ಆರವತ್ತು ಎಪ್ಪತ್ತರ ದಶಕದಲ್ಲಿ ತಮ್ಮ ಕಂಚಿನ ಕಂಠ ಹಾಗೂ ಪ್ರಬುದ್ಧ ನಟನೆ ಮೂಲಕ ಕನ್ನಡ ಸಿನಿಪ್ರಿಯರ ಮನಸ್ಸು ಗೆದ್ದ ನಟ ಲೋಹಿತಾಶ್ವ. ನಾಟಕ, ರಂಗಭೂಮಿ, ಕಿರುತೆರೆ ಹಾಗು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡಿರುವ ಕಂಚಿನ ಕಂಠದ ಲೋಹಿತಾಶ್ವ ಇನ್ನಿಲ್ಲ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟ ಲೋಹಿತಾಶ್ವ ಕುಮಾರಸ್ವಾಮಿ ಲೇಔಟ್ನಲ್ಲಿರುವ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ. ಹಳ್ಳಿಯಿಂದ ಬಂದ ಲೋಹಿತಾಶ್ವ ಸಿನಿಮಾ ರಂಗಕ್ಕೆ ಬಂದಿದ್ದೇ ಒಂದು ಇಂಟ್ರಸ್ಟ್ರಿಂಗ್ ಕಥೆ.
ಅಪ್ಪಟ ಹಳ್ಳಿ ಪ್ರತಿಭೆಯಾಗಿರುವ ಲೋಹಿತಾಶ್ವ ತುಮಕೂರಿನ ತೊಂಡಗೆರೆ ಎಂಬ ಹಳ್ಳಿಯಲ್ಲಿ 1939ರಲ್ಲಿ ಲೋಹಿತಾಶ್ವ ಹುಟ್ಟಿದರು. ರಂಗಭೂಮಿ, ನಾಟಕ ಹಾಗು ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ತಮ್ಮದೇ ಛಾಪು ಮೂಡಿಸಿರುವ ನಟ.
ಶಿಸ್ತಿನ ಹುಡುಗನಾಗಿದ್ದ ಲೋಹಿಥಾಶ್ವ: ಜಮೀನ್ದಾರ್ ಕುಟುಂಬದವರಾದ ಲೋಹಿತಾಶ್ವ 14 ಜನ ಮಕ್ಕಳಲ್ಲಿ ಇವರು 7ನೇಯವರು. ತಮ್ಮ ಹುಟ್ಟೂರಿನಲ್ಲಿ ವಿದ್ಯಾಭ್ಯಾಸ ಶುರು ಮಾಡಿದ್ದ ಲೋಹಿತಾಶ್ವ ಆವಾಗ್ಲೇ ತುಂಬಾ ಬುದ್ದಿವಂತ ಹುಡುಗನಾಗಿದ್ದರು. ಹೈಸ್ಕೂಲ್ ವಿದ್ಯಾಭ್ಯಾಸ ಶುರು ಮಾಡಿದ್ದು ತುಮಕೂರಿನಲ್ಲಿ. ಚಿಕ್ಕವಯಸ್ಸಿನಲ್ಲೇ ಸಾಹಿತ್ಯದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದ ಲೋಹಿತಾಶ್ವ ಬಹಳ ಶಿಸ್ತಿನ ಜೀವನ ನಡೆಸಿಕೊಂಡು ಬಂದವರು.
ಇವರ ಕುಟುಂಬದಲ್ಲಿ ಅಣ್ಣ ತಂಗಿ ಅಕ್ಕಂದಿರು ಅಂತಾ 14 ಜನ ಇರ್ತಾ ಇದ್ದರು. ಈ ಕಾರಣಕ್ಕೆ ಲೋಹಿತಾಶ್ವ ಬಾಲ್ಯದಿಂದಲೇ ಹೆಚ್ಚು ಆ್ಯಕ್ಟಿವ್ ಆಗಿ ಗಮನ ಸೆಳೆದರು. ಯಾವ ಮಟ್ಟಕ್ಕೆ ಅಂದರೆ ಸ್ಕೂಲ್ ಹಾಗೂ ಹೈಸ್ಕೂಲ್ನಲ್ಲಿ ನಾಟಕ ಮಾಡಿಸುವ ಜೊತೆಗೆ ಏಪ ಪಾತ್ರಾಭಿನಯ ಮಾಡಿ ಶಿಕ್ಷಕರಿಂದ ಭೇಷ್ ಅನಿಸಿಕೊಂಡಿದ್ದರಂತೆ.
ಎಸ್ಎಸ್ಎಲ್ಸಿಯಲ್ಲೇ ಶಿಕ್ಷಣ ನಿಲ್ಲಿಸಿದ್ದ ಇಂಗ್ಲೀಷ್ ಪ್ರೊಫೆಸರ್: ಇಂಗ್ಲೀಷ್ ಸಾಹಿತ್ಯದಲ್ಲಿ ಮೈಸೂರು ಯುನಿವರ್ಸಿಟಿಯಿಂದ ಪಿ.ಹೆಚ್.ಡಿ ಪಡೆದಿರುವ ನಟ ಲೋಹಿತಾಶ್ವ, ಎಸ್ಎಸ್ಎಲ್ಸಿ ಮುಗಿದ ನಂತರ ಓದುವ ಮನಸ್ಸು ಮಾಡಲಿಲ್ಲ. ಬದಲಾಗಿ ಲೋಹಿತಾಶ್ವ ಅವರು ಮೂರು ವರ್ಷ ಮನೆ ಬಿಟ್ಟು ಹೋಗಿದ್ದರಂತೆ. ಆಗ ಅಪ್ಪ ಅಮ್ಮ ಲೋಹಿತಾಶ್ವ ಜೀವನ ಹಾಳು ಮಾಡಿಕೊಂಡ ಎಂದು ನೊಂದುಕೊಂಡಿದ್ದರಂತೆ. ಈ ವಿಷ್ಯ ತಿಳಿದ ಲೋಹಿತಾಶ್ವ ಅವರು ಮತ್ತೆ ಓದಿನ ಕಡೆ ಗಮನ ಹರಿಸಿ ಮೈಸೂರಿನ ಮಾನಸಗಂಗೋತ್ರಿ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಅದೇ ಕಾಲೇಜಿನಲ್ಲಿ ಎಂಎ ಮುಗಿಸಿ ಅಲ್ಲೇ ಇಂಗ್ಲಿಷ್ ಪ್ರೊಫೆಸರ್ ಆಗಿದ್ದು ದೊಡ್ಡ ಸಾಧನೆ.
ಸಿನಿಮಾಕ್ಕೆ ದಾರಿ ಮಾಡಿಕೊಟ್ಟ ನಾಟಕದ ಗೀಳು: 33 ವರ್ಷಗಳ ಕಾಲ ಪ್ರೊಫೆಸರ್ ಆಗಿ ಕೆಲಸ ಮಾಡಿದ್ದ ಲೋಹಿತಾಶ್ವ ಸಿನಿಮಾ ಇಂಡಸ್ಟ್ರಿಗೆ ಬಂದಿದ್ದು ಮಾತ್ರ ಅಚ್ಚರಿ ಮೂಡಿಸುತ್ತೆ. ಮಕ್ಕಳಿಗೆ ಪಾಠ ಮಾಡುವ ಜೊತೆಗೆ ಲೋಹಿತಾಶ್ವ ನಾಟಕಗಳನ್ನು ಮಾಡೋದನ್ನು ನಿಲ್ಲಿಸಿರಲಿಲ್ಲ. ಇದೇ ನಾಟಕದ ಆಸಕ್ತಿಯಿಂದ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಾರೆ ಎಂಬುದನ್ನು ಸ್ವತಃ ಲೋಹಿತಾಶ್ವ ಕೂಡ ಅಂದುಕೊಂಡಿಲಿಲ್ವಂತೆ. ಒಂದು ದಿನ ತುಮಕೂರಿನಲ್ಲಿ ಲೋಹಿತಾಶ್ವ ಅವರ ನಾಟಕ ನೋಡಿ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಸಿನಿಮಾಗೆ ಬರುವಂತೆ ಹೇಳಿದ್ದರಂತೆ. ಅಲ್ಲಿಂದ ಲೋಹಿತಾಶ್ವ ಅವರ ಸಿನಿಮಾ ಕೆರಿಯರ್ ಶುರುವಾಗಿತ್ತು.
ಹಿಟ್ ಕೊಟ್ಟ ಗಜೇಂದ್ರ ಸಿನಿಮಾ: ಶಂಕರ್ ನಾಗ್ ಅಭಿನಯದ ಮುನಿಯನ ಮಾದರಿ ಸಿನಿಮಾದಲ್ಲಿ ಮೊದಲಿಗೆ ಬಣ್ಣ ಹಚ್ಚಿದ ಲೋಹಿತಾಶ್ವ ತಮ್ಮ ಕಂಚಿನ ಕಂಠ ಹಾಗೂ ಅಭಿನಯದಿಂದ ಗಮನ ಸೆಳೆಯುತ್ತಾರೆ. ಆದರೆ, ಲೋಹಿತಾಶ್ವಗೆ ಹೆಸರು ತಂದು ಕೊಟ್ಟಿದ್ದು ಮಾತ್ರ ಅಂಬರೀಷ್ ನಟನೆಯ ಗಜೇಂದ್ರ ಸಿನಿಮಾ. ಈ ಚಿತ್ರದಲ್ಲಿ ಲೋಹಿತಾಶ್ವ ಮುಖ್ಯಮಂತ್ರಿ ಪಾತ್ರದಲ್ಲಿ ಅಭಿನಯಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅಲ್ಲಿಂದ ಲೋಹಿತಾಶ್ವ ಸಿನಿಮಾ ಕೆರಿಯರ್ಗೆ ಹೊಸ ತಿರುವು ಸಿಗುತ್ತೆ.
500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯ: ಗಜೇಂದ್ರ ಸಿನಿಮಾ ಯಶಸ್ಸಿನಿಂದ ಲೋಹಿತಾಶ್ವ ಬೇಡಿಕೆಯ ಖಳ ನಟ ಹಾಗು ಪೋಷಕ ನಟನಾಗಿ ಬೆಳೆಯುತ್ತಾರೆ. ಅಭಿಮನ್ಯು, ಅವತಾರ ಪುರುಷ, ಚಿನ್ನ, ಹೊಸ ನೀರು, ವಿಶ್ವ, ಪ್ರತಾಪ್, ಪೊಲೀಸ್ ಲಾಕಪ್, ರೆಡಿಮೇಡ್ ಗಂಡ, ಸ್ನೇಹಲೋಕ, ಸುಂದರಕಾಂಡ, ಸಿಂಹದ ಮರಿ, ಮೂರು ಜನ್ಮ, ಸಾಂಗ್ಲಿಯಾನ, ಟೈಮ್ ಬಾಂಬ್, ಲಾಕಪ್ ಡೆತ್, ಸಂಭವಾಮಿ ಯುಗೇ ಯುಗೇ, ರಣಚಂಡಿ, ಸಮಯದ ಗೊಂಬೆ ಹೀಗೆ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಲೋಹಿತಾಶ್ವ ಅಭಿನಯಿಸಿದ್ದಾರೆ.
40ಕ್ಕೂ ಹೆಚ್ಚು ಬಾರಿ ಮುಖ್ಯಮಂತ್ರಿಯಾದ ಏಕೈಕ ನಟ: ಕನ್ನಡದ ಸ್ಟಾರ್ ನಟರಾದ ಅಂಬರೀಷ್, ಶಂಕರ್ ನಾಗ್, ವಿಷ್ಣುವರ್ಧನ್, ರವಿಚಂದ್ರನ್ ಅರ್ಜುನ್ ಸರ್ಜಾ, ಅನಂತ್ ನಾಗ್, ದೇವರಾಜ್, ಶಿವರಾಜ್ ಕುಮಾರ್ ಸೇರಿದಂತೆ ಬಹುತೇಕ ಸ್ಟಾರ್ಗಳ ಸಿನಿಮಾಗಳಲ್ಲಿ ಲೋಹಿತಾಶ್ವ ಅಭಿನಯಿಸಿದ್ದಾರೆ.
ವಿಶೇಷ ಅಂದ್ರೆ ಸಿನಿಮಾಗಳಲ್ಲಿ ಬರೋಬ್ಬರಿ 40ಕ್ಕೂ ಹೆಚ್ಚು ಬಾರಿ ಮುಖ್ಯಮಂತ್ರಿ ಪಾತ್ರದಲ್ಲಿ ನಟಿಸಿರುವ ಏಕೈಕ ನಟ ಲೋಹಿತಾಶ್ವ ಅನ್ನೋದು ವಿಶೇಷ. 1971ರಲ್ಲಿ ಮದುವೆಯಾದ ಲೋಹಿತಾಶ್ವ ಅವರಿಗೆ ಮೂವರು ಮಕ್ಕಳಿದ್ದಾರೆ. ಆ ಪೈಕಿ ಈಗಾಗಲೇ ಸಿನಿಮಾದಲ್ಲಿ ಗುರುತಿಸಿಕೊಂಡಿರುವ ಶರತ್ ಲೋಹಿತಾಶ್ವ ಕೂಡ ಒಬ್ಬರು.
ಅವರೂ ಅಪ್ಪನಂತೆ ಬೇಡಿಕೆಯ ನಟನಾಗಿದ್ದಾರೆ. ತಮ್ಮ ಕಂಚಿನ ಕಂಠ ಹಾಗು ಅಮೋಘ ಅಭಿನಯದಿಂದ ಗಮನ ಸೆಳೆದಿದ್ದ ಹಿರಿಯ ನಟ ಲೋಹಿತಾಶ್ವ ಇನ್ನು ನೆನಪು ಮಾತ್ರ.
ಇದನ್ನು ಓದಿ: ಲೋಹಿತಾಶ್ವ ವಿಧಿವಶ.. 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಹಿರಿಯ ನಟ ಇನ್ನಿಲ್ಲ