ಬೆಂಗಳೂರು: "ಯಾರು ಕಾಟೇರ ಸಿನಿಮಾ ಪೈರಸಿ ಮಾಡುತ್ತಿದ್ದಾರೋ ಅಂಥವರಿಗೆ ನಮ್ಮ ಕಡೆಯಿಂದ ಸ್ಪೆಷಲ್ ಟ್ರೀಟ್‌ಮೆಂಟ್ ಇದೆ" ಎಂದು ನಟ ದರ್ಶನ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. 'ಕಾಟೇರ' ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆಯುತ್ತಿದೆ. ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಖುಷಿಯನ್ನು ಚಿತ್ರತಂಡ ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ಹಂಚಿಕೊಂಡಿತ್ತು. ನಟ ದರ್ಶನ್, ನಿರ್ದೇಶಕ ತರುಣ್ ಸುಧೀರ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಶ್ರುತಿ, ಕುಮಾರ ಗೋವಿಂದ್, ರವಿ ಚೇತನ್, ಅವಿನಾಶ್, ಸಂಭಾಷಣೆಕಾರ ಮಾಸ್ತಿ ಮಂಜು, ಕ್ಯಾಮರಾಮ್ಯಾನ್ ಸುಧಾಕರ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ಕಥೆಗಾರ ಜಡೇಶ್ ಹಂಪಿ ಸೇರಿದಂತೆ ಹಲವರು ಇದ್ದರು.
ಬೆಳ್ಳಿ ತೆರೆ ಮೇಲೆ ಕಾಟೇರನಾಗಿ ಅಬ್ಬರಿಸಿರುವ ದರ್ಶನ್ ಮಾತನಾಡಿ, "ನಾನು ನಮ್ಮ ಭಾಷೆ, ನಮ್ಮ ಜನ ಹಾಗು ನಮ್ಮ ನೆಲಕ್ಕೋಸ್ಕರ ಸಿನಿಮಾ ಮಾಡುತ್ತೇನೆ. ಇವತ್ತು ಈ ಸಿನಿಮಾ ಇಷ್ಟು ದೊಡ್ಡ ಮಟ್ಟಕ್ಕೆ ಸಕ್ಸಸ್ ಆಗಲು ಇಡೀ ಚಿತ್ರತಂಡ ಕಾರಣ. ಚಿತ್ರದಲ್ಲಿ ಒಂದು ಮಟ್ಟಿಗೆ ಅಭಿನಯ ಮಾಡಿದ್ದೀನಿ, ಅದು ನನ್ನ ಅಭಿಮಾನಿಗಳಿಗೆ ಇಷ್ಟವಾಗಿರುವುದು ಖುಷಿ ಕೊಟ್ಟಿದೆ. ನಾನು ಪ್ಯಾನ್ ಇಂಡಿಯಾ ಸಿನಿಮಾ ಮಾಡಿಲ್ಲ. ನಮ್ಮ ಮಣ್ಣಿನ ಸೊಗಡಿನ ಚಿತ್ರ ಮಾಡಿದ್ದೇನೆ" ಎಂದರು.
ಬಳಿಕ ಚಿತ್ರತಂಡ ಕೇಕ್ ಕಟ್ ಮಾಡುವ ಮೂಲಕ ಯಶಸ್ಸಿನ ಸಂಭ್ರಮ ಆಚರಿಸಿತು. "ನನ್ನ ಪ್ರಕಾರ ಸಿನಿಮಾ ಸಕ್ಸಸ್ ಅಂದರೆ ಹಣ ಹಾಕಿರುವ ನಿರ್ಮಾಪಕ ಮೊದಲು ಸೇಫ್ ಆಗಬೇಕು. ಆಗ ಮತ್ತಷ್ಟು ಸಿನಿಮಾಗಳನ್ನು ಮಾಡಲು ಸಾಧ್ಯವಾಗುತ್ತದೆ" ಎಂದು ದರ್ಶನ್ ಹೇಳಿದರು.
ಕಾಟೇರ ನಾಲ್ಕು ದಿನಕ್ಜೆ 50 ಕೋಟಿ ರೂ ಕ್ಲಬ್ ಸೇರಿದ ಚಿತ್ರವಾಗಿ ಹೊರಹೊಮ್ಮಿದೆ. ರಾಬರ್ಟ್ ಚಿತ್ರದ ಬಳಿಕ ದರ್ಶನ್ ಹಾಗು ನಿರ್ದೇಶಕ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಿರುವ ಕಾಟೇರ 1970ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಮಾಲಾಶ್ರೀ ಮಗಳು ಆರಾಧನಾ ರಾಮ್ ಈ ಚಿತ್ರದ ನಾಯಕಿ. ತೆಲುಗು ನಟ ಜಗಪತಿ ಬಾಬು, ವಿನೋದ್ ಆಳ್ವಾ, ಅವಿನಾಶ್, ಕುಮಾರ ಗೋವಿಂದ್, ವೈಜನಾಥ್ ಬಿರಾದಾರ್, ಶ್ರುತಿ ಪದ್ಮಾವಸಂತಿ, ಮಾಸ್ಟರ್ ಲೋಹಿತ್ ಮುಂತಾದವರು ನಟಿಸಿದ್ದಾರೆ. ಜಡೇಶ್ ಕಥೆ ಬರೆದಿದ್ದು, ಮಾಸ್ತಿ ಮಂಜು ಸಂಭಾಷಣೆ ಬರೆದಿದ್ದಾರೆ.
ಇದನ್ನೂ ಓದಿ: ಕರಾವಳಿ ಸಿನಿಮಾಕ್ಕಾಗಿ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡ ನಟ ಪ್ರಜ್ವಲ್ ದೇವರಾಜ್