ಸಿನಿಮಾವೊಂದಕ್ಕೆ 5 ಲಕ್ಷ ಜನರು ಹಣ ಹೂಡಿ ನಿರ್ಮಾಣ ಮಾಡಿದ್ದು ನಿಮಗೆ ಗೊತ್ತಾ? ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. 1976 ರಲ್ಲಿ ತೆರೆಕಂಡ ‘ಮಂಥನ’ ಎಂಬ ಚಿತ್ರಕ್ಕೆ 5 ಲಕ್ಷ ಜನರು ಹಣ ಹೂಡಿಕೆ ಮಾಡಿದ್ದಾರೆ. ಈ ಪ್ರಮಾಣದ ಜನರು ಸೇರಿ ಒಂದು ಚಿತ್ರವನ್ನು ನಿರ್ಮಾಣ ಮಾಡಿದ್ದು ಇದೇ ಮೊದಲು.
ಸಿನಿಮಾ ನಿರ್ಮಾಣಕ್ಕೆ ಯಾವುದೋ ಒಂದು ಸಂಸ್ಥೆ ಅಥವಾ ನಾಲ್ಕೈದು ಕಂಪನಿಗಳು ಸೇರಿ ಹಣ ಹೂಡುವುದು ಸಾಮಾನ್ಯ. ಆದರೆ, ಈ ಪ್ರಮಾಣದ ಜನರು ಸೇರಿ ಒಂದು ಚಿತ್ರಕ್ಕೆ ಹಣ ಹೂಡಿ ನಿರ್ಮಾಣ ಮಾಡಿದ್ದು ನಮ್ಮ ಭಾರತೀಯ ಸಿನಿಮಾ ರಂಗದಲ್ಲಿ ಇತಿಹಾಸ.
ಶ್ವೇತ ಕ್ರಾಂತಿಯ ಪಿತಾಮಹ ಎಂದು ಕರೆಯಲ್ಪಡುವ ವರ್ಗೀಸ್ ಕುರಿಯನ್ ಅವರ ಜೀವನ ಕಥೆಯನ್ನು ಆಧರಿಸಿದ ಚಿತ್ರ ಇದಾಗಿದೆ. ಭಾರತದಲ್ಲಿ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಗಮನಾರ್ಹ ಪ್ರಯತ್ನಗಳನ್ನು ಮಾಡಿದ ಕುರಿಯನ್ ಅವರ ಸಾಧನೆಯನ್ನು ಈ ಚಿತ್ರ ಒಳಗೊಂಡಿದೆ. ಭಾರತೀಯ ಚಲನಚಿತ್ರರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ, ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಶ್ಯಾಮ್ ಬೆನಗಲ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ವರ್ಗೀಸ್ ಅವರ ಆಗಮನದಿಂದ ಗುಜರಾತಿನ ಹೈನುಗಾರರ ಬಾಳಿನಲ್ಲಿ ಹೊಸ ಬೆಳಕು ಮೂಡಿತು. ಇದರೊಂದಿಗೆ ಈ ಚಿತ್ರ ನಿರ್ಮಾಣದಲ್ಲಿ ರೈತರು ಪಾಲ್ಗೊಳ್ಳುವುದು ಸೂಕ್ತ ಎಂಬುದನ್ನು ಶ್ಯಾಮ್ ಬೆನಗಲ್ ಅರಿತಿದ್ದರು. ಅವರ ಆಲೋಚನೆಗೆ ಗುಜರಾತಿನ ಕೋ ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್ ಪಾಲುದಾರರಾಗಿರುವ 5 ಲಕ್ಷ ರೈತರಿಂದ ತಲಾ 2 ರೂ. ಸಂಗ್ರಹ ಮಾಡಿದ್ದರು. ಹಾಗಾಗಿ ಜಗತ್ತಿನಲ್ಲೇ ಇಷ್ಟೊಂದು ಜನ ಸೇರಿ ನಿರ್ಮಿಸಿದ ಮೊದಲ ಕ್ರೌಡ್ ಫಂಡಿಂಗ್ ಚಿತ್ರ ಎಂಬ ದಾಖಲೆಯನ್ನು 'ಮಂಥನ್' ಸೃಷ್ಟಿಸಿದೆ.
ಇದು ನಮ್ಮ ದೇಶದ ಮೊದಲ ಕ್ರೌಡ್ ಫಂಡಿಂಗ್ ಸಿನಿಮಾ. ಈ ಚಿತ್ರ ಯಶಸ್ವಿಯಾಗಲು ಅಂದು ರೈತರು ಎತ್ತಿನ ಗಾಡಿಯಲ್ಲಿ ಥಿಯೇಟರ್ಗಳತ್ತ ಹರಿದಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಗಿರೀಶ್ ಕಾರ್ನಾಡ್, ನಾಸಿರುದ್ದೀನ್ ಷಾ, ಅಮರೀಶ್‌ಪುರಿ, ಸ್ಮಿತಾ ಪಾಟೀಲ್ ಸೇರಿದಂತೆ ಹಲವರು ನಟಿಸಿದ್ದರು. ಈ ಚಿತ್ರವು ಹಲವಾರು ರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಇದನ್ನೂ ಓದಿ: ಪುನೀತ್ ನಟ ಅಷ್ಟೇ ಆಗಿರಲಿಲ್ಲ, ಪರಿಸರ ಪ್ರೇಮಿ ಕೂಡ ಆಗಿದ್ದರು: ಅಪ್ಪು ಬಗ್ಗೆ ಪ್ರಕಾಶ್ ರೈ ಮಾತು