ಮುಂಬೈ (ಮಹಾರಾಷ್ಟ್ರ): 2001 ರಲ್ಲಿ ವಿಶ್ವಾದ್ಯಂತ ಸದ್ದು ಮಾಡಿದ ಚಿತ್ರ ಎಂದರೆ ಅದು ಲಗಾನ್. ನಟ ಆಮಿರ್ ಖಾನ್ ಅವರ ಅಭಿನಯದ 'ಲಗಾನ್' 22 ನೇ ವರ್ಷ ಪೂರೈಸಿದೆ. ಬಾಲಿವುಡ್ ಅಂಗಳದಲ್ಲಿ ಹಾಗೂ ದೇಶಾದ್ಯಂತ ಭಾರಿ ಸದ್ದು ಮಾಡಿ, ವಿದೇಶಿ ಅಂಗಳದಲ್ಲಿ ಮಿಂಚಿದ ಚಿತ್ರವಿದು.
22 ವರ್ಷಗಳ ಹಿಂದಿನ ಸುಂದರ ಸಿನಿಮಾದ ಲಗಾನ್ ಪೋಸ್ಟರ್ ಅನ್ನು ಆಮೀರ್ ಖಾನ್ ಪ್ರೊಡಕ್ಷನ್ಸ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. "ಲಗಾನ್' ಗೆ ನಾಸ್ಟಾಲ್ಜಿಕ್ ಥ್ರೋಬ್ಯಾಕ್, 22 ವರ್ಷಗಳ ಮೈಲಿಗಲ್ಲನ್ನು ದಾಟಿದ ಚಿತ್ರವಿದು. ಭಾರತೀಯ ಚಿತ್ರರಂಗದ ಅಪ್ರತಿಮ ಭಾಗವನ್ನಾಗಿ ಮಾಡಿದ ಕ್ಷಣಗಳು‘‘ ಎಂದು ಅಡಿ ಬರಹ ಬರೆದು ಪೋಸ್ಟ್ ಮಾಡಲಾಗಿದೆ.
ಒಂದು ಫೋಟೋದಲ್ಲಿ ಅಮೀರ್ ಖಾನ್ ನಿರ್ದೇಶಕರೊಂದಿಗೆ ಮಾತನಾಡುತ್ತಿರುವುದನ್ನು ಕಾಣಬಹುದು. ಇತರ ಫೋಟೋಗಳಲ್ಲಿ, ನಾವು ನಟರಾದ ಗ್ರೇಸಿ ಸಿಂಗ್, ರಾಚೆಲ್ ಶೆಲ್ಲಿ, ಆದಿತ್ಯ ಲಖಿಯಾ ಮತ್ತು ಯಶಪಾಲ್ ಶರ್ಮಾ ಅವರನ್ನು ಸಹ ನೋಡಬಹುದು. ಪ್ರೊಡಕ್ಷನ್ ಹೌಸ್ ಪೋಸ್ಟ್ ಅನ್ನು ಹಂಚಿಕೊಂಡ ಕೂಡಲೇ, ಅಭಿಮಾನಿಗಳು ಕಾಮೆಂಟ್ಗಳ ಸುರಿಮಳೆಯನ್ನೇ ಹರಿಸಿದರು.
ಅಭಿಮಾನಿಗಳಿಂದ ಭಿನ್ನ - ವಿಭಿನ್ನ ಕಾಮೆಂಟ್ಗಳ ಸುರಿಮಳೆ: ಪ್ರೀತಿಯ ಎಮೋಜಿಗಳ ಮೂಲಕ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದರು. "ಲಗಾನ್ ಅತ್ಯುತ್ತಮ ಚಲನಚಿತ್ರಗಳಲ್ಲಿ ಒಂದಾಗಿದೆ" ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನಿ ಹೀಗೆ ಬರೆದುಕೊಂಡಿದ್ದಾರೆ, "ಅಭಿನಂದನೆಗಳು 22 ವರ್ಷಗಳ ಬಳಿಕವೂ ಲಗಾನ್ ಚಿತ್ರವು ತುಂಬಾ ಅದ್ಭುತವಾಗಿದೆ "
ಇನ್ನೊಬ್ಬ ಅಭಿಮಾನಿ "ಮೊಘಲ್ ಇ ಆಜಮ್ ಮತ್ತು ಮದರ್ ಇಂಡಿಯಾದಂತಹ ಕ್ಲಾಸಿಕ್ ಚಲನಚಿತ್ರ" ಎಂದು ಕಾಮೆಂಟ್ ಮಾಡಿದ್ದಾರೆ. 'ಲಗಾನ್', ಅಶುತೋಷ್ ಗೋವಾರಿಕರ್ ನಿರ್ದೇಶಿಸಿದ ಬಾಲಿವುಡ್ ಚಲನಚಿತ್ರವು 2001 ರಲ್ಲಿ ಬಿಡುಗಡೆ ಆಗಿತ್ತು.
ಇದಾಗಿತ್ತು ಚಿತ್ರದ ಕಥೆ: 19 ನೇ ಶತಮಾನದ ಬ್ರಿಟಿಷ್ ದಬ್ಬಾಳಿಕೆಯನ್ನು ಹೇಳುವ ಚಿತ್ರವಿದು, ಚಲನಚಿತ್ರದ ಕಥೆಯು ಚಂಪನೇರ್ ಎಂಬ ಸಣ್ಣ ಹಳ್ಳಿಯ ಸುತ್ತ ಸುತ್ತುತ್ತದೆ. ಇದು ಬ್ರಿಟಿಷ್ ಅಧಿಕಾರಿಗಳು ವಿಧಿಸುವ ಅತಿಯಾದ ತೆರಿಗೆಗಳಿಂದ ಗ್ರಾಮಸ್ಥರು ಬೇಸರಗೊಂಡ ಸಂದರ್ಭವನ್ನು ಪ್ರತಿಬಿಂಬಿಸಿತ್ತು.
ಬ್ರಿಟಿಷ್ ಅಧಿಕಾರಿ ಕ್ಯಾಪ್ಟನ್ ಆಂಡ್ರ್ಯೂ ರಸ್ಸೆಲ್ ಪ್ರಸ್ತಾಪಿಸಿದ ವಿಶಿಷ್ಟ ಸವಾಲು ಸ್ವೀಕರಿಸಿ, ತನ್ನ ಸಹ ಗ್ರಾಮಸ್ಥರನ್ನು ಮುನ್ನಡೆಸುವ ಯುವ ಮತ್ತು ಉತ್ಸಾಹಭರಿತ ಹಳ್ಳಿಗನಾದ ಭುವನ್ ಅವರ ಕಥೆಯಾಗಿದೆ. ಆಮೀರ್ ಖಾನ್ ಇಲ್ಲಿ ಭುವನ್ ಪಾತ್ರದಾರಿಯಾಗಿ ಮನೋಜ್ಞ ಅಭಿನಯ ನೀಡಿದ್ದಾರೆ. ತೆರಿಗೆ ಹೊರೆಯನ್ನು ತಗ್ಗಿಸುವ ಪ್ರಯತ್ನದಲ್ಲಿ, ಭುವನ್ ಮತ್ತು ಹಳ್ಳಿಗರು ಬ್ರಿಟಿಷ್ ತಂಡದ ವಿರುದ್ಧ ಕ್ರಿಕೆಟ್ ಪಂದ್ಯಕ್ಕೆ ಅಣಿಯಾಗುತ್ತಾರೆ. ಹಳ್ಳಿಗರು ಗೆದ್ದರೆ ಮುಂದಿನ ಮೂರು ವರ್ಷಗಳವರೆಗೆ ತೆರಿಗೆಯಿಂದ ವಿನಾಯಿತಿ ನೀಡಲಾಗುವುದು, ಆದರೆ ಅವರು ಸೋತರೆ ತೆರಿಗೆ ಹೊರೆ ಮೂರು ಪಟ್ಟು ಹೆಚ್ಚಾಗುತ್ತದೆ ಎಂದು ಆಗಿನ ಬ್ರಿಟಿಷ್ ಆಡಳಿತ ಕಟ್ಟಳೆ ವಿಧಿಸಿತ್ತು.
ಕ್ರಿಕೆಟ್ ಪಂದ್ಯಕ್ಕೆ ತಯಾರಿ ನಡೆಸುತ್ತಿರುವ ಭುವನ್ ಮತ್ತು ಅವರ ತಂಡವು ಮೊದಲಿನಿಂದಲೂ ಆಟವನ್ನು ಕಲಿಯುವ ಮತ್ತು ವಿವಿಧ ಅಡೆ - ತಡೆಗಳನ್ನು ನಿವಾರಿಸುವ ಪ್ರಯಾಣವೇ ಈ ಚಲನಚಿತ್ರದ ಹೂರಣ. ಆರಂಭದಲ್ಲಿ ಕ್ರಿಕೆಟ್‌ನ ಪರಿಚಯವಿಲ್ಲದ ಹಳ್ಳಿಗರು ಕಠಿಣ ತರಬೇತಿಯ ಮೂಲಕ ತಮ್ಮ ಕೌಶಲ್ಯವನ್ನು ಅಭಿವೃದ್ಧಿಗೊಳಿಸುತ್ತಾರೆ. ಮತ್ತು ಅನುಭವಿ ಬ್ರಿಟಿಷ್ ಆಟಗಾರರ ವಿರುದ್ಧ ಸ್ಪರ್ಧಿಸುತ್ತಾರೆ.
'ಲಗಾನ್' ಹಳ್ಳಿಗರು ಬ್ರಿಟಿಷ್ ಅಧಿಕಾರಿಗಳಿಗೆ ಸವಾಲು ಹಾಕುವಾಗ ಮತ್ತು ಅವರ ಹಕ್ಕುಗಳಿಗಾಗಿ ಹೋರಾಡುವಾಗ ಅವರ ಮನೋಸ್ಥೈರ್ಯ, ಏಕತೆ ಮತ್ತು ದೃಢತೆಯನ್ನು ಚಿತ್ರದಲ್ಲಿ ಯಶಸ್ವಿಯಾಗಿ ಕಟ್ಟಿಕೊಡಲಾಗಿತ್ತು. ಈ ಚಲನಚಿತ್ರವು ಸಾಮಾಜಿಕ ಶ್ರೇಣೀಕರಣ, ಅನ್ಯಾಯ ಮತ್ತು ಸಾಮೂಹಿಕ ಶಕ್ತಿಯ ವಿಷಯಗಳನ್ನ ಪ್ರತಿಪಾದಿಸಿತ್ತು. ಇದು ಕ್ರಿಕೆಟ್ ಆಟವನ್ನು ರೂಪಕ ಯುದ್ಧಭೂಮಿಯಾಗಿ ಬಳಸಿಕೊಂಡು ಭಾರತೀಯ ಸ್ವಾತಂತ್ರ್ಯ ಹೋರಾಟದ ರೋಚಕ ಚಿತ್ರಣವನ್ನು ಪ್ರಸ್ತುತಪಡಿಸಿತ್ತು.
ಈ ಮೂಲಕ ಚಲನಚಿತ್ರವು ವಿಮರ್ಶಾತ್ಮಕ ಮೆಚ್ಚುಗೆ ಸಹ ಪಡೆದುಕೊಂಡಿತ್ತು. ವಾಣಿಜ್ಯ ಯಶಸ್ಸು ಮತ್ತು ಅಂತಾರಾಷ್ಟ್ರೀಯ ಮನ್ನಣೆಯನ್ನು ಗಳಿಸಿತ್ತು. 'ಲಗಾನ್' ಭಾರತದಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಂಡ ಚಿತ್ರವಾಗಿದೆ. ಅಭಿನಯ, ನಿರ್ದೇಶನ, ಸಂಗೀತ ಮತ್ತು ಛಾಯಾಗ್ರಹಣಕ್ಕಾಗಿ ಹೆಚ್ಚು ಮೆಚ್ಚುಗೆ ಪಡೆದುಕೊಂಡು ಗಮನ ಸೆಳೆದಿತ್ತು.
ಇದನ್ನು ಓದಿ: Project K: ಅತೀ ಶೀಘ್ರದಲ್ಲೇ 'ಪ್ರಾಜೆಕ್ಟ್ ಕೆ'ಗೆ ಕಮಲ್ ಹಾಸನ್ ಎಂಟ್ರಿ; ಶೂಟಿಂಗ್ ಡೇಟ್ ಫಿಕ್ಸ್