ಕಿರುತೆರೆಯಿಂದಲೇ ಸಿನಿಪಯಣ ಆರಂಭಿಸಿ ಕನ್ನಡ ಚಿತ್ರರಂಗದ ಗೋಲ್ಡನ್ ಸ್ಟಾರ್ ಆಗಿರುವ ಗಣೇಶ್ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿಬರಲಿರುವ ಹೊಸ ಕಾರ್ಯಕ್ರಮದ ಸಾರಥ್ಯ ವಹಿಸಿದ್ದಾರೆ. ವೀಕೆಂಡ್ ಮನೋರಂಜನೆಗೆ 'ಇಸ್ಮಾರ್ಟ್ ಜೋಡಿ' ಎಂಬ ಕಾರ್ಯಕ್ರಮ ಶುರುವಾಗುತ್ತಿದ್ದು, ಗಣೇಶ್ ಇದರ ನಿರೂಪಕರಾಗಿದ್ದಾರೆ.
ಜುಲೈ 16ರ ಶನಿವಾರದಿಂದ ಇಸ್ಮಾರ್ಟ್ ಜೋಡಿ ಶೋ ಆರಂಭವಾಗಲಿದೆ. ಹತ್ತು ಸೆಲೆಬ್ರಿಟಿ ಜೋಡಿಗಳು ಭಾಗವಹಿಸಲಿದ್ದಾರೆ. ಶೋ ಬಗ್ಗೆ ಗಣೇಶ್ ಹಾಗೂ ಇಸ್ಮಾರ್ಟ್ ಜೋಡಿ ತಂಡವು ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದೆ.
ನಟ ಗಣೇಶ್ ಮಾತನಾಡಿ, ಮೊದಲ ಬಾರಿಗೆ ಸೆಲೆಬ್ರಿಟಿ ಜೋಡಿಗಳ ಕುರಿತಾದ ಕಾರ್ಯಕ್ರಮ ನಡೆಸಿಕೊಡುತ್ತಿದ್ದೇನೆ. ಹೊಸದಾಗಿ ಮದುವೆಯಾದವರಿಂದ ಹಿಡಿದು 40 ವರ್ಷ ದಾಂಪತ್ಯ ನಡೆಸಿದ ಹಿರಿಯರವರೆಗೂ ಇರಲಿದ್ದಾರೆ. ಇಂದಿನ ದಿನಗಳಲ್ಲಿ ದಂಪತಿ ಸಣ್ಣ-ಪುಟ್ಟ ವಿಷಯಕ್ಕೂ ಬಹಳ ಬೇಗನೆ ದೂರವಾಗುತ್ತಿದ್ದಾರೆ. ಜೀವನ ಎಂದರೆ ಅದಲ್ಲ, ಇಲ್ಲಿ ಏಳು-ಬೀಳು, ಸುಖ, ಸಂತೋಷ ಎಲ್ಲವೂ ಇರುತ್ತದೆ ಎಂಬುದನ್ನು ಹೇಳುವ ಪ್ರಯತ್ನ ಕಾರ್ಯಕ್ರಮದ್ದು ಎಂದರು.
ಕಾರ್ಯಕ್ರಮವು ಒಳ್ಳೆಯ ಪರಿಕಲ್ಪನೆ ಹೊಂದಿರುವುದರಿಂದ ಒಪ್ಪಿಕೊಂಡಿದ್ದೇನೆ. ಒಟ್ಟು 26 ಕಂತು, ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಪ್ರಸಾರವಾಗಲಿದೆ. ಇಲ್ಲಿ ಒಬ್ಬೊಬ್ಬರ ಜೀವನ ಪಯಣ ಒಂದೊಂದು ರೀತಿ, ಹಿರಿಯರ ಜೊತೆಗೆ ಮಾತನಾಡುವಾಗ ಅವರ ಜೀವನದ ಬಗ್ಗೆ ಕೇಳಿ ಬಹಳ ಖುಷಿಯಾಯಿತು. ಒಬ್ಬ ಪ್ರೇಕ್ಷಕನಾಗಿ ನನಗೂ ಸಹ ಬಹಳ ಕುತೂಹಲವಿದೆ ಎಂದು ಹೇಳಿದರು.
ಇಲ್ಲಿ ತೀರ್ಪುಗಾರರು ಇರುವುದಿಲ್ಲ. ನಾನು ನಿರೂಪಕ, ಸ್ಪರ್ಧಿಗಳಿಗೆ ಹಲವು ಟಾಸ್ಕ್ ನೀಡಲಾಗುತ್ತದೆ. ಗೆದ್ದವರಿಗೆ ಅಂಕ ಸಿಗಲಿದೆ. ಮೊದಲ ಐದು ಕಂತುಗಳಲ್ಲಿ ಯಾವುದೇ ಎಲಿಮಿನೇಷನ್ ಇಲ್ಲ. ಗೆದ್ದವರಿಗೆ 10 ಲಕ್ಷ ರೂ ಬಹುಮಾನ ನೀಡಲಾಗುತ್ತದೆ. ಚಿತ್ರರಂಗ, ಕಿರುತೆರೆ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯವಾಗಿರುವ ಜೋಡಿಗಳು ಭಾಗವಹಿಸುತ್ತಿವೆ. ಜೊತೆಗೆ ಸಿನೆಮಾ ಪ್ರಮೋಷನ್ಗಳೂ ಇರಲಿದ್ದು, ಆಗಾಗ ಸೆಲೆಬ್ರಿಟಿಗಳು ಅತಿಥಿಯಾಗಿ ಬರುತ್ತಿರುತ್ತಾರೆ ಎಂದು ಗಣೇಶ್ ತಿಳಿಸಿದರು.
ಇದನ್ನೂ ಓದಿ: VIDEO.. ಪ್ರಭುದೇವ್ - ಪವರ್ ಸ್ಟಾರ್ ಮಸ್ತ್ ಸ್ಟೆಪ್ ಹಾಕಿರುವ ಹಾಡಿನ ಮೇಕಿಂಗ್ ರಿವೀಲ್