ಬಾಲಿವುಡ್ ನಟ ವಿಜಯ್ ವರ್ಮಾ ಮತ್ತು ದಕ್ಷಿಣದ ಹಾಲ್ಗೆನ್ನೆ ಚೆಲುವೆ ತಮನ್ನಾ ಭಾಟಿಯಾ ಡೇಟಿಂಗ್ ವದಂತಿ ಕೆಲ ದಿನಗಳಿಂದ ಕೇಳಿ ಬರುತ್ತಿರೋದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಆದರೆ ವಿಜಯ್ ತಮ್ಮ ಗೆಳತಿಗೆ ಪ್ರೀತಿಯ ಅಡ್ಡಹೆಸರನ್ನು ಇಟ್ಟಿದ್ದಾರೆಂಬುದು ನಿಮಗೆ ತಿಳಿದಿದೆಯೇ?.
ವದಂತಿ ಪ್ರೇಮಪಕ್ಷಿಗಳ ನ್ಯೂ ಇಯರ್ ಕಿಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಡಿ ಸಾಕಷ್ಟು ಸದ್ದು ಮಾಡಿತ್ತು. ಅಂದಿನಿಂದ ಈ ಜೋಡಿ ಪ್ರೀತಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ನಟ ನಟಿ ಮಾತ್ರ ಇನ್ನೂ ಮೌನ ವಹಿಸಿದ್ದಾರೆ. ತಮ್ಮ ಪ್ರೀತಿ ಬಗ್ಗೆ ಖಚಿತಪಡಿಸಿಲ್ಲ. ಆದಾಗ್ಯೂ, ಅವರ ರಹಸ್ಯ ಪೋಸ್ಟ್ಗಳ ಸಹಾಯದಿಂದ ಅಭಿಮಾನಿಗಳು ಈ ಬಗ್ಗೆ ಊಹಿಸುತ್ತಲೇ ಇದ್ದಾರೆ. ಇದೆಲ್ಲದರ ನಡುವೆ ನಟ ಇತ್ತೀಚೆಗೆ ಆನ್ಲೈನ್ನಲ್ಲಿ ಅಭಿಮಾನಿಗಳೊಂದಿಗಿನ ಮಾತುಕತೆ ಸಂದರ್ಭ ಕೂಡ ಸಣ್ಣ ಸುಳಿವು ಬಿಟ್ಟುಕೊಟ್ಟಿದ್ದಾರೆ.
ಸೋಮವಾರದಂದು ಬಾಲಿವುಡ್ ನಟ ವಿಜಯ್ ವರ್ಮಾ ಅವರು ತಮ್ಮ ಅಭಿಮಾನಿಗಳನ್ನು ಇನ್ಸ್ಟಾ ವೇದಿಕೆಯಲ್ಲಿ ಸಂಪರ್ಕಿಸಿದರು. ಆಸ್ಕ್ ಮಿ ಎನಿಥಿಂಗ್ ಸೆಷನ್ ನಡೆಸಿದರು. ಅಭಿಮಾನಿಗಳ ಕುತೂಹಲಕರ ಪ್ರಶ್ನೆಗಳಿಗೆ ಉತ್ತರಿಸಿದರು.
ಕರೀನಾ ಕಪೂರ್ ಖಾನ್ ಅವರೊಂದಿಗೆ ಕೆಲಸ ಮಾಡಿದ ಅನುಭವ, ಲಸ್ಟ್ ಸ್ಟೋರೀಸ್ 2 ಸೇರಿದಂತೆ ವಿಜಯ್ ಅವರ ಅಭಿಮಾನಿಗಳು ಕೆಲ ಆಸಕ್ತಿದಾಯಕ ಪ್ರಶ್ನೆಗಳನ್ನು ಹೊಂದಿದ್ದರು. ಲಸ್ಟ್ ಸ್ಟೋರೀಸ್ 2 ಕುರಿತು ಮಾತನಾಡುತ್ತಾ, ನಟಿ ತಮನ್ನಾ ಭಾಟಿಯಾ ವಿಚಾರವೂ ಬಂದಿದೆ.
ಅಭಿಮಾನಿಗಳೊಂದಿಗೆ ಆನ್ಲೈನಲ್ಲಿ ಮಾತನಾಡುತ್ತಿದ್ದ ವೇಳೆ, ತಮನ್ನಾ ತಮ್ಮ 'ಫೇವರಿಟ್' ಎಂದು ವಿಜಯ್ ಒಪ್ಪಿಕೊಂಡಿದ್ದಾರೆ. ಈ ಜೋಡಿಯನ್ನು ಚೆನ್ನಾಗಿ ಬಲ್ಲವರಿಂದ ಬಂದ ಪ್ರಶ್ನೆಯೊಂದು, "ನಿಮಗೆ ಟಮಾಟರ್ ಇಷ್ಟವೇ?" ಎಂಬುದಾಗಿ ಇತ್ತು. ಅದಕ್ಕೆ ವಿಜಯ್ ಅವರು ಎರಡು ಟೊಮೆಟೋ ಎಮೋಜಿಗಳೊಂದಿಗೆ "ನನ್ನ ಅಚ್ಚುಮೆಚ್ಚು" ಎಂದು ಉತ್ತರಿಸಿದ್ದಾರೆ.
ಇದನ್ನೂ ಓದಿ: 'ಆ ಹುಡುಗಿಯಾದರೂ ಸಂತೋಷವಾಗಿರಲಿ': ನಾಗ ಚೈತನ್ಯ - ಶೋಭಿತಾ ಡೇಟಿಂಗ್ ವದಂತಿಗೆ ಸಮಂತಾ ಪ್ರತಿಕ್ರಿಯೆ
ಫೆಬ್ರವರಿಯಲ್ಲಿ, ವಿಜಯ್ ಅವರ ಕ್ರೈಮ್ ಸೀರಿಸ್ ದಹಾದ್ (Dahaad) ಬರ್ಲಿನ್ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನಗೊಂಡಿತು. ವಿಜಯ್, ಸೋನಾಕ್ಷಿ ಸಿನ್ಹಾ ಸೇರಿದಂತೆ ದಹಾದ್ ತಂಡ ಫಿಲ್ಮ್ ಫೆಸ್ಟ್ನಲ್ಲಿ ಪ್ರಥಮ ಪ್ರದರ್ಶನಕ್ಕೆ ಹಾಜರಾಗಿದ್ದರು. ಆಗ, ಸಾಮಾಜಿಕ ಜಾಲತಾಣದಲ್ಲಿ ತಮನ್ನಾ ಅವರು ಇಡೀ ದಹಾದ್ ತಂಡಕ್ಕೆ ಶುಭಾಶಯಗಳನ್ನು ಸಲ್ಲಿಸಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಇನ್ಸ್ಟಾ ಸ್ಟೋರಿನಲ್ಲಿ ನಟ ವಿಜಯ್ ಅವರು "ಥ್ಯಾಂಕ್ಸ್ ಟಮಾಟರ್" ಎಂದು ಬರೆದುಕೊಂಡಿದ್ದರು. ಅಂದಿನಿಂದ ಅಭಿಮಾನಿಗಳು ಈ ಟಮಾಟರ್ ಎಂಬ ಅಡ್ಡಹೆಸರು ಹಿಡಿದು ತಮ್ಮ ಮೆಚ್ಚಿನ ನಟ ನಟಿಯನ್ನು ಸಾಮಾನ್ಯವಾಗಿ ಚೇಡಿಸುತ್ತಾರೆ.
ಇದನ್ನೂ ಓದಿ: 'ವಿಚ್ಛೇದನ'ವೆಂಬ ಕರಾಳ ಕ್ಷಣ-ನೋವಿನಿಂದ ಚೇತರಿಸಿಕೊಂಡಿಲ್ಲವೆಂದ ನಟಿ ಸಮಂತಾ
ಇವರಿಬ್ಬರು ಲಸ್ಟ್ ಸ್ಟೋರೀಸ್ 2ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಗೋವಾದಲ್ಲಿ ನಡೆದ ನ್ಯೂ ಇಯರ್ ಪಾರ್ಟಿ ವೇಳೆ ಇಬ್ಬರೂ ಕಿಸ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುವುದು ಮತ್ತು ಸಾಮಾಜಿಕ ಜಾಲತಾಣದಲ್ಲಿ ರಹಸ್ಯಕರ ಪೋಸ್ಟ್ ಮೂಲಕ ಸದ್ದು ಮಾಡುತ್ತಿದ್ದಾರೆ. ಒಮ್ಮೆ ನಟಿ ಬಳಿ ಈ ಬಗ್ಗೆ ಪ್ರಶ್ನಿಸಿದ್ದಾಗ, ಒಟ್ಟಿಗೆ ಚಿತ್ರದಲ್ಲಿ ನಟಿಸಿದ್ದೇವೆ, ವದಂತಿಗಳನ್ನು ನಿರಾಕರಿಸುವಲ್ಲಿ ತೊಡಗುವುದಿಲ್ಲ. ಏಕೆಂದರೆ ಈ ವಿಚಾರ ಅಗತ್ಯ ಎಂದು ನಾನು ಭಾವಿಸುವುದಿಲ್ಲ ಎಂದು ಹೇಳಿದ್ದರು.