ಮಂಡ್ಯ: ಇತ್ತೀಚೆಗೆ ಹಸೆಮಣೆ ಏರಿದ್ದ ನಟ ಅಭಿಷೇಕ್ ಅಂಬರೀಷ್ -ಅವಿವಾ ಬಿದ್ದಪ್ಪ ಅವರ ಮದುವೆ ಬೀಗರ ಊಟವನ್ನು ಇಂದು ಮಂಡ್ಯದಲ್ಲಿ ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ಹಿರಿಯ ನಟ ರೆಬೆಲ್ ಸ್ಟಾರ್ ದಿ. ಅಂಬರೀಷ್ ಅವರಿಗೆ ತಮ್ಮ ಅಭಿಮಾನಿ ದೇವರುಗಳಿಗೆ ಭರ್ಜರಿಯಾಗಿ ಊಟ ಹಾಕಿಸಬೇಕು ಎನ್ನುವ ಕನಸಿತ್ತು. ಆ ಕನಸು ಈಗ ಮಗ ಅಭಿಷೇಕ್ ಅಂಬರೀಷ್ ಅವರ ಮದುವೆ ಬೀಗರೂಟದ ಮೂಲಕ ನೆರವೇರಿದೆ.
ಅದರಂತೆಯೇ ಇಂದು ಅಭಿಷೇಕ್ ಅಂಬರೀಶ್ ತಮ್ಮ ಬೀಗರೂಟವನ್ನು ತಂದೆಯ ಹುಟ್ಟೂರಿನಲ್ಲಿ ಅದ್ಧೂರಿಯಾಗಿ ವ್ಯವಸ್ಥೆ ಮಾಡಿದ್ದರು. ಮಗನ ಮದ್ವೆಗಾಗಿ ಸ್ವರ್ಗವನ್ನೇ ಧರೆಗಿಳಿಸಿದ್ದರು ಸುಮಲತಾ ಅಂಬರೀಶ್. ಅಂಬಿ ಅಸೆಯಂತೆ ಇಂದು ಮಂಡ್ಯದಲ್ಲಿ ಅಭಿಮಾನಿಗಳಿಗಾಗಿಯೇ ಮಗನ ಬೀಗರ ಔತಣಕೂಟವನ್ನು ಮೀಸಲಿಟ್ಟಿದ್ದರು. ಬೆಲೆ ಕಟ್ಟಲಾಗದ ಅಭಿಮಾನಿಗಳಿಗಾಗಿ ಭರ್ಜರಿ ಬಾಡೂಟ ಹಾಕಿಸಲು ಪಕ್ಕಾ ಪ್ಲ್ಯಾನ್ ಮಾಡಿದ್ದ ಸುಮಲತಾ ತಮ್ಮ ಪ್ಲ್ಯಾನ್ನಂತೆಯೇ 50 ಎಕರೆ ಜಾಗದಲ್ಲಿ ಅದ್ಧೂರಿಯಾಗಿ ಪೆಂಡಾಲ್ ಹಾಕಿಸಿ, 50 ಸಾವಿರ ಜನರಿಗೆ ಬಗೆಬಗೆಯ ಬಾಡೂಟದ ವ್ಯವಸ್ಥೆ ಮಾಡಿದ್ದರು.
ಅಭಿಮಾನಿ ದೇವರುಗಳನ್ನು ಪ್ರೀತಿಯಿಂದ ಆಹ್ವಾನಿಸಿದ್ದರು. ಅಂಬಿ ಅಂದ್ರೆ ಅಂದು ಇಂದೂ ಒಂದೇ ಅಭಿಮಾನ ಹೊಂದಿರುವ ಅಭಿಮಾನಿಗಳು ನೆಚ್ಚಿನ ನಟನ ಮಗನ ಔತಣಕೂಟಕ್ಕೆ ಬಹಳ ಹುಮ್ಮಸ್ಸಿನಿಂದಲೇ ಆಗಮಿಸಿದ್ದರು. ಅಂಬಿಗೆ ಇಷ್ಟವಾದ ಮಟನ್ ಬಿರಿಯಾನಿ, ಬೋಟಿ ಗೊಜ್ಜು, ನಾಟಿಕೋಳಿ ಸಾರು, ಕಬಾಬ್ ಹೀಗೆ ಬಗೆಬಗೆ ನಾನ್ ವೆಜ್ ಡಿಶ್ ರೆಡಿ ಮಾಡಿಸಿದ್ದರು. ಅಲ್ಲದೆ ಅಭಿ ಮಡದಿ ಸಮೇತ ಬಂದು ಪ್ರೀತಿಯ ಆಹ್ವಾನಕ್ಕೆ ಸೇರಿದ್ದ ಜನಸಸಾಗರಕ್ಕೆ ಕೈಮುಗಿದು ಕೃತಜ್ಞತೆ ಅರ್ಪಿಸಿದ್ದಾರೆ.
ಬಾಡೂಟಕ್ಕಾಗಿ ಮಂಡ್ಯ ಜಿಲ್ಲೆಯಲ್ಲದೇ ಮೈಸೂರು, ರಾಮನಗರ, ಬೆಂಗಳೂರು, ಬೆಳಗಾಂ, ಚಿತ್ತದುರ್ಗ ಸೇರಿದಂತೆ ಹಲವಾರು ಜಿಲ್ಲೆಗಳಿಂದ ಅಭಿಮಾನಿಗಳು ಆಗಮಿಸಿದ್ದು ವಿಶೇಷ. ಇನ್ನು ಮಹಿಳೆಯರಂತು ಅಂಬರೀಶ್ ಅಣ್ಣನವರ ಮಗನ ಔತಣಕೂಟವೆಂದು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಸೇರಿದಂತೆ ಅನೇಕ ಘಟಾನುಘಟಿ ನಾಯಕರು ಔತಣ ಕೂಟಕ್ಕೆ ಆಗಮಿಸಿದ್ದರು. ಅಭಿಮಾನಿಯೊಬ್ಬ ತನ್ನ ಬೆಲೆ ಬಾಳುವ ಎತ್ತಿಗೆ ಶೃಂಗಾರ ಮಾಡಿ ಅಂಬರೀಶ್- ಸುಮಲತಾ ಫೋಟೋ ಅಳವಡಿಸಿ ಎಲ್ಲರ ಗಮನ ಸೆಳೆದಿದ್ದರು.
ಸಾವಿರಾರು ಸಂಖ್ಯೆಯಲ್ಲಿ ಜನ ಬಂದಿದ್ದರಿಂದ ಊಟ ಬಡಿಸಲು ತೊಂದರೆಯಾಗಿದ್ದು, ಆ ಸಮಯ ಇದ್ದಕ್ಕಿದ್ದಂತೆ ಜನ ರೊಚ್ಚಿಗೆದ್ದು ಅಡುಗೆ ಸ್ಥಳಕ್ಕೆ ತೆರಳಿ ಊಟವನ್ನು ಚೆಲ್ಲಾಪಿಲ್ಲಿ ಮಾಡಿದ ಘಟನೆ ನಡೆದಿದೆ. ಈ ಸಮಯ ಪೊಲೀಸರು ಜನರನ್ನು ಚದುರಿಸಲು ಹರಸಾಹಸ ಪಡಬೇಕಾಯಿತು.
ಅದ್ಧೂರಿ ಜೊತೆಗೆ ವ್ಯವಸ್ಥೆಯಲ್ಲಿ ಸಣ್ಣ ಲೋಪದೋಷ: ಮದ್ದೂರಿನ ಗೆಜ್ಜಲಗೆರೆ ಬಳಿಯ ವಿಶಾಲ ಪ್ರದೇಶದಲ್ಲಿ ಅಂಬಿ ಕುಟುಂಬ ಅದ್ಧೂರಿ ಬೀಗರ ಊಟ ಆಯೋಜನೆ ಮಾಡಿದ್ದರು. ಬೀಗರ ಊಟ ಅದ್ಧೂರಿಯಾಗಿ ನಡೆಯುವುದರ ಜೊತೆಗೆ ಊಟದ ವ್ಯವಸ್ಥೆ ಮಾಡೋದ್ರಲ್ಲಿ ಕೆಲವೊಂದು ಲೋಪದೋಷಗಳು ಉಂಟಾಗಿದ್ದವು. ಸುಮಲತಾ ಅಂಬರೀಶ್ ಹಾಗು ಅಭಿಷೇಕ್ ಅಂಬರೀಶ್ 50 ಸಾವಿರ ಅಭಿಮಾನಿಗಳನ್ನು ಔತಣಕೂಟಕ್ಕೆ ಆಹ್ವಾನ ಮಾಡಿದ್ದರು. ಆದರೆ ಮಂಡ್ಯದ ಜನತೆ ಅಲ್ಲದೆ ಮದ್ದೂರು, ಪಾಂಡವಪುರದ ಸುತ್ತಮುತ್ತಲಿನ ಹಳ್ಳಿಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಬಂದ ಕಾರಣ ಊಟ ಸಿಗದೆ, ಅಭಿಮಾನಿಗಳು ಸುಮಲತಾ ಹಾಗು ಅಭಿಷೇಕ್ ಅಂಬರೀಶ್ ವಿರುದ್ಧ ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಅಷ್ಟೇ ಅಲ್ಲ, ಒಂದಷ್ಟು ಜನ ಅಡುಗೆ ಮನೆಗೆ ನುಗ್ಗಿದ ಕಾರಣ ಕೊನೇ ಕ್ಷಣದಲ್ಲಿ ಒಂದಷ್ಟು ಜನರಿಗೆ ಊಟ ಸಿಗದಂತೆಯೂ ಆಗಿದೆ.
ಸುದ್ದಿಗೋಷ್ಠಿ ಮಾಡಿದ ಅಭಿಷೇಕ್- ಅವಿವಾ: ನಿರೀಕ್ಷೆಗೂ ಮೀರಿ ಬಂದ ಜನರನ್ನು ಕಂಟ್ರೋಲ್ ಮಾಡಲಾಗದೆ ಹತಾಶೆಯಿಂದ ಕೊನೇ ಕ್ಷಣದಲ್ಲಿ ಅಭಿ ಮನೆಗೆ ವಾಪಾಸ್ಸಾಗಿದ್ದರು. ಈ ಬಗ್ಗೆ ಅಭಿಷೇಕ್ ಅಂಬರೀಶ್ ಬೆಂಗಳೂರಿನ ತಮ್ಮ ಜೆ.ಪಿ ನಗರದ ನಿವಾಸದಲ್ಲಿ ಮಾಧ್ಯಮಗೋಷ್ಠಿ ನಡೆಸಿದ್ದು, ತಮ್ಮ ಬೀಗರ ಔತಣಕೂಟದಲ್ಲಿ ಆದ ಸಮಸ್ಯೆಗಳ ಬಗ್ಗೆ ಮಾತನಾಡಿದರು.
ಬೀಗರ ಔತಣಕೂಟಕ್ಕೆ ಸಹಕರಿಸಿದವರು, ಆಗಮಿಸಿದವರಿಗೆ ಧನ್ಯವಾದ ತಿಳಿಸಿದರು. ನಮಗೆ ತಿಳಿಯದೆ ಆದ ತಪ್ಪಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದು ಅಭಿಮಾನಿಗಳಲ್ಲಿ ಕೈ ಮುಗಿದು ಅಭಿ ಕ್ಷಮೆಯಾಚಿಸಿದ್ದಾರೆ. ಅಲ್ಲದೆ ಯಾರಿಗೂ ಊಟ ಇಲ್ಲದೆ ಕಳುಹಿಸುವ ಉದ್ದೇಶ ನಮ್ಮದಲ್ಲ. ಕೆಲವು ಕಾಣದ ಕೈಗಳು ಜನರ ಕಂಟ್ರೋಲ್ ತಪ್ಪಿಸಿದ ಕಾರಣ ಒಂದಷ್ಟು ಗೊಂದಲ ಉಂಟಾಗಿದೆ. ಒಂದು ವೇಳೆ ಉದ್ದೇಶಪೂರ್ವಕವಾಗಿ ಮಾಡಿದ್ರೆ ದೇವರು ಅವರಿಗೆ ಒಳ್ಳೆದು ಮಾಡಲಿ ಎಂದು ನಗುತ್ತಲೇ ಉತ್ತರಿಸಿದರು.
ಒಟ್ಟಿನಲ್ಲಿ ಇಂದು ಮಂಡ್ಯದ ಇತಿಹಾಸದಲ್ಲೇ ದೊಡ್ಡ ಬೀಗರ ಔತಣಕೂಟ ನೇರವೇರಿದ್ದು, ಚಿಕ್ಕ ಪುಟ್ಟ ತಪ್ಪುಗಳ ನಡುವೆಯೂ ಅಂಬಿ ಪುತ್ರನ ಬೀಗರ ಔತಣಕೂಟ ಅದ್ಧೂರಿಯಾಗಿಯೇ ನೇರವೇರಿದೆ. ಒಟ್ಟಾರೆ ಅಭಿಷೇಕ್ ಅಂಬರೀಶ್ ಅವರ ಮದುವೆಯ ಬೀಗರ ಔತಣಕೂಟ ಮಂಡ್ಯ ಜನ ಅಂಬರೀಶ್ ಮೇಲೆ ಇಟ್ಟಿರೋ ಪ್ರದರ್ಶನಕ್ಕೆ ಮತ್ತೊಮ್ಮೆ ಸಾಕ್ಷಿಯಾಯ್ತು. ಒಟ್ಟಾರೆ, ಇಂದಿನ ಬಾಡೂಡ ರಾಜಕೀಯ ವಲಯದಲ್ಲೂ ಎಲ್ಲರ ಹುಬ್ಬೇರುವಂತೆ ಮಾಡಿದ್ದಂತೂ ಸುಳ್ಳಲ್ಲ.
ಇದನ್ನೂ ಓದಿ: ಮಂಡ್ಯದಲ್ಲಿ ಅಭಿಷೇಕ್ ಅಂಬರೀಶ್- ಅವಿವಾ ಅದ್ಧೂರಿ ಬೀಗರೂಟಕ್ಕೆ ಜನಸಾಗರ: ಊಟದ ಮೆನು ಹೇಗಿತ್ತು ಗೊತ್ತಾ?