ಕನ್ನಡ ಚಿತ್ರರಂಗದ ರಾಜರತ್ನ, ನಮ್ಮನ್ನಗಲಿದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ದೇವರ ಪಾತ್ರದಲ್ಲಿ ಕಾಣಿಸಿಕೊಂಡಿರುವ ಲಕ್ಕಿಮ್ಯಾನ್ ಸಿನಿಮಾ ಇಂದು ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ.
ಕೆ.ಜಿ ರಸ್ತೆಯಲ್ಲಿರುವ ನರ್ತಕಿ ಚಿತ್ರಮಂದಿರಕ್ಕೆ ಸಿನಿಮಾ ನೋಡಲು ರಾಘವೇಂದ್ರ ರಾಜ್ಕುಮಾರ್ ತಮ್ಮ ಕುಟುಂಬ ಸಮೇತ ಸಮೇತ ಆಗಮಿಸಿದ್ದರು. ಸಿನಿಮಾ ನೋಡಿದ ಬಳಿಕ ಮಾತನಾಡಿದ ರಾಘಣ್ಣ, ಈ ಸಿನಿಮಾವನ್ನು ಅಪ್ಪಿಕೊಂಡು ನೋಡಿ. ಅಪ್ಪು ಸಿನಿಮಾವನ್ನು ನಮಗೆ ಅರ್ಪಿಸಿ ಹೋಗಿದ್ದಾನೆ. ಮೊದಲ ದಿನ ಅಪ್ಪುನಿಂದಾಗಿ ಥಿಯೇಟರ್ಗೆ ಬಂದಿದ್ದೇನೆ. ಈ ಸಿನಿಮಾವನ್ನು ಇನ್ನು ಎರಡು, ಮೂರು ಬಾರಿ ನೋಡುತ್ತೇನೆ. ಸಿನಿಮಾದಲ್ಲಿ ಅಪ್ಪು ಕೂತಿದ್ದ ಚೇರ್ ಕೊಟ್ಟು ಬಿಡಿ. ಅದನ್ನ ಪೂಜೆ ಮಾಡುತ್ತೇನೆಂದು ರಾಘಣ್ಣ ಭಾವುಕರಾದರು.
ನನ್ನ ತಮ್ಮನ ಸಿನಿಮಾ ಅನ್ನೋದಕ್ಕಿಂತ ಒಂದೊಳ್ಳೆ ಸಿನಿಮಾದಲ್ಲಿ ನನ್ನ ತಮ್ಮ ಇದ್ದಾನೆ ಅಂತ ಹೇಳಲು ಇಷ್ಟಪಡುತ್ತೇನೆ. ನಮ್ಮ ತಂದೆ ಇದ್ದಾಗ ದೊಡ್ಮನೆ ಅಂತ ಕರೆದ್ರು. ಇವನು ಬಂದ ಮೇಲೆ ದೇವರ ಮನೆ ಅಂತ ಕರೆದ್ರು. ಇಷ್ಟು ದಿನ ಅಪ್ಪು ಪ್ರೀತಿಸುತ್ತಿದ್ದೆವು. ಇನ್ಮೇಲೆ ಪೂಜಿಸಬೇಕು. ಈ ಸಿನಿಮಾದಲ್ಲಿ ಅವನು ದೇವರ ಪಾತ್ರ ಮಾಡಿದ್ದಾನೆ. ಅವನು ದೇವರ ಜೊತೆ ಇಲ್ಲ, ದೇವರು ಅವನ ಜೊತೆ ಇದ್ದಾರೆ. ಅವನನ್ನು ನಾವೇ ದೇವರು ಮಾಡಿದ್ದೇವೆ. ಈ ಸಿನಿಮಾ ನಾನು ಇರೋವರೆಗೂ ನನ್ನ ಜೊತೆ ಇರುತ್ತದೆ. ನಾನು ಹೋದ ಮೇಲೂ ಇರುತ್ತದೆ ಅಂತಾ ಹೇಳಿದರು.
ಇದನ್ನೂ ಓದಿ: 'ಲಕ್ಕಿಮ್ಯಾನ್' ಬಿಡುಗಡೆ: ದೇವರ ರೂಪದಲ್ಲಿ ಅಭಿಮಾನಿಗಳಿಗೆ ದರ್ಶನ ಕೊಟ್ಟ ಅಪ್ಪು
ನಿರ್ದೇಶಕ ನಾಗೇಂದ್ರ ಪ್ರಸಾದ್ ನಿರ್ದೇಶನದ ಲಕ್ಕಿಮ್ಯಾನ್ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಚಿತ್ರದಲ್ಲಿ ಪುನೀತ್ ದೇವರ ಪಾತ್ರ ಮಾಡಿದ್ದಾರೆ. ಅಷ್ಟೇ ಅಲ್ಲ, ಚಿತ್ರದಲ್ಲಿ ಪ್ರಭುದೇವ ಹಾಗೂ ಅಪ್ಪು ಡ್ಯಾನ್ಸ್ ನೋಡುಗರನ್ನು ಕುಣಿಯುವಂತೆ ಮಾಡುತ್ತದೆ. ಒಟ್ಟಿನಲ್ಲಿ ಪುನೀತ್ ರಾಜ್‍ಕುಮಾರ್ ಅವರನ್ನು ದೇವರ ರೂಪದಲ್ಲಿ ಕಂಡ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ.