ಬೆಂಗಳೂರು: ಕನ್ನಡ ಚಿತ್ರರಂಗ ಪರಭಾಷೆಯ ಮುಂದೆ ಏನೂ ಕಮ್ಮಿ ಇಲ್ಲ ಎಂಬಂತೆ ಸ್ಯಾಂಡಲ್ವುಡ್ನಲ್ಲಿ ಬಿಗ್ ಬಜೆಟ್ ಹಾಗು ಅದ್ದೂರಿ ಮೇಕಿಂಗ್ ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಈ ಸಾಲಿನಲ್ಲಿ ನಟ ವಿನೋದ್ ಪ್ರಭಾಕರ್ ಹೆಜ್ಜೆ ಇಟ್ಟಿದ್ದಾರೆ. ಸದ್ಯ ತಂದೆ ಟೈಗರ್ ಪ್ರಭಾಕರ್ ಹೆಸರಿನಲ್ಲಿ ಟೈಗರ್ ಟಾಕೀಸ್ ಎಂಬ ನಿರ್ಮಾಣ ಸಂಸ್ಥೆ ಹುಟ್ಟುಹಾಕಿದ್ದು, ಸಂಸ್ಥೆಯ ಲೋಗೋ ಹಾಗೂ ಲಂಕಾಸುರ ಚಿತ್ರದ ಟೀಸರ್ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ಖಾಸಗಿ ಹೊಟೇಲ್ನಲ್ಲಿ ನಡೆಯಿತು.
ಲಂಕಾಸುರ ಸಿನಿಮಾದಲ್ಲಿ ಪವರ್‌ಫುಲ್ ಪಾತ್ರ ಮಾಡಿರುವ ದೇವರಾಜ್ ಹಾಗು ನಟ ರವಿಶಂಕರ್ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು, ಬಳಿಕ ಮಾತನಾಡಿದ ನಟ ದೇವರಾಜ್, "ಲಂಕಾಸುರ ಚಿತ್ರದಲ್ಲಿ ವಿನೋದ್ ಜೊತೆ ಒಳ್ಳೆಯ ಪಾತ್ರ ಮಾಡಿದ್ದೇನೆ. ನಾನು ಸಿನಿಮಾಗೆ ಬಂದ ಹೊಸದರಲ್ಲಿ, ನನಗೆ ಫೈಟ್ ಮಾಡುವಾಗ ಪಂಚ್ ಹೇಗೆ ಮಾಡಬೇಕು ಅನ್ನೋದನ್ನು ಹೇಳಿಕೊಟ್ಟವರು ಪ್ರಭಾಕರ್ ಸರ್. ಆ ಬಳಿಕ ನಾನು ಅವರ ಜೊತೆ ಸಾಕಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿದೆ. ಅಜಾನುಬಾಹು ದೇಹ ಹೊಂದಿದ್ದರೂ ಅವರದು ಮಗವಿನಂತಹ ಮನಸ್ಸು" ಎಂದು ಬಾಂಧವ್ಯದ ಬಗ್ಗೆ ಮೆಲುಕು ಹಾಕಿದರು.
ಲಂಕಾಸುರ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿರುವ ರವಿಶಂಕರ್, ದೇವರಾಜ್ ಅವರ ಬಗೆಗಿನ ಕೆಲ ಅಚ್ಚರಿ ವಿಷಯಗಳನ್ನು ಹಂಚಿಕೊಂಡರು. "ದೇವರಾಜ್ ಅವರ ಮೊದಲ ತೆಲುಗು ಸಿನಿಮಾಗೆ ನಾನು ವಾಯ್ಸ್ ಡಬ್ಬಿಂಗ್ ಮಾಡಿದೆ. ಆ ಚಿತ್ರಕ್ಕೆ ದೇವರಾಜ್ ಸರ್ ಹಾಗೂ ನನಗೆ ತೆಲುಗು ಪ್ರತಿಷ್ಠಿತ ನಂದಿ ಅವಾರ್ಡ್ ಬಂದಿತ್ತು" ಎಂದು ಹೇಳಿದರು.
ವಿನೋದ್ ಪ್ರಭಾಕರ್ ಎರಡು ಶೇಡ್ನಲ್ಲಿ ಕಾಣಿಸಿಕೊಂಡಿರುವ ಲಂಕಾಸುರ ಚಿತ್ರವನ್ನು ಪ್ರಮೋದ್ ಕುಮಾರ್ ಡಿ.ಎಸ್. ನಿರ್ದೇಶಿಸುತ್ತಿದ್ದಾರೆ. ಡಿಫರೆಂಟ್ ಡ್ಯಾನಿ, ವಿನೋದ್, ಕುಂಫು ಚಂದ್ರು, ಅರ್ಜುನ್ ರಾಜ್ ಹಾಗೂ ಚೇತನ್ ಡಿಸೋಜ ಸಾಹಸ ನಿರ್ದೇಶನ ಮಾಡಿದ್ದಾರೆ. ನಾಲ್ಕು ಹಾಡುಗಳಿರುವ ಚಿತ್ರಕ್ಕೆ ವಿಜೇತ್ ಕೃಷ್ಣ ಸಂಗೀತ ನೀಡಿದ್ದಾರೆ. ನಿಶಾ ವಿನೋದ್ ಪ್ರಭಾಕರ್ ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ: 'ನಾನು ಟೈಗರ್ ಪ್ರಭಾಕರ್ ತೊಡೆ ಮೇಲೆ ಕುಳಿತುಕೊಳ್ತಿದ್ದೆ': ಕ್ರೇಜಿಸ್ಟಾರ್ ವಿ.ರವಿಚಂದ್ರನ್