವರೂ ಭಯ ಪಡಬೇಕು ಎನ್ನುವ ಹಾಗೆ ಸಿದ್ದು ಅವರು ಮೇಕಪ್ ಮಾಡಿದ್ದಾರೆ ಎಂದರು.
ಇನ್ನು ಈ ಪಾತ್ರಕ್ಕೆ ನಾನು ತುಂಬಾನೇ ಸಿದ್ಧತೆ ಮಾಡಿಕೊಂಡಿದ್ದೆ. ನನ್ನ ಪಾತ್ರ ಡಾಲಿ ಜೊತೆ ಸಾಗುತ್ತದೆ. ಈ ಚಿತ್ರದಲ್ಲಿ ಪ್ರೀತಿ, ಫ್ಯಾಮಿಲಿ ಸಂಟಿಮೆಂಟ್, ಫೈಟ್, ಗೆಳತನದಲ್ಲಿ ಮೋಸ ಎಲ್ಲವೂ ಇದೆ. ಹೀಗೆ ಒಂದು ಕಮರ್ಷಿಯಲ್ ಸಿನಿಮಾಗೆ ಬೇಕಾಗುವ ಕಥೆ ಇದೆ ಅಂತಾರೆ ಯಶ್ ಶೆಟ್ಟಿ.
ಡಾಲಿ ಸರ್ ಜೊತೆ ನಟನೆ ಮಾಡಿದ್ದು, ನನಗೆ ತುಂಬಾನೇ ಖುಷಿ ಕೊಡ್ತು. ಇನ್ನು ನನ್ನ ಕಣ್ಣುಗಳಿಗೆ ಲೆನ್ಸ್ ಹಾಕಿ ಅಭಿನಯ ಮಾಡಿದ್ದೇನೆ. ಜೊತೆಗೆ ಈ ಪಾತ್ರ ನನಗೆ ಚಾಲೆಂಜಿಂಗ್ ಆಗಿತ್ತು. ಅದು ನನಗೆ ಇಷ್ಟ ಆಯಿತು. ಇನ್ನು ನನಗೆ ನನ್ನ ಮೇಕಪ್ ನೋಡಿಕೊಂಡಾಗ ಭಯ ಆಗಿತ್ತು ಎಂದು ತಿಳಿಸಿದರು.
ಈ ಚಿತ್ರದಲ್ಲಿ ಪ್ರಾಣ್ಯ ಎಂಬ ಹುಡುಗಿ ವಿಭಿನ್ನ ಪಾತ್ರ ಮಾಡಿದ್ದಾಳೆ. ಆ ಪ್ರಾಣ್ಯನನ್ನು ನೋಡಿ ನಾನು ಸಾಕಷ್ಟು ಕಲಿತ್ತಿದ್ದೇನೆ. ಆ ಹುಡುಗಿಗೆ ತುಂಬಾನೇ ಜ್ವರ ಇದ್ದರೂ ಕೂಡ ಕಷ್ಟ ಪಟ್ಟು ಬಹಳ ಉತ್ತಮವಾಗಿ ನಟಿಸಿದ್ದಾಳೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನೂ ನನಗೆ ರಿಯಲ್ ಆಗಿ ಸಿಗರೇಟ್ ಸೇದಲು ಬರೋಲ್ಲ. ಸಲಗ ಸಿನಿಮಾದಲ್ಲಿ ಫೇಕ್ ಮಾಡಿದ್ದಾರೆ ಅಂತಾ ಹೇಳಿದ್ದರು. ಅದಕ್ಕೆ ಈ ಸಿನಿಮಾದಲ್ಲಿ ರಿಯಲ್ ಆಗಿ ಸಿಗರೇಟ್ ಸೇದಿದ್ದೇನೆ ಅಂತಾ ತಿಳಿಸಿದರು. ಈ ಸಿನಿಮಾ ಒಪ್ಪಿಕೊಳ್ಳೋದಕ್ಕೆ ಕಾರಣ ಈ ಚಿತ್ರದ ಕಥೆ. ಈ ಸಿನಿಮಾ ನೋಡುಗರನ್ನು ನಗಿಸುತ್ತೆ, ಅಳಿಸುತ್ತೆ. ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಒನ್ಸ್ ಅಪಾನ್ ಎ ಟೈಮ್ ಜಮಾಲಿ ಗುಡ್ಡ ಚಿತ್ರ ಇಷ್ಟ ಆಗುತ್ತೆ ಅನ್ನೋ ವಿಶ್ವಾಸ ಇದೆ ಎಂದರು.
ಇದನ್ನೂ ಓದಿ: ರಿಷಬ್ ಬಗ್ಗೆ 'ಅಸೂಯೆ' ವ್ಯಕ್ತಪಡಿಸಿದ ನವಾಜುದ್ದೀನ್ ಸಿದ್ದಿಕಿ: ಶೆಟ್ರು ಹೇಳಿದ್ದೇನು?
90ರ ದಶಕದಲ್ಲಿ ನಡೆಯುವ ಕಥೆ ಇದು. ಬಾರ್ ಸಪ್ಲೈಯರ್ ಪಾತ್ರದಲ್ಲಿ ಡಾಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಿತಿ ಪ್ರಭುದೇವ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಕಾಶ್ ಬೆಳವಾಡಿ, ಭಾವನ ರಾಮಣ್ಣ ಕಾಮಿಡಿ ಕಿಲಾಡಿಗಳು ಸಂತು, ತ್ರಿವೇಣಿ, ಪ್ರಾಣ್ಯ, ನಂದ ಗೋಪಾಲ್ ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ.
ಈ ಹಿಂದೆ ಕನ್ನಡಕ್ಕಾಗಿ ಒಂದನ್ನು ಒತ್ತಿ ಎಂಬ ಸಿನಿಮಾ ನಿರ್ದೇಶನ ಮಾಡಿ ಸೈ ಎನ್ನಿಸಿಕೊಂಡಿದ್ದ ಕುಶಾಲ್ ಗೌಡ ಅವರು ಜಮಾಲಿ ಗುಡ್ಡ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದೇ ತಿಂಗಳು 30ರಂದು ಒನ್ಸ್ ಅಪಾನ್ ಎ ಟೈಮ್ ಜಮಾಲಿ ಚಿತ್ರ ತೆರೆಗೆ ಬರಲಿದೆ.