ಖಳನಟನ ಪಾತ್ರಗಳ ಜೊತೆಗೆ ನಾಯಕನಾಗಿ ಸದ್ದು ಮಾಡುತ್ತಿರುವ ನಟ ವಸಿಷ್ಠ ಸಿಂಹ ಅವರು ರೋಸ್ ಹಿಡಿದು ಹೀರೋ ಆಗೋಕು ರೆಡಿ, ಲಾಂಗ್ ಹಿಡಿದು ವಿಲನ್ ಆಗೋಕೂ ಸೈ. ಸದ್ಯ ಚೇತನ್ ಕೇಶವ್ ನಿರ್ದೇಶನದ ಬಹುನಿರೀಕ್ಷಿತ ಲವ್ ಲಿ ಸಿನಿಮಾ ಜಪ ಮಾಡುತ್ತಿದ್ದಾರೆ. ಪೋಸ್ಟರ್ಗಳಲ್ಲಿ ವಸಿಷ್ಠ ಸಿಂಹ ಲುಕ್ ಸಖತ್ ಇಂಪ್ರೆಸ್ ಮಾಡಿದೆ. ಲವ್ ಲಿ ಚಿತ್ರೀಕರಣ ಕೂಡ ಭರದಿಂದ ಸಾಗುತ್ತಿದ್ದು, ಮೊದಲ ಶೆಡ್ಯೂಲ್ ಅನ್ನು ಯಶಸ್ವಿಯಾಗಿ ಮುಗಿಸಿರುವ ಚಿತ್ರತಂಡ ಸೆಕೆಂಡ್ ಶೆಡ್ಯೂಲ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ.
ನಾಗರಭಾವಿಯ ಕಿಂಗ್ಸ್ ಕ್ಲಬ್ನಲ್ಲಿ ಚಿತ್ರದ ಸೆಕೆಂಡ್ ಶೆಡ್ಯೂಲ್ ಚಿತ್ರೀಕರಣ ನಡೆಯುತ್ತಿದೆ. ಇಲ್ಲಿ ಆಫೀಸ್ ಸೆಟ್ ನಿರ್ಮಾಣ ಮಾಡಲಾಗಿದ್ದು, ವಸಿಷ್ಠ ಸಿಂಹ, ಸಾಧುಕೋಕಿಲ, ನಟಿ ಸಮೀಕ್ಷಾ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಪಾಲ್ಗೊಂಡಿದ್ದಾರೆ.

ಇದೊಂದು ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾವಾಗಿದ್ದು, ರೌಡಿಸಂ ಕಥಾಹಂದರವೂ ಚಿತ್ರದಲ್ಲಿದೆ. ವಸಿಷ್ಠ ಸಿಂಹನಿಗೆ ನಾಯಕಿಯಾಗಿ ಜಾರ್ಖಂಡ್ ಮೂಲದ ಸ್ಟೆಫಿ ಪಟೇಲ್ ನಟಿಸುತ್ತಿದ್ದಾರೆ. ಕೊರಿಯನ್ ವೆಬ್ ಸೀರಿಸ್, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಸ್ಟೆಫಿ ಪಟೇಲ್ಗೆ ಇದು ಮೊದಲ ಕನ್ನಡ ಸಿನಿಮಾ. ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಕೂಡ ಚಿತ್ರತಂಡ ಸೇರಿಕೊಂಡಿದ್ದು, ಸುಬ್ಬಲಕ್ಷ್ಮಿ ಸಂಸಾರ ಸೀರಿಯಲ್ ಖ್ಯಾತಿಯ ಸಮೀಕ್ಷಾ ಚಿತ್ರದ ಪ್ರಮುಖ ರೋಲ್ನಲ್ಲಿ ಮಿಂಚಲಿದ್ದಾರೆ.

ಇದನ್ನೂ ಓದಿ: ರಾಣಾ ಎರಡನೇ ಸಿನಿಮಾ ನಿರ್ದೇಶಿಸಲಿದ್ದಾರೆ ಪ್ರೇಮ್ ಶಿಷ್ಯ ವಿಜಯ್ ಈಶ್ವರ್
ಸಿನಿಮಾವನ್ನು ಎಂ.ಆರ್ ರವೀಂದ್ರ ಕುಮಾರ್ ನಿರ್ಮಿಸುತ್ತಿದ್ದು, ಅಶ್ವಿನ್ ಕೆನಡಿ ಕ್ಯಾಮೆರಾ ವರ್ಕ್, ಹರೀಶ್ ಕೊಮ್ಮೆ ಸಂಕಲನ, ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿದೆ. ಶೀಘ್ರದಲ್ಲೇ ಲವ್ ಲಿ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.