ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಅವರು ತಮ್ಮ ತಾಯಿ ಜೀನತ್ ಹುಸೈನ್ ಅವರಿಗೆ ಅನಾರೋಗ್ಯ ಹಿನ್ನೆಲೆ ಚೆನ್ನೈಗೆ ಸ್ಥಳಾಂತರಗೊಳ್ಳಲು ಸಜ್ಜಾಗುತ್ತಿದ್ದಾರೆ ಎಂದು ವರದಿಯಾಗಿದೆ. ಅಮೀರ್ ಖಾನ್ ಅವರಿಗೆ ತಾಯಿಯೆಂದರೆ ಪ್ರಾಣ. ಚೆನ್ನೈನಲ್ಲಿ ತಾಯಿ ಚಿಕಿತ್ಸೆ ಪಡೆಯುವ ಸಂದರ್ಭ ಅವರ ಜೊತೆಗಿರಲು ನಟ ಬಯಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಜೀನತ್ ಹುಸೈನ್ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ವರದಿಗಳ ಪ್ರಕಾರ, ನಟ ಅಮೀರ್ ಖಾನ್ ತಮ್ಮ ತಾಯಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆ ಸಮೀಪವಿರುವ ಹೋಟೆಲ್ನಲ್ಲಿ ತಂಗಲು ಉದ್ದೇಶಿಸಿದ್ದಾರೆ. ಇಂತಹ ಕಠಿಣ ಸಂದರ್ಭ ತಾಯಿ ಜೊತೆ ಇರುವ ಉದ್ದೇಶದಿಂದ ನಟ ಈ ನಿರ್ಧಾರ ಕೈಗೊಂಡಿದ್ದಾರೆ. ಈಗಾಗಲೇ ನಟ ತಮ್ಮ ಕುಟುಂಬಕ್ಕೆ ಸಂಪೂರ್ಣ ಸಮಯ ಮೀಸಲಿಟ್ಟಿದ್ದಾರೆ. ಸಿನಿಮಾಗಳಿಂದ ಸಣ್ಣ ಬ್ರೇಕ್ ಪಡೆದಿದ್ದಾರೆ. ನಟನೆ, ನಿರ್ಮಾಣ, ವೃತ್ತಿಜೀವನದಿಂದ ಕೊಂಚ ವಿರಾಮ ಪಡೆದಿರುವ ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಷ್ಟ್ ಖ್ಯಾತಿಯ ಅಮೀರ್ ಖಾನ್ ಕುಟುಂಬಕ್ಕೆ ಸಂಪೂರ್ಣ ಸಮಯ ಮೀಸಲಿಡುವುದಾಗಿ ಈವೆಂಟ್ ಒಂದರಲ್ಲಿ ತಿಳಿಸಿದ್ದರು. ಅದರಂತೆ ಇದೀಗ ತಾಯಿಗೆ ಸಂಪೂರ್ಣ ಸಮಯ ಮೀಸಲಿಡಲು ಸಜ್ಜಾಗಿದ್ದಾರೆ ಎಂದು ವರದಿಗಳು ಸೂಚಿಸಿವೆ.
ಈ ಸಾಲಿನ ಆರಂಭದಲ್ಲಿ, ಜೀನತ್ ಹುಸೈನ್ ಅವರ 89ನೇ ಹುಟ್ಟುಹಬ್ಬವನ್ನು ಅಮೀರ್ ಖಾನ್ ಕುಟುಂಬ, ಆಪ್ತ ಸ್ನೇಹಿತರು ಜೊತೆ ಸೇರಿ ಆಚರಿಸಿದ್ದರು. ಪಂಜಾಬಿ ಗಾಯಕಿ ಪ್ರತಿಭಾ ಸಿಂಗ್ ಬಾಘೆಲ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಈವೆಂಟ್ನ ಫೋಟೋಗಳನ್ನು ಹಂಚಿಕೊಂಡಿದ್ದರು. ಈವೆಂಟ್ನಲ್ಲಿ ಪಡೆದ ಪ್ರೀತಿಗೆ ಗಾಯಕಿ ಕೃತಘ್ಞತೆ ಸಲ್ಲಿಸಿದ್ದರು. ಅಮೀರ್ ಖಾನ್ ಅವರ ಸಹೋದರಿಯರಾದ ನಿಖತ್ ಮತ್ತು ಫರ್ಹತ್ ಕೂಡ ಈವೆಂಟ್ನಲ್ಲಿ ಭಾಗಿ ಆಗಿದ್ದರು. ನಟನ ಮಾಜಿ ಪತ್ನಿ ಕಿರಣ್ ರಾವ್, ಮಗಳು ಇರಾ ಖಾನ್ ಸಹ ಗಾಯಕಿ ಹಂಚಿಕೊಂಡಿರುವ ಫೋಟೋಗಳಲ್ಲಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: ಇಳಿಕೆ ಕಂಡ 'ಲಿಯೋ' ಕಲೆಕ್ಷನ್: ಮೊದಲ ದಿನ 64, ಎರಡನೇ ದಿನ 36 ಕೋಟಿ ರೂ.
ನಟ ಅಮೀರ್ ಖಾನ್ ಮುಂದಿನ ಸಿನಿಮಾ ಗಮನಿಸುವುದಾದರೆ, 'ಸಿತಾರೆ ಜಮೀನ್ ಪರ್' ಅನ್ನು ಘೋಷಿಸಿದ್ದಾರೆ. ಇದು ನಟನ 2007ರ ಹಿಟ್ ಚಿತ್ರ 'ತಾರೆ ಜಮೀನ್ ಪರ್'ನ ಮಾದರಿಯಲ್ಲಿ ಮೂಡಿ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೇ ಮೂರು ಸಿನಿಮಾಗಳನ್ನು ನಿರ್ಮಾಣ ಮಾಡಲು ಖಾನ್ ರೆಡಿಯಾಗಿದ್ದಾರೆ. ಕಿರಣ್ ರಾವ್ ನಿರ್ದೇಶನದ 'ಲಾಪತ ಲೇಡೀಸ್', ಪುತ್ರ ಜುನೈದ್ ಖಾನ್ ಅವರ ಸಿನಿಮಾ, ರಾಜ್ಕುಮಾರ ಸಂತೋಷಿ - ಸನ್ನಿ ಡಿಯೋಲ್ ಕಾಂಬಿನೇಶನ್ನ ಲಾಹೋರ್ 1947 ಸಿನಿಮಾವನ್ನು ಅಮೀರ್ ನಿರ್ಮಾಣ ಮಾಡಲಿದ್ದಾರೆ.
ಇದನ್ನೂ ಓದಿ: 'ತೆಲುಸು ಕದಾ'.. ಶ್ರೀನಿಧಿ ಶೆಟ್ಟಿ ಜನ್ಮದಿನ: 'ಕೆಜಿಎಫ್ ನಿಧಿ'ಗೆ ಶುಭಾಶಯಗಳ ಮಹಾಪೂರ
ಅಮೀರ್ ಖಾನ್ ಕೊನೆಯದಾಗಿ ಕರೀನಾ ಕಪೂರ್ ಖಾನ್ ಜೊತೆ ಲಾಲ್ ಸಿಂಗ್ ಚಡ್ಡಾದಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿತು. ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿತ ಗುರಿ ತಲುಪುವಲ್ಲಿ ಚಿತ್ರ ಹಿನ್ನೆಡೆ ಕಂಡಿತು.