ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಹೊಸಬರ ಸಿನಿಮಾಗಳೇ ಹೆಚ್ಚು ಬರುತ್ತಿದೆ. ಪ್ರೇಕ್ಷಕರಿಗೆ ಹೊಸ ಮುಖಗಳ ಪರಿಚಯವಾಗುತ್ತಿದೆ. ಒಂದೊಳ್ಳೆ ಕಂಟೆಂಟ್ ಜೊತೆ ಬರುವ ಈ ಸಿನಿಮಾಗಳು ನೋಡುಗರನ್ನು ಆಕರ್ಷಿಸುತ್ತಿದೆ. ಇತ್ತೀಚೆಗೆ ತೆರೆ ಕಂಡ ಹೊಸಬರ 'ಅಭಿರಾಮಚಂದ್ರ' ಚಿತ್ರಕ್ಕೆ ಪ್ರೇಕ್ಷಕರಿಂದ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಅಕ್ಟೋಬರ್ 6ರಂದು ರಾಜ್ಯಾದ್ಯಂತ ಬಿಡುಗಡೆಯಾದ ಸಿನಿಮಾ ಯಶಸ್ವಿಯಾಗಿ 25 ದಿನ ಪೂರೈಸಿದ್ದು, ಇಡೀ ಚಿತ್ರತಂಡದ ಮುಖದಲ್ಲಿ ಮಂದಹಾಸ ಮೂಡಿದೆ.
ಚಿತ್ರದಲ್ಲಿ ರಥ ಕಿರಣ್, ಸಿದ್ದು ಮೂಲಿಮನಿ, ವತ್ತು ನಾಟ್ಯರಂಗ, ಶಿವಾನಿ ರೈ ಮುಖ್ಯಭೂಮಿಕೆಯಲ್ಲಿದ್ದಾರೆ. ಕರಾವಳಿ ಭಾಗದ ಕಲಾ ಪ್ರೇಮಿಗಳ ಸಹಕಾರದೊಂದಿಗೆ 'ಅಭಿರಾಮಚಂದ್ರ' ಸಿನಿಮಾದ ಸಪ್ತೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಏಳು ದಿನ ನಡೆಯುವ ಈ ಉತ್ಸವದಲ್ಲಿ ದೀಪ ಬೆಳಗಿಸುವ ಮೂಲಕ ಪ್ರೇಕ್ಷಕರು ಸಿನಿಮಾ ವೀಕ್ಷಣೆ ಮಾಡುತ್ತಿದ್ದಾರೆ. ಈಗಾಗಲೇ ಮೂರು ದಿನಗಳು ಕಳೆದಿದ್ದು, 'ಅಭಿರಾಮಚಂದ್ರ' ಸಪ್ತೋತ್ಸವಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಸಿನಿರಸಿಕರು ಚಿತ್ರ ಮೆಚ್ಚಿಕೊಂಡಿದ್ದಾರೆ.
ವಸ್ತು, ಪ್ರೀತಿ ಇರಲಿ, ಎಮೋಷನ್ ಅಥವಾ ಆಕ್ಷನ್ ಇರಲಿ ಆ ವಸ್ತುವನ್ನು ಗಟ್ಟಿಯಾಗಿ ಹಿಡಿದು ಅದರ ಸುತ್ತ ಮುತ್ತ ಒಂದಿಷ್ಟು ಕಲರ್ಫುಲ್ ಅಂಶಗಳನ್ನು ಹದವಾಗಿ ಬೆರೆಸಿ ಪ್ರೇಕ್ಷಕರ ಬಳಿ ತೆಗೆದುಕೊಂಡು ಹೋಗಿ ಯಶಸ್ವಿಯಾಗುವುದು ಸುಲಭವಲ್ಲ. ಈ ಪ್ರಯತ್ನದಲ್ಲಿ ನಿರ್ದೇಶಕ ನಾಗೇಂದ್ರ ಗಾಣಿಗ ಯಶಸ್ವಿಯಾಗಿದ್ದಾರೆ. ಇದು ಅವರು ಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿರುವ ಮೊದಲ ಸಿನಿಮಾ ಅನ್ನೋದು ಮತ್ತೊಂದು ವಿಶೇಷ. ಇವರು ಕಿರಿಕ್ ಪಾರ್ಟಿ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದರು.
ಇದನ್ನೂ ಓದಿ: ಗರಡಿ ಸಿನಿಮಾ ನೋಡಿ ನಮ್ಮಂಥ ಕಲಾವಿದರಿಗೆ ಅನ್ನದಾತರಾಗಿ: ಅಭಿಮಾನಿಗಳಿಗೆ ದರ್ಶನ್ ಮನವಿ
ರಥ ಕಿರಣ್, ಸಿದ್ದು ಮೂಲಿಮನಿ, ವತ್ತು ನಾಟ್ಯರಂಗ, ಶಿವಾನಿ ರೈ ಇಡೀ ಕಥೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದು, ಇವರ ಅಭಿನಯಕ್ಕೂ ಮೆಚ್ಚುಗೆ ಸಿಕ್ಕಿದೆ. ವೀಣಾ ಸುಂದರ್, ಸುಂದರ್, ಎಸ್.ನಾರಾಯಣ್, ಪ್ರಕಾಶ್ ತುಮ್ಮಿನಾಡು ಕೂಡ 'ಅಭಿರಾಮಚಂದ್ರ' ನೆರವಾಗಿದ್ದಾರೆ. ರವಿ ಬಸ್ರೂರು ಮ್ಯೂಸಿಕ್ ಕುಂದಾಪುರದ ವಾತಾವರಣಕ್ಕೆ ರಂಗು ತುಂಬಿದ್ದು, ಸಂದೀಪ್ ವಲ್ಲೂರಿ ಛಾಯಾಗ್ರಹಣ, ಸುರೇಶ್ ಆರುಮುಗಂ ಸಂಕಲನ ಚಿತ್ರಕ್ಕಿದೆ.
'ಅಲೆಯಾಗಿ ಬಾ...' ಎಂಬ ಆಲ್ಬಂ ಸಾಂಗ್ ಮೂಲಕ ಗಮನ ಸೆಳೆದ ಯುವ ನಟ ರಥ ಕಿರಣ್. ಈ ಆಲ್ಬಂ ಸಾಂಗ್ ಸಕ್ಸಸ್ ನಂತರ ರಥ ಕಿರಣ್ ಈಗ ಪೂರ್ಣ ಪ್ರಮಾಣದ ಹೀರೋ ಆಗಿ ಚಂದವನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಎ.ಜಿ.ಎಸ್ ಎಂಟರ್ಟೈನ್ಮೆಂಟ್ ಹಾಗೂ ರವಿ ಬಸ್ರೂರು ಮ್ಯೂಸಿಕ್ ಮತ್ತು ಮೂವೀಸ್ ಬ್ಯಾನರ್ ನಡಿ ಎ.ಜಿ. ಸುರೇಶ್ ಹಾಗೂ ಮಲ್ಲೇಶ್ 'ಅಭಿರಾಮಚಂದ್ರ' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ: ಎಸ್ಆರ್ಕೆ ಬರ್ತ್ಡೇ: ಅದ್ಭುತ ನಟನೆ, ಕಥೆಯ ಹೊರತಾಗಿಯೂ ಬಾಕ್ಸ್ ಆಫೀಸ್ನಲ್ಲಿ ಮಂಕಾದ ಶಾರುಖ್ ಸಿನಿಮಾಗಳಿವು!