ಅಭಿನಯಿಸಿದ ಮೊದಲ ಸಿನಿಮಾದಲ್ಲಿ ಸಕ್ಸಸ್ ಕಂಡು, ಚೊಚ್ಚಲ ಚಿತ್ರದಲ್ಲೇ ದೊಡ್ಡ ಅಭಿಮಾನಿ ಬಳಗ ಹೊಂದಿದ ನಟ ಡಾ. ವಿಷ್ಣುವರ್ಧನ್. ಸಾಹಸಿ ಸಿಂಹ, ವಿಷ್ಣು ದಾದ, ಹೃದಯವಂತ, ಕೋಟಿಗೊಬ್ಬ ಹೀಗೆ ಹಲವಾರು ಹೆಸರುಗಳಿಂದ ಕರೆಯಿಸಿಕೊಳ್ಳುವ ವಿಷ್ಣುವರ್ಧನ್ ದಕ್ಷಿಣ ಭಾರತ ಕಂಡ ಅತ್ಯುತ್ತಮ ನಟ. ಇದೇ ಸೆಪ್ಟಂಬರ್ 18ರಂದು ವಿಷ್ಣುವರ್ಧನ್ ಅವರ 72ನೇ ಜಯಂತೋತ್ಸವ ಆಚರಣೆಗೆ ಅಭಿಮಾನಿಗಳು ಸಜ್ಜಾಗುತ್ತಿದ್ದಾರೆ.
ಸೆಪ್ಟೆಂಬರ್ 18ರಂದು ವಿಷ್ಣುವರ್ಧನ್ ಹುಟ್ಟುಹಬ್ಬ ಹಿನ್ನೆಲೆ ಅರ್ಥಪೂರ್ಣ ಕಾರ್ಯಕ್ರಮಗಳು ನಡೆಯಲಿವೆ. ಅದೇ ರೀತಿ ಬರುವ ಡಿಸೆಂಬರ್ 29ಕ್ಕೆ ವಿಷ್ಣು ಚಿತ್ರರಂಗಕ್ಕೆ ಬಂದು 50 ವರ್ಷಗಳು ಪೂರೈಸಲಿವೆ. ಈ ಹಿನ್ನೆಲೆಯಲ್ಲಿ ವಿಷ್ಣುಸೇನಾ ಸಮಿತಿ ವಿಷ್ಣು ಪುಣ್ಯಭೂಮಿಯಲ್ಲಿ ಅವರ ಪ್ರಮುಖ ಸಿನಿಮಾಗಳ ಐವತ್ತು ಕಟೌಟ್ ನಿಲ್ಲಿಸಿ ದಾಖಲೆ ಬರೆಯಲು ಸಜ್ಜಾಗಿದೆ.
ವಿಷ್ಣುಸೇನಾ ಸಮಿತಿ ಸದಸ್ಯ ಆನಂದ್ ಮಾತನಾಡಿ, ಡಿಸೆಂಬರ್ 29ಕ್ಕೆ ವಿಷ್ಣುವರ್ಧನ್ ಅವರು ಚಿತ್ರರಂಗಕ್ಕೆ ಬಂದು 50 ವರ್ಷಗಳು ಕಂಪ್ಲೀಟ್ ಆಗುತ್ತದೆ. ಈ ವಿಶೇಷ ಇಟ್ಟುಕೊಂಡು ವಿಷ್ಣು ಪುಣ್ಯಭೂಮಿಯಲ್ಲಿ ವಿಷ್ಣುವರ್ಧನ್ ಸೇನಾನಿ ಮತ್ತು ಹಲವು ಸಂಘ ಸಂಸ್ಥೆಗಳ ಅಧ್ಯಕ್ಷರು ಸೇರಿ ಒಂದೇ ಜಾಗದಲ್ಲಿ 50 ಕಟೌಟ್ ಹಾಕುತ್ತೇವೆ.
ವಿಷ್ಣುವರ್ಧನ್ ಅವರ ಯಶಸ್ವಿ ಚಿತ್ರಗಳ ಕಟೌಟ್ ನಿಲ್ಲಿಸಿ ದಾಖಲೆ ಬರೆಯಲು ಮುಂದಾಗಿದ್ದೇವೆ. ಒಂದು ಕಟೌಟ್ 40 ಅಡಿ ಇರಲಿದೆ. ಇಲ್ಲಿವರೆಗೆ ಭಾರತೀಯ ಚಿತ್ರರಂಗದಲ್ಲಿ ಏಕಸ್ಥಳದಲ್ಲಿ ಯಾವುದೇ ಸ್ಟಾರ್ಗೆ ಈ ರೀತಿ ಕಟೌಟ್ ನಿಲ್ಲಿಸಿಲ್ಲ. ಬಹುಶಃ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಇದೇ ಮೊದಲು ಅಂತಾ ಹೇಳಲಾಗುತ್ತಿದೆ. ಇದು ವಿಷ್ಣುವರ್ಧನ್ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.
ಇದನ್ನೂ ಓದಿ: ಮಾನ್ಸೂನ್ ರಾಗ ಸಿನಿಮಾಗೆ ಸಾಥ್ ಕೊಟ್ಟ ಮೋಹಕ ತಾರೆ ರಮ್ಯಾ