ಬಾಲಿವುಡ್ ನಟ ಅಮೀರ್ ಖಾನ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 'ಮಿಸ್ಟರ್ ಪರ್ಫೆಕ್ಷನಿಸ್ಟ್ ಆಫ್ ಬಾಲಿವುಡ್' 58 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹಿಟ್ ಸಿನಿಮಾಗಳನ್ನು ನೀಡಿ ಭಾರತ ಚಿತ್ರರಂಗದ ಫೇಮಸ್ ನಟರಲ್ಲಿ ಒಬ್ಬರಾಗಿದ್ದಾರೆ. 1965 ರಲ್ಲಿ ಜೀನತ್ ಹುಸೇನ್ ಮತ್ತು ಮೊಹಮ್ಮದ್ ಅಮೀರ್ ಹುಸೇನ್ ಖಾನ್ ದಂಪತಿಗೆ ಜನಿಸಿದ ಅಮೀರ್, ಒಂಬತ್ತು ಫಿಲ್ಮ್‌ಫೇರ್ ಪ್ರಶಸ್ತಿ, ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಎಎಸಿಟಿಎ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಅಲ್ಲದೇ 2003 ರಲ್ಲಿ ಪದ್ಮಶ್ರೀ ಪ್ರಶಸ್ತಿ ಮತ್ತು 2010 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಸುಮಾರು ಮೂರು ದಶಕಗಳ ಕಾಲ ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನೀಡಿರುವ ಅಮೀರ್ ಖಾನ್ ನಿರ್ದೇಶಕ ಮತ್ತು ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ಹೀಗಾಗಿಯೇ ಅವರಿಂದು ಬಾಲಿವುಡ್ನ ಮೇರು ನಟರಾಗಿದ್ದಾರೆ. ಅವರ ಕೆಲವೊಂದು ಹಿಟ್ ಸಿನಿಮಾಗಳು ಈ ಕೆಳಗಿನಂತಿದೆ.
ಸರ್ಪರೋಶ್: 1999 ರ ಆಕ್ಷನ್ ಡ್ರಾಮಾ ಚಲನಚಿತ್ರ ಸರ್ಪರೋಶ್ ಆಗಿದೆ. ಜಾನ್ ಮ್ಯಾಥೂ ಕಥೆ ಬರೆದು ನಿರ್ದೇಶಿಸಿದ್ದಾರೆ. ಅಮೀರ್ ಖಾನ್ ಪೊಲೀಸ್ ಅಧಿಕಾರಿಯಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ನಾಸಿರುದ್ಧೀನ್ ಶಾ, ಸೋನಾಲಿ ಬೆಂದ್ರೆ, ಮುಕೇಶ್ ರಿಷಿ, ಶ್ರೀ ವಲ್ಲಭ ವ್ಯಾಸ, ಪ್ರದೀಪ್ ರಾವತ್ ಸೇರಿದಂತೆ ಅನೇಕ ಕಲಾವಿದರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಲಗಾನ್: ಅಮೀರ್ ಖಾನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಲಗಾನ್ ಸಿನಿಮಾ 2001 ರಲ್ಲಿ ತೆರಕಂಡಿತು. ಈ ಚಿತ್ರವನ್ನು ಅಶುತೋಷ್ ಗೋವಾರಿಕರ್ ಬರೆದು ನಿರ್ದೇಶಿಸಿದ್ದಾರೆ. ಅಲ್ಲದೇ ಸ್ವತಃ ಅಮೀರ್ ಖಾನ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಲಗಾನ್ ಅತಿ ಹೆಚ್ಚು ಗಳಿಕೆಯೊಂದಿಗೆ ಮೆಚ್ಚುಗೆ ಪಡೆದುಕೊಂಡಿತು. ಈ ಸಿನಿಮಾವು ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರ ವಿಭಾಗದಲ್ಲಿ ಅಕಾಡೆಮಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿತ್ತು.
ಇದನ್ನೂ ಓದಿ: ಎಸ್ಆರ್ಕೆ ಅಪ್ಪುಗೆ ನಿರೀಕ್ಷೆಯಲ್ಲಿ ಗುನೀತ್ ಮೊಂಗಾ.. ಪಠಾಣ್ ನಟನಿಗೆ ಧನ್ಯವಾದ ಅರ್ಪಿಸಿದ ರಾಜಮೌಳಿ
ದಿಲ್ ಚಹ್ತಾ ಹೈ: 2001 ರಲ್ಲಿ ತೆರೆಕಂಡ ದಿಲ್ ಚಹ್ತಾ ಹೈ ಕಾಮಿಡಿ ಸಿನಿಮಾವಾಗಿದೆ. ಫರ್ಹಾನ್ ಅಕ್ತಾರ್ ಈ ಸಿನಿಮಾಗೆ ಕಥೆ ಬರೆದು ನಿರ್ದೇಶಿಸಿದ್ದಾರೆ. ಇದರಲ್ಲಿ ಚಿತ್ರೀಕರಿಸಲಾದ ಸಂಭಾಷಣೆ, ವಸ್ತ್ರ ವಿನ್ಯಾಸ ಎಲ್ಲವೂ ಯುವ ಪೀಳಿಗೆಯನ್ನು ಆಕರ್ಷಿಸುವಂತಿದೆ. ಹೀಗಾಗಿ ಈ ಸಿನಿಮಾವನ್ನು ಇಂದಿಗೂ ಜನರು ಹೆಚ್ಚಾಗಿ ನೋಡಲು ಇಷ್ಟಪಡುತ್ತಾರೆ.
ರಂಗ್ ದೇ ಬಸಂತಿ: ರಂಗ್ ದೇ ಬಸಂತಿ ಸಿನಿಮಾ 2006 ರಲ್ಲಿ ಬಿಡುಗಡೆಯಾಯಿತು. ಈ ಚಿತ್ರ ಅಮೀರ್ ಖಾನ್ ಅವರಿಗೆ ಹೆಚ್ಚಿನ ಮನ್ನಣೆಯನ್ನು ನೀಡಿತು. ಅವರ ನಟನೆ ಪ್ರೇಕ್ಷಕರಿಗೆ ತಲುಪುವಲ್ಲಿ ಈ ಸಿನಿಮಾ ಸಹಕಾರಿಯಾಯಿತು. ಈ ಚಿತ್ರವನ್ನು ರಾಕೇಶ್ ಓಂಪ್ರಕಾಶ್ ಮೆಹ್ರಾ ನಿರ್ದೇಶಿಸಿ ನಿರ್ಮಿಸಿದ್ದಾರೆ. ಜೊತೆಗೆ ಅವರು ಕೂಡ ಚಿತ್ರದಲ್ಲಿ ನಟಿಸಿದ್ದಾರೆ.
ದಂಗಲ್: 2016 ರ ದಂಗಲ್ ಸಿನಿಮಾ ಅತ್ಯಂತ ಹಿಟ್ ಚಲನಚಿತ್ರವಾಗಿದೆ. ಕುಸ್ತಿ ಕ್ರೀಡೆಗೆ ತನ್ನ ಹೆಣ್ಣುಮಕ್ಕಳನ್ನು ಪ್ರೋತ್ಸಾಹಿಸುವ ಒಬ್ಬ ಜವಾಬ್ದಾರಿಯುತ ತಂದೆಯಾಗಿ ಈ ಸಿನಿಮಾದಲ್ಲಿ ಅಮೀರ್ ಖಾನ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಶಿಸಿದ್ದಾರೆ. ಕೊನೆಯದಾಗಿ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಅಮೀರ್, 2022ರಲ್ಲಿ ಮೂರು ದಶಕಗಳ ಸಿನಿ ವೃತ್ತಿಗೆ ವಿರಾಮ ಹೇಳಿದ್ದಾರೆ.
ಇದನ್ನೂ ಓದಿ: ಆರ್ಆರ್ಆರ್ ಸಾಧನೆಗೆ ಪ್ರತಿಕ್ರಿಯಿಸಲು ಸಿದ್ಧಾರ್ಥ್ ಮಲ್ಹೋತ್ರಾ ಹಿಂದೇಟು? ಅಸಲಿ ವಿಚಾರ ಇಲ್ಲಿದೆ