ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರ ಪಾಲಿನ ಫೇವರೆಟ್ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಸದ್ಯ 125ನೇ ವೇದ ಚಿತ್ರದ ಸಕ್ಸಸ್ನಲ್ಲಿರುವ ಶಿವರಾಜ್ ಕುಮಾರ್ ಕನ್ನಡದ ಸೂಪರ್ ಸ್ಟಾರ್. ಶಿವಣ್ಣ ಬೇರೆಯವರಂತೆ ಇಲ್ಲಿವರೆಗೆ ಪ್ಯಾನ್ ಇಂಡಿಯಾ ಸಿನಿಮಾ ಮಾಡದೇ ಇರಬಹುದು. ಆದರೆ ಶಿವರಾಜ್ ಕುಮಾರ್ ಅವರಿಗೆ ಭಾರತದ ಬೇರೆ ಬೇರೆ ಭಾಗಗಳಲ್ಲಿ ಅಭಿಮಾನಿಗಳಿದ್ದಾರೆ.
ಶಿವಣ್ಣನ ಸರಳತೆ, ಅಭಿನಯಕ್ಕೆ ಮನಸೋತವರು ಅನೇಕರು. ಕೇವಲ ಜನಸಾಮಾನ್ಯರಷ್ಟೇ ಅಲ್ಲ, ಶಿವಣ್ಣ ಅಂದ್ರೆ ಅಕ್ಕಪಕ್ಕದ ರಾಜ್ಯದಲ್ಲಿನ ಚಿತ್ರೋದ್ಯಮಕ್ಕೂ ಅಚ್ಚುಮೆಚ್ಚು. ಇದಕ್ಕೆ ಕೈಗನ್ನಡಿಯೆಂಬಂತೆ ಕರುನಾಡ ಚಕ್ರವರ್ತಿಗೆ ಅನೇಕರು ಸಿನಿಮಾ ಅಪ್ರೋಚ್ ಮಾಡುತ್ತಿದ್ದಾರೆ. ಸೆಂಚುರಿ ಸ್ಟಾರ್ ಅವರನ್ನು ಗಮನದಲ್ಲಿಟ್ಟುಕೊಂಡೇ ತಮ್ಮ ತಮ್ಮ ಭಾಷೆಯಲ್ಲಿ ಪಾತ್ರವನ್ನು ಹೆಣೆಯುತ್ತಿದ್ದಾರೆ.
ಈ ಮಾತಿಗೆ ಪೂರಕವಾಗಿ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೇಲರ್, ಧನುಷ್ ಅಭಿನಯದ ಕ್ಯಾಪ್ಟನ್ ಮಿಲ್ಲರ್ ಇದಕ್ಕೆ ಅತ್ಯುತ್ತಮ ಉದಾಹರಣೆ. ಕಾಲಚಕ್ರ ಉರುಳಿದಂತೆ ಕನ್ನಡದ ಜೊತೆ ಜೊತೆಗೆ ಬೇರೆ ಭಾಷೆಯಲ್ಲಿಯೂ ಬ್ಯುಸಿಯಾಗುತ್ತಿರುವ ಹ್ಯಾಟ್ರಿಕ್ ಹೀರೋ ಇದೀಗ ಬಾಲಿವುಡ್ ಅಂಗಳಕ್ಕೆ ಕಾಲಿಡುತ್ತಿದ್ದಾರೆ. ಅದು ಕೂಡ ಶಾರುಖ್ ಖಾನ್ ಸಿನಿಮಾ ಮೂಲಕ. ಇಂಥದ್ದೊಂದು ಬ್ಲಾಕ್‌ಬಸ್ಟರ್ ಸಮಾಚಾರ ಸದ್ಯಕ್ಕೆ ಎಲ್ಲೆಡೆ ಸುದ್ದಿಯಾಗುತ್ತಿದೆ.
ಇದನ್ನೂ ಓದಿ: 'ಅವಕಾಶ ನೀಡಿದಕ್ಕಾಗಿ ಥ್ಯಾಂಕ್ಯೂ..' ಬಹುನಿರೀಕ್ಷಿತ 'ಕಬ್ಜ' ಚಿತ್ರದ ಬಗ್ಗೆ ಶಿವಣ್ಣ ಹೀಗಂದ್ರು..
ಪಠಾಣ್ ಚಿತ್ರದ ಮೂಲಕ ಶಾರುಖ್ ಮತ್ತೆ ಮೈಕೊಡವಿ ಎದ್ದು ನಿಂತಿದ್ದಾರೆ. ವನವಾಸ ಮುಗಿಸಿ ಮರಳಿ ಬಾಲಿವುಡ್ನ ಆಸ್ಥಾನದಲ್ಲಿ ರಾಜನಾಗಿ ವಿರಾಜಮಾನರಾಗಿದ್ದಾರೆ. ಹಾಗಂತ ಸವಾಲು ಮುಗಿದಿಲ್ಲ. ಮನದ ದುಗುಡ ಸಂಪೂರ್ಣ ಕಡಿಮೆಯಾಗಿಲ್ಲ. ಪಠಾಣ್ ಮೂಲಕ ಗೆದ್ದರೂ ಚಿಕ್ಕ ಅಳುಕು ಶಾರುಖ್ಗೆ ಇದ್ದೇ ಇದೆ. ಹೀಗಾಗಿಯೇ ಶಾರುಖ್ ಮಗದೊಂದು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಮುಂದೆ ಬಿಡುಗಡೆಯಾಗಲಿರುವ ಜವಾನ್ ಚಿತ್ರಕ್ಕೆ ದಕ್ಷಿಣ ನಟರ ಭೇಟಿಗೆ ಮುಂದಾಗಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಜವಾನ್ ಚಿತ್ರದಲ್ಲಿ ಸೌಥ್ ಸೂಪರ್ ಸ್ಟಾರ್ಸ್ ವಿಶೇಷವಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ದಕ್ಷಿಣ ಧ್ರುವದಿಂದ ಉತ್ತರ ಧ್ರುವಕ್ಕೂ ಹರಡಿದೆ.
ರಾಮ್ ಚರಣ್, ವಿಜಯ್ ಮತ್ತು ಶಿವರಾಜ್ ಕುಮಾರ್ ಅವರನ್ನು ಚಿತ್ರತಂಡ ಸಂಪರ್ಕಿಸಿದೆ ಅನ್ನುವ ಮಾತುಗಳು ಕೇಳಿಬರುತ್ತಿವೆ. ಸದ್ಯಕ್ಕೆ ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಬಾಲಿವುಡ್ ಎಸ್ಆರ್ಕೆ ಜೊತೆ ನಮ್ಮ ಸ್ಯಾಂಡಲ್ವುಡ್ ಎಸ್ಆರ್ಕೆ ಕಾಣಿಸಿಕೊಂಡ್ರೆ ಬೆಳ್ಳಿತೆರೆ ಧಗಧಗಿಸುವುದು ಪಕ್ಕಾ ಅಂತಾ ಕಿಂಗ್ ಖಾನ್ ಟೀಮ್ ಲೆಕ್ಕಾಚಾರ ಹಾಕಿದೆಯಂತೆ. ಈಗಾಗಲೇ ಹ್ಯಾಟ್ರಿಕ್ ಹೀರೋ ಜೊತೆ ಜವಾನ್ ಚಿತ್ರತಂಡದವರು ಮಾತುಕಥೆ ಮಾಡಿದ್ದಾರೆ ಎನ್ನಲಾಗಿದೆ. ಮತ್ತೊಂದು ಕಡೆ ಹ್ಯಾಟ್ರಿಕ್ ಹೀರೋ ಆಪ್ತ ಮೂಲಗಳು ಕೂಡ ಶಿವಣ್ಣ ಬಾಲಿವುಡ್ ಅಂಗಳಕ್ಕೆ ಕಾಲಿಡೋದು ಪಕ್ಕಾ ಅಂತಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದರೆ ಜವಾನ್ ಚಿತ್ರತಂಡ ಅಧಿಕೃತ ಘೋಷಣೆ ಒಂದೇ ಬಾಕಿ ಇದೆ.
ಇದನ್ನೂ ಓದಿ: 'ಕಬ್ಜ'ದಲ್ಲಿ ಮಿರಮಿರ ಮಿಂಚುವ ವಿಂಟೇಜ್ ಕಾರುಗಳು.. ಖರ್ಚು ಎಷ್ಟು ಗೊತ್ತಾ?