ಅಮೀರ್ ಖಾನ್ ನಟನೆಯ' ಲಾಲ್ ಸಿಂಗ್ ಚಡ್ಡಾ' ಸಿನಿಮಾ ಮೊದಲ ದಿನವೇ ಮುಗ್ಗರಿಸಿದೆ. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ, ಪ್ರೇಕ್ಷಕರಿಲ್ಲದೇ ಅನೇಕ ಕಡೆಗಳಲ್ಲಿ ಶೋಗಳನ್ನು ಕ್ಯಾನ್ಸಲ್ ಮಾಡಲಾಗಿದೆ. ಆದರೆ, ಲಾಲ್ ಸಿಂಗ್ ಚಡ್ಡಾ ದೇಶಾದ್ಯಂತ ಹೆಚ್ಚಿನ ಪ್ರೇಕ್ಷಕರನ್ನು ಆಕರ್ಷಿಸುತ್ತದೆ ಎಂದು ನಟ ಅಮೀರ್ ಖಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
IMDbಯಲ್ಲಿ 4.5/10 ರೇಟಿಂಗ್: 'ಲಾಲ್ ಸಿಂಗ್ ಚಡ್ಡಾ' ಸಿನಿಮಾಕ್ಕೆ ಇಂಟರ್‌ನೆಟ್ ಮೂವಿ ಡೇಟಾಬೇಸ್ (ಐಎಂಡಿಬಿ) ಕಂಪನಿಯ ವೆಬ್‌ಸೈಟ್‌ನಲ್ಲಿ ಪ್ರಸ್ತುತ ಕೇವಲ 4.5/10 ರೇಟಿಂಗ್ ದೊರೆತಿದೆ. ವಿವಾದಿತ ಚಿತ್ರಕ್ಕೆ 55,000ಕ್ಕೂ ಹೆಚ್ಚು ಮಂದಿ ಒಂದು-ಸ್ಟಾರ್ ರೇಟಿಂಗ್ ನೀಡಿದ್ದಾರೆ.
ಸಿನಿಮಾದ ನಿರ್ಮಾಣ ಘೋಷಣೆಯಾದಾಗಿನಿಂದಲೂ ಒಂದಲ್ಲ ಒಂದು ಕಾರಣಕ್ಕೆ ವಿವಾದಕ್ಕೆ ಒಳಗಾಗುತ್ತಲೇ ಬಂದಿದೆ. ಸಿನಿಮಾವನ್ನು ಬಹಿಷ್ಕರಿಸುವಂತೆ ಬಿಡುಗಡೆಗೂ ಮೊದಲು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ ನಡೆದಿತ್ತು. ಅಭಿಯಾನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಆಮೀರ್ ಖಾನ್ ದಯವಿಟ್ಟು ಸಿನಿಮಾ ನೋಡಿ ಎಂದು ಪ್ರೇಕ್ಷಕರನ್ನು ವಿನಂತಿಸಿದ್ದರು.
ಇದನ್ನೂ ಓದಿ: 'ಲಾಲ್ ಸಿಂಗ್ ಚಡ್ಡಾ' ಬಹಿಷ್ಕರಿಸುವಂತೆ ಟ್ವಿಟ್ಟರ್ ಟ್ರೆಂಡ್: ಅಮೀರ್ ಖಾನ್ ಮನವಿ ಹೀಗಿದೆ..
ಚಿತ್ರ ಬಿಡುಗಡೆಯ ನಂತರವೂ ಅದರ ಸುತ್ತ ಪರ, ವಿರೋಧದ ಚರ್ಚೆಗಳು ನಡೆಯುತ್ತಲೇ ಇವೆ. ಇನ್ನೊಂದಡೆ ಲಾಲ್ ಸಿಂಗ್ ಚಡ್ಡಾ ಚಲನಚಿತ್ರದ ವಿರುದ್ಧ ಹಿಂದೂ ಸಂಘಟನೆಯ ಸದಸ್ಯರು ಗುರುವಾರ ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದ್ದರು. ಚಿತ್ರದಲ್ಲಿ ಹಿಂದೂ ದೇವತೆಗಳನ್ನು ಆಮೀರ್ ಖಾನ್ ಗೇಲಿ ಮಾಡಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಉತ್ತರ ಪ್ರದೇಶದಲ್ಲಿ ಅದನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು.
ಅಮೀರ್ ಖಾನ್ ವಿರುದ್ಧ ದೂರು: 'ಲಾಲ್ ಸಿಂಗ್ ಚಡ್ಡಾ' ಚಿತ್ರದಲ್ಲಿ 'ಭಾರತೀಯ ಸೇನೆಗೆ ಅಗೌರವ' ತೋರಿದ್ದಾರೆ ಎಂಬ ಆರೋಪದ ಮೇಲೆ ಅಮೀರ್ ಖಾನ್, ಪ್ಯಾರಾಮೌಂಟ್ ಪಿಕ್ಚರ್ಸ್ ಮತ್ತು ಇತರ ಹಲವರ ವಿರುದ್ಧ ದೆಹಲಿ ಮೂಲದ ವಕೀಲರು ಶುಕ್ರವಾರ ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಅವರಿಗೆ ದೂರು ಸಲ್ಲಿಸಿದ್ದಾರೆ. ಅವರು ತಮ್ಮ 'ಲಾಲ್ ಸಿಂಗ್ ಚಡ್ಡಾ' ಚಿತ್ರದಲ್ಲಿ ಭಾರತೀಯ ಸೇನೆಗೆ ಅಗೌರವ ತೋರಿದ್ದಾರೆ ಮತ್ತು ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಲಾಲ್ಸಿಂಗ್ ಚಡ್ಡಾ ಬಾಕ್ಸ್ ಆಫೀಸ್ ಕಲೆಕ್ಷನ್: ಮೊದಲ ದಿನವೇ ಕಳಪೆ ಪ್ರದರ್ಶನ