ದಿವಂಗತ ರೆಬಲ್ ಸ್ಟಾರ್ ಅಂಬರೀಶ್ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಮಂಡ್ಯದ ಮರಿ ಗೌಡ ಅಭಿಷೇಕ್ ಅಂಬರೀಶ್ ಪ್ರೀತಿಸಿದ ಹುಡುಗಿ, ಫ್ಯಾಷನ್ ಡಿಸೈನರ್ ಅವಿವಾ ಬಿದ್ದಪ್ಪ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ಬ್ಯಾಚುರಲ್ ಲೈಫ್ಗೆ ಗುಡ್ ಬೈ ಹೇಳಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಇಂದು ಬೆಳಗಿನ ಶುಭ ಕರ್ಕಾಟಕ ಲಗ್ನದಲ್ಲಿ ಮಾಂಗಲ್ಯ ಧಾರಣೆ ನಡೆದಿದ್ದು, ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಪ್ರೀತಿಸಿದ ಜೋಡಿ ದಾಂಪತ್ಯ ಜೀವನಕ್ಕೆ ಮುನ್ನುಡಿ ಬರೆದಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದ ಚಾಮರ ವಜ್ರದಲ್ಲಿ ಈ ಶುಭಕಾರ್ಯ ನಡೆಯುತ್ತಿದೆ. ಒಕ್ಕಲಿಗ ಸಂಪ್ರದಾಯದಂತೆ ಸುಮಲತಾ ಅಂಬರೀಶ್ ಮಗನ ಮದುವೆಯನ್ನು ನಡೆಸಿದ್ದಾರೆ. ನಟ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮದುವೆ ಸಮಾರಂಭದ ಪೂರ್ಣ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ. ಇದೇ ಜೂನ್ 7 ರಂದು ಬೆಂಗಳೂರಿನ ಅರಮನೆಯ ತ್ರಿಪುರವಾಸಿನಿಯಲ್ಲಿ ಅದ್ದೂರಿಯಾಗಿ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಆರತಕ್ಷತೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸುಮಲತಾ ಅವರು ಈಗಾಗಲೇ ಹತ್ತು ಸಾವಿರ ಮಂದಿಗೆ ಆಮಂತ್ರಣ ನೀಡಿದ್ದಾರೆ.
ಇದನ್ನೂ ಓದಿ: ಅಂಬರೀಶ್ ಪುತ್ರನ ಮದುವೆ ಸಂಭ್ರಮ: ಅಭಿಷೇಕ್ ಹಸ್ತದಲ್ಲಿ ಭಾವಿ ಪತ್ನಿ ಹೆಸರು
ಆರತಕ್ಷತೆಯಲ್ಲಿ ಭಾಗಿಯಾಗಲಿರುವ ಖ್ಯಾತ ಸೆಲೆಬ್ರಿಟಿಗಳು: ನಾಡಿದ್ದು ನಡೆಯುವ ರಿಸೆಪ್ಶನ್ಗೆ ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್, ಮೆಗಾಸ್ಟಾರ್ ಚಿರಂಜೀವಿ, ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್, ಆರ್ಆರ್ಆರ್ ಖ್ಯಾತಿಯ ರಾಮ್ ಚರಣ್ ತೇಜಾ, ಮಾಲಿವುಡ್ ಸ್ಟಾರ್ ಮೋಹನ್ ಲಾಲ್, ನಾಗ್ ಬಾಬು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಸೇರಿದಂತೆ ಸಾಕಷ್ಟು ಸಿನಿ ಸೆಲೆಬ್ರಿಟಿಗಳು, ರಾಜಕೀಯ ಗಣ್ಯರು ಆಗಮಿಸಲಿದ್ದಾರೆ.
ಮಂಡ್ಯದಲ್ಲಿ ಜೂ.16ಕ್ಕೆ ಔತಣಕೂಟ: ಇನ್ನೂ ಜೂನ್ 16 ಕ್ಕೆ ಮಂಡ್ಯದ ಮದ್ದೂರಿನ ಗೆಜ್ಜಲಗೆರೆ ಗ್ರಾಮದಲ್ಲಿ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಬೀಗರ ಔತಣಕೂಟವನ್ನು ಹಮ್ಮಿಕೊಳ್ಳಲಾಗಿದೆ. ಸುಮಾರು ಒಂದು ಲಕ್ಷ ಮಂದಿಗೆ ಔತಣಕೂಟ ಏರ್ಪಾಡು ಮಾಡಲಾಗಿದೆ. ವಿಶೇಷವಾಗಿ ಅಂಬರೀಶ್ ಅಭಿಮಾನಿಗಳಿಗೆ ಮುಕ್ತ ಅವಕಾಶ ಇದೆ. ಇದರ ಜೊತೆಗೆ ಅಭಿಷೇಕ್ ಮತ್ತು ಅವಿವಾ ಕುಟುಂಬಸ್ಥರು, ಸ್ನೇಹಿತರು, ಸಂಬಂಧಿಕರು ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಳ್ಳಲಿದ್ದಾರೆ.
ಅಂಬಿ ಕನಸಿನಂತೆ ನಡೆಯುತ್ತಿರುವ ಶುಭಕಾರ್ಯ: ಅಂಬರೀಶ್ ಕನಸಿನಂತೆಯೇ ಮದುವೆ ಕಾರ್ಯಗಳು ನಡೆಯುತ್ತಿದೆ. ಅಂಬಿ ಹುಟ್ಟೂರಿನಲ್ಲೇ ಅಭಿಷೇಕ್ ಮದುವೆಯ ಬೀಗರ ಔತಣಕೂಟ ಮಾಡಬೇಕು ಎಂಬುದು ರೆಬಲ್ ಸ್ಟಾರ್ ಆಸೆಯಾಗಿತ್ತು. ಅದರಂತೆ ಅಂಬರೀಶ್ ಕನಸನ್ನು ಪತ್ನಿ ಸುಮಲತಾ ಮತ್ತು ಪುತ್ರ ಅಭಿಷೇಕ್ ನನಸು ಮಾಡುತ್ತಿದ್ದಾರೆ. ಇನ್ನು ಅಭಿಷೇಕ್ ಅಮರ್ ಸಿನಿಮಾ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.
ಇದನ್ನೂ ಓದಿ: 'ಸತ್ಯಪ್ರೇಮ್ ಕಿ ಕಥಾ'.. ನಾಳೆ ಬಿಡುಗಡೆಯಾಗಲಿದೆ 2023ರ ಬಹುನಿರೀಕ್ಷಿತ ಸಿನಿಮಾದ ಟ್ರೇಲರ್